ಕೈದಿಗಳ ಹೊರತಂದು ಪೈಪಲೈನ್‌ ಕೆಲಸ

| Published : Mar 10 2025, 12:21 AM IST

ಸಾರಾಂಶ

ಜಮಖಂಡಿ ತಾಲೂಕು ಉಪ ಕಾರಾಗೃಹದ ಕೈದಿಗಳನ್ನು ಹೊರಗೆ ಕರೆತಂದು ಕೆಲಸ ಮಾಡಿಸಿದ ಘಟನೆ ಜಮಖಂಡಿಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಕನ್ನಡಪ್ರಭವಾರ್ತೆ ಜಮಖಂಡಿ

ತಾಲೂಕು ಉಪ ಕಾರಾಗೃಹದ ಕೈದಿಗಳನ್ನು ಹೊರಗೆ ಕರೆತಂದು ಕೆಲಸ ಮಾಡಿಸಿದ ಘಟನೆ ಜಮಖಂಡಿಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ನಗರದ ಹೊರವಲಯದಲ್ಲಿರುವ ಕೇಂದ್ರ ಉಪಕಾರಾಗ್ರಹದಲ್ಲಿರುವ ಕೊಲೆ ಪ್ರಕರಣದ ಆರೋಪಿಗಳನ್ನು ಯಾವುದೇ ಭದ್ರತೆ ಇಲ್ಲದೆ ಕಾರಾಗೃಹದ ಹೊರಗೆ ಕರೆತಂದಿರುವದು ಚರ್ಚೆಗೆ ಗ್ರಾಸವಾಗಿದೆ. ಜೈಲರ್‌ ವಿ.ಡಿ. ಕುಂಬಾರ ಹಾಗೂ ಸಹಾಯಕ ಸುರೇಶಗೌಡ ಪಾಟೀಲ ಇತರರು ಸ್ಥಳದಲ್ಲಿಯೇ ಇದ್ದು ಕೆಲಸ ಮಾಡಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನಗರದ ಹೊರವಲಯದಲ್ಲಿರುವ ತಾಲೂಕು ಉಪ ಕಾರಾಗೃಹದ ವಿಚಾರಣಾಧೀನ ಕೈದಿಗಳಾದ ಈರಪ್ಪ ಪುಟಾಣಿ, ನಾಗಪ್ಪ ಪುಟಾಣಿ ಇವರನ್ನು ಕಾರಾಗೃಹದಿಂದ 200ಮೀ ದೂರ ಕರೆದುಕೊಂಡು ಹೋಗಿ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಸೇತುವೆ ಕೆಳಗೆ ಪೈಪ್‌ಲೈನ್ ರಿಪೇರಿ ಹಾಗೂ ಕಲ್ಲು-ಮಣ್ಣು ತುಂಬಿಸುವ ಕೆಲಸ ಮಾಡಿಸಲಾಗಿದೆ. ಖಾಸಗಿ ಕಾರ್ಮಿಕರಿಂದ ಕೆಲಸ ಮಾಡಿಸುವ ಬದಲು ಕೈದಿಗಳಿಂದ ಕಾರಾಗೃಹದ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ಕೆಲಸ ಹಾಗೂ ಅರಣ್ಯ ಜಾಗದಲ್ಲಿ ಕಲ್ಲು-ಮಣ್ಣು ತುಂಬಲು ಬಳಸಿಕೊಂಡಿರುವ ಘಟನೆ ಜರುಗಿದೆ.

ತಾಲೂಕಿನ ಮಧುರಖಂಡಿ ಗ್ರಾಮದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದಲ್ಲಿ 2 ವರ್ಷದಿಂದ ಆರೋಪಿಗಳು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಇಂತವರನ್ನು ಕಾರಾಗೃಹದಿಂದ ಹೊರಗೆ ಕರೆತಂದು ಕೈದಿಗಳಿಂದ ಕೆಲಸ ಮಾಡಿಸುವುದು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜೈಲರ ಹಾಗೂ ಸಿಬ್ಬಂದಿ ಮುಂದೆ ಕೈದಿಗಳು ಹೆದ್ದಾರಿಯಲ್ಲಿ ಓಡಾಡಿರುವ ವಿಡಿಯೋ ವೈರಲ್‌ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.