ರಮಣಶ್ರೀ ಗಾರ್ಡೇನಿಯಾ ಲೇಔಟ್‌ಗೆ ಪ್ರವಾಹ ತಪ್ಪಿಸಲು ಪೈಪ್‌ಲೈನ್‌

| Published : May 21 2024, 01:50 AM IST

ರಮಣಶ್ರೀ ಗಾರ್ಡೇನಿಯಾ ಲೇಔಟ್‌ಗೆ ಪ್ರವಾಹ ತಪ್ಪಿಸಲು ಪೈಪ್‌ಲೈನ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ರಮಣಶ್ರೀ ಗಾರ್ಡೇನಿಯಾ ಲೇಔಟ್‌ನಲ್ಲಿ ಮಳೆ ನೀರಿನಿಂದ ಪ್ರವಾಹ ಸೃಷ್ಟಿ ಆಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಭರವಸೆ ನೀಡಿದ್ಧಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯಲಹಂಕ ವಲಯದ ರಮಣಶ್ರೀ ಗಾರ್ಡೇನಿಯಾ ಲೇಔಟ್‌, ನಾರ್ಥ್‌ ವುಡ್‌ ವಿಲ್ಲಾಗಳಲ್ಲಿ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ಸೃಷ್ಟಿ ಆಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ಮಳೆ ನೀರು ಶೇಖರಣೆಯಾಗದಂತೆ ಪೈಪ್‌ ಅಳವಡಿಸಿ ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಪುಟ್ಟೇನಹಳ್ಳಿ ಕೆರೆಗೆ ನೀರು ಹರಿಸಲು ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಶನಿವಾರ ಸುರಿದ ಮಳೆಯಿಂದಾಗಿ ಜಲಾವೃತವಾದ ಈ ಎರಡು ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ಅರಣ್ಯ ಇಲಾಖೆ ಸುಪರ್ದಿಯಲ್ಲಿನ ಪುಟ್ಟೇನಹಳ್ಳಿ ಕೆರೆಯ ಪಕ್ಕದಲ್ಲಿಯೇ ರಮಣಶ್ರೀ ಗಾರ್ಡೇನಿಯಾ ಲೇಔಟ್‌, ನಾರ್ಥ್‌ ವುಡ್‌ ವಿಲ್ಲಾಗಳು ನಿರ್ಮಾಣಗೊಂಡಿವೆ. ಹೀಗಾಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರವಾಹ ಪರಿಸ್ಥಿತಿಯನ್ನು ತಪ್ಪಿಸಲು ರಾಜಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ರಾಜಕಾಲುವೆಯನ್ನು ಪುಟ್ಟೇನಹಳ್ಳಿ ಕೆರೆಗೆ ಸಂಪರ್ಕಿಸಲು ವನ್ಯಜೀವಿ ಮಂಡಳಿಯಿಂದ ಅನುಮತಿ ದೊರೆತಿಲ್ಲ. ಆ ಹಿನ್ನೆಲೆಯಲ್ಲಿ ಪರ್ಯಾಯವಾಗಿ 520 ಮೀ. ಉದ್ದದ 1.600 ಎಂಎಂ ಸುತ್ತಳತೆಯ ಪೈಪ್‌ ಅಳವಡಿಸಿ ಸದ್ಯ ಇರುವ ರಾಜಕಾಲುವೆಯಿಂದ ಕೆರೆಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಈ ಕುರಿತು ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಮಣಶ್ರೀ ಲೇಔಟ್ ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಯಾವುದೇ ಮನೆಗಳು ನಿರ್ಮಾಣವಾಗಿರದ ಕಾರಣ, ಸಮಸ್ಯೆ ಕಂಡು ಬಂದಿರಲಿಲ್ಲ. ಆದರೆ ಈಗ ವಿಲ್ಲಾ ಹಾಗೂ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿ ಮಳೆ ನೀರು ನಿಲ್ಲುತ್ತಿದೆ. ಸದ್ಯ ತಾತ್ಕಾಲಿಕವಾಗಿ ಮೋಟಾರು ಪಂಪ್‌ಗಳ ಮೂಲಕ ನೀರನ್ನು ಹೊರ ಹಾಕಲಾಗುತ್ತಿದೆ. ಮುಂದೆ ಮತ್ತೆ ಮಳೆ ನೀರು ನಿಲ್ಲುವುದನ್ನು ತಡೆಯಲು ಮೋಟಾರು ಪಂಪನ್ನು ಅಲ್ಲಿಯೇ ಮೀಸಲಿರಿಸಲಾಗುವುದು ಎಂದರು.

ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀಕುಮಾರ್ ಪುಷ್ಕರ್, ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ನಯೀಮ್ ಮೊಹ್ಮದ್ ಮೊಮಿನ್ ಇದ್ದರು.ಮಳೆಗೆ 6 ಸಾವಿರ ರಸ್ತೆ ಗುಂಡಿ ಸೃಷ್ಟಿಕನ್ನಡಪ್ರಭ ವಾರ್ತೆ ಬೆಂಗಳೂರುಕಳೆದ ಕೆಲದಿನಗಳಿಂದ ಸುರಿದ ಮಳೆಯಿಂದಾಗಿ ನಗರದಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ 6 ಸಾವಿರಕ್ಕೂ ಹೆಚ್ಚಿನ ರಸ್ತೆ ಗುಂಡಿಗಳು ಹೊಸದಾಗಿ ಸೃಷ್ಟಿಯಾಗಿದ್ದು, ಅವುಗಳನ್ನು 10 ದಿನಗಳಲ್ಲಿ ಮುಚ್ಚಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತ ಮಳೆಯಿಂದಾಗಿ ನಗರದಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲ 8 ವಲಯಗಳಲ್ಲಿ ತಲಾ 500ರಿಂದ 800 ರಸ್ತೆ ಗುಂಡಿಗಳು ಸೃಷ್ಟಿಯಾಗಿದೆ. ವಾರ್ಡ್‌ ರಸ್ತೆಗಳಲ್ಲಿಯೇ 5,500ಕ್ಕೂ ಹೆಚ್ಚಿನ ಗುಂಡಿಗಳು ಸೃಷ್ಟಿಯಾಗಿದೆ. ಉಳಿದಂತೆ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಲ್ಲಿ 670 ಗುಂಡಿಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಬಿಟುಮಿನ್ ಕೋಲ್ಡ್‌ ಮಿಕ್ಸ್‌ ಜತೆಯಲ್ಲಿ ಮುಚ್ಚಲಾಗುವುದು. ಅದರ ಜತೆಗೆ 66 ಬೃಹತ್‌ ಗುಂಡಿಗಳು ಸೃಷ್ಟಿಯಾಗಿದ್ದು, ಅವುಗಳನ್ನು ಶೀಘ್ರದಲ್ಲಿ ಮುಚ್ಚುವಂತೆ ವಲಯ ಆಯುಕ್ತರಿಗೆ ಸೂಚಿಸಲಾಗಿದೆ. ನಿತ್ಯ 500ಕ್ಕೂ ಹೆಚ್ಚಿನ ಗುಂಡಿಗಳನ್ನು ಮುಚ್ಚುವಂತೆ ಗುರಿ ನಿಗದಿ ಮಾಡಿದ್ದು, ಮುಂದಿನ 10 ದಿನಗಳಲ್ಲಿ ಎಲ್ಲ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.