ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಒಣ ಕಸದಲ್ಲಿಯೂ ಮೌಲ್ಯಯುತ ಕಸ ಮತ್ತು ಮೌಲ್ಯರಹಿತ ಕಸಗಳಿದ್ದು, ಈ ಎಲ್ಲಾ ಒಣ ಕಸಗಳ ಸಮರ್ಪಕ ವಿಲೇವಾರಿ ನಿಟ್ಟಿನಲ್ಲಿ ಪೈಲೆಟ್ ಮಾದರಿಯಲ್ಲಿ ಜಿಲ್ಲೆಯ ಆಯ್ದ ಕಡೆಗಳಲ್ಲಿ ಎಂಆರ್‌ಎಫ್ ಘಟಕಗಳನ್ನು ಸ್ಥಾಪಿಸಲಾಗಿದೆ. ಕಸಗಳ ವೈಜ್ಞಾನಿಕ ವಿಲೇವಾರಿಗಾಗಿ ಎಂಆರ್‌ಎಫ್ ಘಟಕಗಳು ಕಾರ್ಯೋನ್ಮುಖವಾಗಿದೆ ಎಂದು ದ.ಕ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅನಂದ ಕೆ. ತಿಳಿಸಿದ್ದಾರೆ.ಪುತ್ತೂರಿನ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕಡಬ ಹಾಗೂ ಸುಳ್ಯ ಸ್ವಚ್ಛಭಾರತ್ ಮಿಷನ್ (ಗ್ರಾ) ಯೋಜನೆಯಡಿ ವಿಎಸ್‌ಪಿ ತಯಾರಿ ಬಗ್ಗೆ ತರಬೇತಿ ಕಾರ್ಯಾಗಾರ ಹಾಗೂ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಪಂಚಾಯತ್‌ಗಳಿಂದ ಎಂಆರ್‌ಎಫ್ ಘಟಕಗಳಿಗೆ ಒಣ ತ್ಯಾಜ್ಯ ಪೂರೈಕೆ ಮಾಡಲು ನಿರ್ದಿಷ್ಟ ದಿನ ನಿಗದಿ ಮಾಡುವ ಬಗ್ಗೆ ಹಾಗೂ ಕಸ ಸಾಗಾಟದ ವಾಹನ ಓಡಾಟದ ಮಾರ್ಗನಕ್ಷೆ ಮಾಡುವುದಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಧ್ಯಕ್ಷ, ಪಿಡಿಒಗಳ ಸಭೆ ಕರೆದು ಕ್ರಮ ಕೈಗೊಳ್ಳಬೇಕು. ಎಂಆರ್‌ಎಫ್ ಘಟಕ ಕಸ ಸಾಗಾಟ ವಾಹನ ಬರುವ ದಿನ ಆಯಾ ಪಂಚಾಯಿತಿಗಳಿಗೆ ಮೊದಲೇ ತಿಳಿದಿರಬೇಕು. ಇಲ್ಲದಿದ್ದರೆ ಕಸ ವಿಲೇವಾರಿ ಸಮರ್ಪಕವಾಗಿ ನಡೆಯಲು ತೊಂದರೆಯಾಗಿ ಅಲ್ಲಿಯೇ ಬಾಕಿಯಾಗಬಹುದು. ಎಲ್ಲಾ ಪಂಚಾಯಿತಿಗಳೂ ಎಂಆರ್‌ಎಫ್ ಜೊತೆಗೆ ಕೊಂಡಿಯಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಆಗ ಉತ್ತಮ ಫಲಿತಾಂಶ ದೊರೆಯಲು ಸಾಧ್ಯವಿದೆ ಎಂದರು.ಕಸದ ಉತ್ಪಾದನೆ ನಿಲ್ಲಿಸುವುದು ಅಸಾಧ್ಯ. ಕಸದ ವರ್ಗಾವಣೆ ಮುಖ್ಯವಲ್ಲ. ವಿಲೇವಾರಿ ಮುಖ್ಯವಾಗಿದ್ದು ಇದಕ್ಕೆ ಸಮರ್ಪಕ ಮೇಲ್ವಿಚಾರಣೆಯ ಅಗತ್ಯವಿದೆ ಎಂದರು.
ದ.ಕ.ಜಿಲ್ಲೆಯಲ್ಲಿ ನಾಲ್ಕು ಕಡೆಗಳಲ್ಲಿ ಎಂಆರ್‌ಎಫ್ ಘಟಕಗಳಿವೆ. ೨೨೩ ಗ್ರಾ.ಪಂ.ಗಳನ್ನು ನಾಲ್ಕು ಘಟಕಗಳಿಗೆ ವಿಭಜಿಸಿ ಅಲ್ಲಿಂದ ಒಣ ಕಸ ಆಯಾ ಘಟಕಗಳಿಗೆ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ. ೬೮ ಗ್ರಾ.ಪಂ.ಗಳಿಗೆ ಕೆದಂಬಾಡಿ ಘಟಕವೂ ಸಿದ್ಧಗೊಂಡಿದ್ದು, ಈ ಘಟಕದಲ್ಲಿ ೭ ಮೆಟ್ರಿಕ್ ಟನ್ ಕಸ ವಿಂಗಡಣೆಗೆಯು ಸಾಮರ್ಥ್ಯ ಹೊಂದಿದೆ. ಆದರೆ ಇದೀಗ ಇಲ್ಲಿಗೆ ೪ ಮೆಟ್ರಿಕ್ ಟನ್ ಮಾತ್ರ ಬರುತ್ತಿದೆ. ರು. ೨.೫೨ ಕೋಟಿ ವೆಚ್ಚದಲ್ಲಿ ಕೆದಂಬಾಡಿ ಘಟಕ ಸಿದ್ದಗೊಂಡಿದೆ ಎಂದು ಅವರು ತಿಳಿಸಿದರು.ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ ತಾಲೂಕಿನಲ್ಲಿ ಸ್ವಚ್ಛತೆಯ ಬಗ್ಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ಪರಿಸರ ಮಾಲಿನ್ಯ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ.ಮಹೇಶ್ವರಿ ಸಿಂಗ್ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿ ಕುರಿತು ಮಾಹಿತಿ ನೀಡಿದರು.ಸುಳ್ಯ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪುತ್ತೂರು ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ದೊಡ್ಡಮನಿ, ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಚೈತ್ರ ಎಸ್ ಆರ್ ಇದ್ದರು.
ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ರವಿಚಂದ್ರ ಯು ವಂದಿಸಿದರು. ನರೇಗಾದ ಭರತ್ ರಾಜ್ ನಿರೂಪಿಸಿದರು. ಜಿಲ್ಲಾ ಸ್ವಚ್ಛ ಭಾರತ್ ಮಿಷನ್ ನೆರವು ಘಟಕ ಸಮಾಲೋಚಕರಾದ ನವೀನ್, ಪವನ್ ಸಹಕರಿಸಿದರು. ಕೆದಂಬಾಡಿ ಎಂಆರ್‌ಎಫ್ ಘಟಕದ ವ್ಯಾಪ್ತಿಗೆ ಒಳಪಟ್ಟ ೬೮ ಗ್ರಾ.ಪಂ.ಗಳ ಅಧ್ಯಕ್ಷ, ಪಿಡಿಒಗಳು ಭಾಗವಹಿಸಿದ್ದರು.