ಕನ್ನಡಪ್ರಭ ವಾರ್ತೆ ಕಾರವಾರ

ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾರವಾರ ರೋಟರಿ ಕ್ಲಬ್ ವತಿಯಿಂದ ಕಾರವಾರದ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗೆ ಪಿಂಕ್ ಬಬಲ್ ಅಸನದ ವ್ಯವಸ್ಥೆಯನ್ನು ಸುಮಾರು ₹1 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಗುರುವಾರ ಕಾರವಾರ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಪಿಂಕ್ ಬಬಲ್ ವಿಶ್ರಾಂತಿ ಆಸನ ವ್ಯವಸ್ಥೆ ಉದ್ಘಾಟನೆ ಮತ್ತು ಕಾರವಾರ-ಮಡಗಾಂವ್ ಕಾಯಂ ರೈಲನ್ನು ಸ್ವಾಗತಿಸಿ ಮಾತನಾಡಿದರು.ಮಹಿಳಾ ಪ್ರಯಾಣಿಕರು ರೈಲು ಬರುವವರೆಗೆ ಸುರಕ್ಷಿತ ಹಾಗೂ ಸುಸಜ್ಜಿತ ವಾತಾವಾರಣದಲ್ಲಿ ನಿರಾಳವಾಗಿ ಕಾಯಲು ಅನುಕೂಲವಾಗುವಂತೆ ಪಿಂಕ್ ಬಬಲ್ ಅಸನದ ವ್ಯವಸ್ಥೆಯನ್ನು ನಿರ್ಮಿಸಲಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮಹಿಳೆಯರಿಗೆ ತೊಂದರೆ ನೀಡುವವರ ವಿರುದ್ಧ ರೈಲ್ವೆ ಪೊಲೀಸರಿಂದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.ಮಡಗಾಂವ್ ಕಾರವಾರ ತಾತ್ಕಾಲಿಕ ಶೆಟಲ್ ರೀತಿಯಲ್ಲಿ ಸಂಚಾರ ಮಾಡುತ್ತಿದ್ದ ರೈಲನ್ನು ಕಾಯಂಗೊಳಿಸುವ ಪ್ರಕ್ರಿಯೆ ನಡೆದಿದ್ದು, ಮಡಗಾಂವ್‌ನಲ್ಲಿ ಇಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸೋಮಣ್ಣ ಮಡಗಾಂವದಿಂದ ಕಾರವಾರಕ್ಕೆ ಬರುವ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಬೀಳ್ಕೊಡಲಾಗಿದೆ ಎಂದರು.

ಕಾರವಾರ ನಿಲ್ದಾಣದಲ್ಲಿ ಮುಂದಿನ ದಿನಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗಲು ಹಿರಿಯ ನಾಗರಿಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಲಿಫ್ಟ್‌ ಅಳವಡಿಸಲಾಗುವುದು ಎಂದರು.

ಅಂಕೋಲಾ ಮತ್ತು ಹುಬ್ಬಳಿ ರೈಲು ಖಂಡಿತವಾಗಿ ಮಾಡಲಾಗುತ್ತದೆ. ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ಕಲ್ಪಿಸಲು ಸರ್ವೇ ಕಾರ್ಯ ಮಾಡಲಾಗಿದೆ. ಕೊಂಕಣ ರೈಲ್ವೆ ಜಮ್ಮು ಕಾಶ್ಮಿರದಿಂದ ವಿದೇಶದವರೆಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಮಂಗಳೂರಿನಿಂದ ಬಾಂಬೆವರೆಗೆ ಇರುವ ಕೊಂಕಣ ರೈಲ್ವೆಗೆ ಮಂಗಳೂರು, ಉಡುಪಿ, ಉತ್ತರ ಕನ್ನಡ ಸಂಸದರು ಸೇರಿ ಉತ್ತರ ಕನ್ನಡ ಜಿಲ್ಲೆಯ ಕೊಂಕಣ ರೈಲ್ವೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುವಂತೆ ಪ್ರಯತ್ನ ಮಾಡಲಾಗುತ್ತಿದ್ದು, ಕುಮಟಾ ಮತ್ತು ಗೋಕರ್ಣ ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ಲಾಟ್ ಫಾರಂ ಮಾಡಲಾಗಿದ್ದು, ಉದ್ಘಾಟನೆಗೆ ಸಿದ್ದವಾಗಿದೆ. ಮುರುಡೇಶ್ವರ ಮತ್ತು ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಈ ಬಾರಿ ಕೇಂದ್ರದ ಹಣಕಾಸು ಇಲಾಖೆಯಿಂದ ಕೊಂಕಣ ರೈಲ್ವೆಗೆ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಸುಮಾರು ₹7 ಸಾವಿರ ಕೋಟಿಯನ್ನು ಅನುದಾನವನ್ನು ತರಲು ಪ್ರಯತ್ನಿಸಲಾಗುತ್ತಿದ್ದು, ಈ ಅನುದಾನದಲ್ಲಿ ಕೊಂಕಣ ರೈಲ್ವೆಯ ಸಮಗ್ರ ಸುಧಾರಣೆ ಮಾಡಲಾಗುವುದು. ರೈಲ್ವೆ ನಿಲ್ದಾಣಗಳಲ್ಲಿ ಮೂಲ ಸೌಕರ್ಯಗಳ ಜೊತೆ ರೈಲ್ವೆ ನಿಲ್ದಾಣಗಳಲ್ಲಿ ಎರಡನೆ ಪ್ಲಾಟ್ ಫಾರಂ ಮಾಡುವ ಪ್ರಯತ್ನವನ್ನು ಮೂರು ಜಿಲ್ಲೆಯ ಸಂಸದರಿಂದ ಮಾಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಎಂಜಿನಿಯರ್ ಎಲ್. ಪ್ರಕಾಶ್, ಉಪ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಪಿ. ಚಿತ್ರಸೇನ್, ವಿಭಾಗೀಯ ಸಂಕೇತ ಮತ್ತು ದೂರಸಂಪರ್ಕ ಎಂಜಿನಿಯರ್ ಸುದರ್ಶನ್ ರೆಡ್ಡಿ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜಿ.ಡಿ. ಮೀನಾ, ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಸುಧಾ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ, ಜಿಪಂ ಉಪಕಾರ್ಯದರ್ಶಿ ಅಲ್ಲಾಭಕ್ಷ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮತ್ತಿತರರು ಇದ್ದರು.