ತಮ್ಮಡಹಳ್ಳಿ ಕೆರೆಯಿಂದ ಆನೆಮಡುವಿನಕೆರೆಗೆ ಪೈಪ್‌ಲೈನ್ ಕಾಮಗಾರಿ ಮಾಡುವುದನ್ನು ಖಂಡಿಸಿ ರೈತ ಸಂಘಟನೆಗಳು, ಉಡಿಗಾಲ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಮ್ಮಡಹಳ್ಳಿ ಕೆರೆಯಿಂದ ಆನೆಮಡುವಿನಕೆರೆಗೆ ಪೈಪ್‌ಲೈನ್ ಕಾಮಗಾರಿ ಮಾಡುವುದನ್ನು ಖಂಡಿಸಿ ರೈತ ಸಂಘಟನೆಗಳು, ಉಡಿಗಾಲ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.ಗ್ರಾಮದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಶಾಮಿಯಾನ ಹಾಕಿ ಬೆಳಗ್ಗೆಯಿಂದ ಮದ್ಯಾಹ್ನ 3 ಗಂಟೆತನಕ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ನೀರಾವರಿ ಇಲಾಖೆ ಇಇ ಗುರುಪ್ರಸಾದ್ ಭೇಟಿ ಮೇಲಾಧಿಕಾರಿಗಳ ಜೊತೆ ಮಾತನಾಡಿ 2- 3 ದಿನಗಳೊಳಗೆ ರೈತರು, ಗ್ರಾಮಸ್ಥರ ಸಭೆ ಕರೆದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನಾನಿತರು ಪ್ರತಿಭಟನೆ ಕೈ ಬಿಟ್ಟರು.
ನಂಜದೇವನಪುರ ಎಲ್ಲೆಯಲ್ಲಿ ಸ.ನಂ155 ಆನೆ ಮಡುವಿನ ಕೆರೆಯಾಗಿದ್ದು ಸರಿ ಸುಮಾರು 44 ಎಕರೆ ಗಿಂತ ಮೇಲ್ಪಟ್ಟಿದ್ದು ಅದು ಸಣ್ಣ ನೀರಾವರಿ ಇಲಾಖೆಗೆ ಸೇರಿರುತ್ತದೆ. ಈ ಆನೆ ಮಡುವಿನ ಕೆರೆಗೆ ಪ್ರಕೃತಿ ದತ್ತವಾದ ಉಡಿಗಾಲ ಗ್ರಾಮದ ಚಿಕ್ಕಮೋರಿ ಕಾಲುವೆ ಮುಖಾಂತರ ಕಾವೇರಿ ನೀರಾವರಿ ನಿಗಮದವರು ಗುರುತ್ವಾಕರ್ಷಣ ದ ಮೂಲಕ ನೀರು ಹರಿಸಿ ಕೆರೆಯನ್ನು ತುಂಬಿಸುತ್ತಿದ್ದಾರೆ ಎಂದು ದೂರಿದರು.ಆನೆ ಮಡುವಿನ ಕೆರೆಯು 20 ಕೆರೆಗಳನ್ನು ತುಂಬಿಸುವ ಯೋಜನೆಯಲ್ಲಿ ಸೇರಿದ್ದು, ತಾಂತ್ರಿಕ ದೋಷದಿಂದ ಸುಮಾರು ವರ್ಷಗಳು ನೀರನ್ನು ತುಂಬಿಸಲು ಆಗದೇ ತದನಂತರದಲ್ಲಿ ದೋಷವನ್ನು ಸರಿಪಡಿಸಿ ಕೆರೆಗೆ ನೀರನ್ನು ಹರಿಸಿ ತುಂಬಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ತಮ್ಮಡಹಳ್ಳಿ ಕೆರೆಯಿಂದ ಪೈಪ್ ಲೈನ್ ಮೂಲಕ ನೀರು ತುಂಬಿಸುತ್ತೇವೆ ಎಂದು ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಇತ್ತೀಚಿನ ದಿನಗಳಲ್ಲಿ ಕಾವೇರಿ ನೀರಾವರಿ ನಿಗಮದವರು ಅಧಿಕಾರ ದುರುಪಯೋಗ ಮಾಡಿಕೊಂಡು ಮತ್ತು ಕಾನೂನು ಬಾಹಿರವಾಗಿ ತಮ್ಮ ಇಚ್ಛೆಗೆ ಅನುಸಾರದಂತೆ ಪೈಪ್‌ಲೈನನ್ನು ಮಾಡಲು ಯೋಜನೆ ರೂಪಿಸಿ ಗುತ್ತಿಗೆಗೆ ಕೊಟ್ಟಿರುತ್ತಾರೆ. ಅವರು ಮಾಡುತ್ತಿರುವುದು ಅಕ್ಷಮ್ಯ ವೆಂದು ನಾವು ದಾಖಲೆಗಳ ಸಮೇತ ಸಾಭೀತು ಮಾಡಲು ಸಿದ್ಧರಿದ್ದೇವೆ. ಕಾವೇರಿ ನೀರಾವರಿ ನಿಗಮದವರು ಮತ್ತು ಸಣ್ಣ ನೀರಾವರಿ ಇಲಾಖೆಯವರ ವಿರುದ್ದ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಒಂದು ವೇಳೆ ನಾಲಾ ಮುಖಾಂತರ ನೀರುಹರಿಸುವುದು ಬಿಟ್ಟು ಪೈಪ್‌ಲೈನ್ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮದ ಮುಖಂಡರಾದ ಮಾದೇಶ್ ಕಟ್ಟೆಹೊಲ, ಯು.ಎಂ.ಪ್ರಭುಸ್ವಾಮಿ, ಉಡಿಗಾಲ ಕುಮಾರಸ್ವಾಮಿ, ಮಂಜು, ಬಿ. ಗುರುಪ್ರಸಾದ್ ಎಚ್ಚರಿಸಿದರುರೈತರು, ಗ್ರಾಮಸ್ಥರು ಭಾಗವಹಿಸಿದ್ದರು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಯಿತು.