ಕೆರೆಗಳಲ್ಲಿ ನೀರು ಇಲ್ಲದ ಪರಿಣಾಮ ಈ ಭಾಗದ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿದ್ದವು
ಕನ್ನಡಪ್ರಭ ವಾರ್ತೆ ಹುಣಸೂರು
ಮೂರು ವರ್ಷಗಳಿಂದ ಮಳೆಗಾಲ ಬಂದರೂ ನೀರು ಕಾಣದೆ ಬತ್ತಿ ನಿಂತಿದ್ದ ಸೋಮನಹಳ್ಳಿ ಹಾಗೂ ಮರದೂರು ಭಾಗದ ಕೆರೆಗಳು ಮತ್ತೆ ಜೀವ ಪಡೆಯುವ ಹಂತಕ್ಕೆ ಬಂದಿವೆ. ನೀರಿಗಾಗಿ ಪರದಾಡುತ್ತಿದ್ದ ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಶಾಸಕ ಜಿ.ಡಿ. ಹರೀಶ್‌ಗೌಡ ಅವರು ಮೂರು ಕೋಟಿ ವೆಚ್ಚದ ಪೈಪ್ ಲೈನ್‌ಕಾಮಗಾರಿಗೆ ಚಾಲನೆ ನೀಡುವ ಮೂಲಕ ಕೆರೆಗಳಿಗೆ ನೀರು ಹರಿಸುವ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.ಕೆರೆಗಳಲ್ಲಿ ನೀರು ಇಲ್ಲದ ಪರಿಣಾಮ ಈ ಭಾಗದ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿದ್ದವು. ಅಂತರ್ಜಲ ಮಟ್ಟ ಕುಸಿದ ಪರಿಣಾಮ ರೈತರು, ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದರು. ಈ ಸಂದರ್ಭದಲ್ಲಿ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ದೊರೆತಿರುವುದು ಈ ಭಾಗದ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಸೋಮನಹಳ್ಳಿ ಸೇರಿದಂತೆ ನಾಲ್ಕು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಈ ಹಿಂದೆಯೇ ರೂಪಿಸಲಾಗಿತ್ತು. ಆದರೆ ಮೊದಲು ಅಳವಡಿಸಲಾಗಿದ್ದ ಪೈಪ್ ಲೈನ್‌ಪದೇ ಪದೆ ಹಾಳಾಗುತ್ತಿದ್ದ ಕಾರಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಆಗಿರಲಿಲ್ಲ. ಪರಿಣಾಮವಾಗಿ ಕಳೆದ ಮೂರು ವರ್ಷಗಳಿಂದ ಕೆರೆಗಳು ನೀರಿಲ್ಲದೆ ಬತ್ತಿ ನಿಂತಿದ್ದವು.
ಈ ನಡುವೆ ಸಮಸ್ಯೆಯ ಗಂಭೀರತೆಯನ್ನು ಅರಿತ ಜಿ.ಡಿ. ಹರೀಶ್‌ಗೌಡ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಶಾಶ್ವತ ಪರಿಹಾರಕ್ಕೆ ಮುಂದಾದರು. ಸುಮಾರು 2.5 ಕಿ.ಮೀ. ಉದ್ದದ ಎಂಎಸ್‌ಪೈಪ್ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಿ ಸರ್ಕಾರದಿಂದ ಮೂರು ಕೋಟಿ ರು. ಅನುದಾನ ಮಂಜೂರು ಮಾಡಿಸಿಕೊಂಡರು. ಇದೀಗ ಕಾಮಗಾರಿ ಆರಂಭವಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಕೆರೆಗಳಿಗೆ ನಿರಂತರವಾಗಿ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.ಶಾಸಕ ಜಿ.ಡಿ. ಹರೀಶ್ ಗೌಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೆರೆಗಳು ತುಂಬಿದರೆ ರೈತರ ಬದುಕು ಹಸನಾಗುತ್ತದೆ. ಸುತ್ತಮುತ್ತಲಿನ ಹಳ್ಳಿಗಳ ಜಲಮಟ್ಟ ಹೆಚ್ಚಾಗುತ್ತದೆ. ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿರುವುದರಿಂದ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ. ಹಲವು ವರ್ಷಗಳ ನಿರೀಕ್ಷೆ ಸಾಕಾರಗೊಳ್ಳುತ್ತಿರುವುದರಿಂದ ಈ ಭಾಗದ ರೈತರು, ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಕೆರೆಗಳು ಕೇವಲ ನೀರಿನ ಸಂಗ್ರಹಣಾ ತಾಣಗಳಲ್ಲ, ಗ್ರಾಮೀಣ ಬದುಕಿನ ಜೀವನಾಡಿಗಳಾಗಿವೆ. ಅಂತಹ ಜೀವನಾಡಿಗಳಿಗೆ ಮತ್ತೆ ನೀರು ಹರಿಸುವ ಪ್ರಯತ್ನಕ್ಕೆ ಚಾಲನೆ ದೊರೆತಿರುವುದು ಸೋಮನಹಳ್ಳಿ ಮತ್ತು ಮರದೂರು ಭಾಗದ ಜನರಿಗೆ ಹೊಸ ಭರವಸೆಯ ಬೆಳಕಾಗಿ ಪರಿಣಮಿಸಿದೆ ಎಂದು ಹೇಳಿದರು.
ಎಇಇ ರೇಣುಕಾಸ್ವಾಮಿ, ಪಿಡಿಒ ಮಹದೇವಸ್ವಾಮಿ, ಮುಖಂಡರಾದ ಕೆಂಗಯ್ಯ, ಶಿವಕುಮಾರ್, ಗೋವಿಂದೇಗೌಡ, ದಿನೇಶ್, ಗವಿನಾಯಕ, ರಾಜೇಶ್, ಲಿಂಗೇಗೌಡ ಇದ್ದರು.ವಿವಿಧ ಕಾಮಗಾರಿಗಳಿಗೆ ಚಾಲನೆ
ತಾಲೂಕಿನ ವಿವಿಧೆಡೆ ಹಲವು ಕಾಮಗಾರಿಗಳಿಗೆ ಶಾಸಕ ಜಿ.ಡಿ. ಹರೀಶ್‌ಗೌಡ ಅವರು ಚಾಲನೆ ನೀಡಿದರು. ಪ್ರಮುಖವಾಗಿ ಬನ್ನಿಕುಪ್ಪೆ ಅಂಗನವಾಡಿ ಕೇಂದ್ರ, ಡ್ಡೇಗೌಡನ ಕೊಪ್ಪಲಿನ ಮುಖ್ಯರಸ್ತೆಯ ಚರಂಡಿ ನಿರ್ಮಾಣಕ್ಕೆ 25 ಲಕ್ಷ ಹಾಗೂ ಇದೇ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ 15 ಲಕ್ಷ ರು. ಮರಳಯ್ಯನ ಕೊಪ್ಪಲಿನ ಸಿಸಿ ರಸ್ತೆಗೆ 30 ಲಕ್ಷ, ಮಾದಳ್ಳಿ ಸಿಸಿ ರಸ್ತೆಗೆ 25 ಲಕ್ಷ, ಮೂಡಲಕೊಪ್ಪಲು ಸಿಸಿ ರಸ್ತೆಗೆ 30 ಲಕ್ಷ ಹಾಗೂ ಒಕ್ಕಲಿಗರ ಸಮುದಾಯ ಭವನಕ್ಕೆ ಅನುದಾನ ಮಂಜೂರು ಮಾಡಿಸಿ, ಸದರಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಮಾಡುವುದಷ್ಟೇ ನನಗೆ ಮುಖ್ಯವಾಗಿದ್ದು, ಇದರಲ್ಲಿ ರಾಜಕೀಯ ಮಾಡುವ ಯಾವ ಅಗತ್ಯವೂ ನನಗಿಲ್ಲ ಮತ್ತು ಅದನ್ನು ಮಾಡುವುದೂ ಇಲ್ಲ. ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ ಎಂದರು.
-------------ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅನುದಾನದ ಕೊರತೆ ಉಂಟಾಗಿದ್ದು, 224 ಶಾಸಕರಿಗೆ ಅನುದಾನ ಬಾರದ ಪರಿಸ್ಥಿತಿ ಉಂಟಾಗಿದೆ. ಕಾಂಗ್ರೆಸ್ ನಿಂದ 5 ರಿಂದ 6 ಬಾರಿ ಗೆದ್ದಿರುವ ಶಾಸಕರು ಕೂಡ ಅನುದಾನ ಬಿಡುಗಡೆ ಆಗದ ಬಗ್ಗೆ ಬೇಸರ ಹೊಂದಿದ್ದಾರೆ. ಆದರೆ ಇದೀಗ ಹೊಸ ಸರ್ಕಾರ ರಚನೆಯಾಗಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ಸಚಿವರನ್ನು ಮತ್ತೊಮ್ಮೆ ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಮನವಿ ಮಾಡುತ್ತೇನೆ.
- ಜಿ.ಡಿ. ಹರೀಶ್‌ಗೌಡ, ಶಾಸಕ, ಹುಣಸೂರು.