ಹೀಂಗ ನಮ್ಮನ್ನ ಅಪಮಾನ ಮಾಡಬಾರದಿತ್ತು, ಚಿಲ್ರೆ ಕಾಸು ಕೈಗೆ ತುರುಕಿ ಭಿಕ್ಷುಕರನ್ನಾಗಿ ಮಾಡಲು ಹೊಂಟದೇನ್ ಈ ಸರ್ಕಾರ? ಪರಿಹಾರ ಕೊಡೋ ಮನಸ್ಸಿದ್ರೂ ಖಜಾನೆಯಲ್ಲಿ ದುಡ್ಡಿಲ್ಲಂತ ಸುಮ್ಮನಿರಬಹುದಿತ್ತು. ಕಂಗೆಟ್ಟವರನ್ನೇ ಭಿಕ್ಷುಕರಾಗಿಸುವ, ಜೀತದಾಳಾಗಿಸುವ ಧೋರಣೆ ಸರ್ಕಾರದ್ದು, ಎಂಬುದು ಅನ್ನದಾತನ ಅಳಲು.
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಹೀಂಗ ನಮ್ಮನ್ನ ಅಪಮಾನ ಮಾಡಬಾರದಿತ್ತು, ಚಿಲ್ರೆ ಕಾಸು ಕೈಗೆ ತುರುಕಿ ಭಿಕ್ಷುಕರನ್ನಾಗಿ ಮಾಡಲು ಹೊಂಟದೇನ್ ಈ ಸರ್ಕಾರ? ಪರಿಹಾರ ಕೊಡೋ ಮನಸ್ಸಿದ್ರೂ ಖಜಾನೆಯಲ್ಲಿ ದುಡ್ಡಿಲ್ಲಂತ ಸುಮ್ಮನಿರಬಹುದಿತ್ತು. ಕಂಗೆಟ್ಟವರನ್ನೇ ಭಿಕ್ಷುಕರಾಗಿಸುವ, ಜೀತದಾಳಾಗಿಸುವ ಧೋರಣೆ ಸರ್ಕಾರದ್ದು, ಎಂಬುದು ಅನ್ನದಾತನ ಅಳಲು.
ಬರಗಾಲ ವಿಚಾರ ಚರ್ಚಿಸಲು ಇತ್ತೀಚೆಗೆ 4 ದಿನಗಳ ವಿಶೇಷ ಅಧಿವೇಶನ ನಡೆಸಿ ರೈತರಿಗೆ 2, 500 ರು. ಇನ್‌ಪುಟ್ ಸಬ್ಸಿಡಿ ಘೋಷಿಸಿರುವ ಸರ್ಕಾರದ ಕ್ರಮ ತೊಗರಿ ಕಣಜದ ರೈತರನ್ನು ಕೆರಳಿಸಿದ್ದು, ರೈತ ವಿರೋಧಿ ಧೋರಣೆ ಖಂಡಿಸುತ್ತಿದ್ದಾರೆ. ಅಧಿವೇಶನ ಕರೆದು ತೀರ್ಮಾನ ಮಾಡ್ತೀವಿ ಎಂದು ನೀಡಿದ್ದ ಹೇಳಿಕೆ ತೊಗರಿ ರೈತ ಸಮೂಹದಲ್ಲಿ ಹೊಸ ನಿರೀಕ್ಷೆ ಮೂಡಿಸಿತ್ತು.ಸಿಎಂ ಹೇಳಿಕೆಯ ಹಿನ್ನೆಲೆ ವಿಶೇಷ ಅಧಿವೇಶನ ಐತಿಹಾಸಿಕ ಪರಿಹಾರ ಅಥವಾ ಬೆಳೆ ಸಾಲ ಮನ್ನಾ ಘೋಷಣೆಗೆ ಸಾಕ್ಷಿಯಾಗಬಹುದೆಂದು ರೈತ ಸಮುದಾಯ ಇಟ್ಟುಕೊಂಡಿದ್ದ ನಿರೀಕ್ಷೆ ಇದೀಗ ಹುಸಿಯಾಗಿದೆ. ಕೇವಲ ₹2,500 ಪರಿಹಾರ ಘೋಷಿಸಿ ಸರ್ಕಾರ ರೈತರ ನಿರೀಕ್ಷೆಗಳನ್ನು ಹೊಸಕಿ ಹಾಕಿದೆ.
ಆರಂಭದಲ್ಲಿ ಮಳೆ ಬಂತು, ಬೆಳೆ ನಿರೀಕ್ಷೆಯಲ್ಲಿ ಹೆಸರು, ಉದ್ದು , ಅಲಸಂಡೆ ಬಿತ್ತಿದ್ದ ರೈತರಿಗೆ ನಿರಾಶೆ ಕಾದಿತ್ತು. ಮಳೆ ಸಂಪೂರ್ಣ ಕೈಕೊಟ್ಟಾಗ ಹೌಹಾರಿದ ರೈತರು ಮತ್ತೆ ಹೊಲವನ್ನೆಲ್ಲ ಹರಗಿ ತೊಗರಿ ಬಿತ್ತಿದರು. ಸ್ವಲ್ಪ ಮಳೆ ಸುರಿದಂತಾಗಿ ಕೈ ಕೊಟ್ಟು 2 ನೇ ಬಾರಿಗೆ ಭಾರಿ ಹಾನಿಯಾಗಿ, ಎಕರೆಗೆ 15 ರಿಂದ 20 ಸಾವಿರ ನಷ್ಟ ಅನುಭವಿಸಿದ್ದಾರೆ.ರೈತರು ಬರದಿಂದ ಕಂಗೆಟ್ಟಿರುವಾಗ ಸರ್ಕಾರ ಪ್ರತಿ ಎಕರೆಗೆ ಕನಿಷ್ಠ ಪಕ್ಷ 25 ಸಾವಿರ ರು. ನೆರವಾದರೂ ನೀಡುವ ನಿರೀಕ್ಷೆಯಲ್ಲಿದ್ದರು. ಆದರೆ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಸರ್ಕಾರದ ಪರಿಹಾರ ಘೋಷಣೆಯಾಗಿದೆ ಎಂದು ಪ್ರಗತಿಪರ ರೈತ ಚಂದ್ರಶೇಖರ ಹಿರೇಮಠ ಕನ್ನಡಪ್ರಭ ಜೊತೆ ಮಾತನಾಡಿ ಅಸಮಾಧಾನ ಹೊರಹಾಕಿದ್ದಾರೆ.
ಬೀಜ, ಗೊಬ್ಬರ, ಆಳು, ಉಳುಮೆ, ಬಿತ್ತನೆಗೆ ಬಳಸುವ ಟ್ರಾಕ್ಟರ್ ಬಾಡಿಗೆ ಇವೆಲ್ಲದಕ್ಕೂ ಸಾಕಷ್ಟು ವೆಚ್ಚವಾಗುತ್ತದೆ. ಲೆಕ್ಕ ಹಾಗೆ ಬೆಳೆಯುತ್ತಲೇ ಹೋಗುತ್ತದೆ. ಹೀಗಿದ್ದರೂ ಚಿಲ್ಲರೆ ಪರಿಹಾರ ನೀಡಲು ಹೊರಟಿರೋದು ರೈತರನ್ನ ಕೆರಳಿಸಿರೋದಂತೂ ನಿಜ.----
ಸಣ್ಣ, ಅತಿಸಣ್ಣ, ದೊಡ್ಡ ಎಲ್ಲಾ ರೈತರಿಗೂ 2, 500 ರು. ನೀಡುವ ಮೂಲಕ ಅನ್ನದಾತರನ್ನೇ ಜೀತಕ್ಕೆ ಇಟ್ಟುಕೊಳ್ಳುವಂಥ ಪ್ರಯತ್ನ ಇದಾಗಿದೆ. ಇದು ಸರ್ಕಾರಕ್ಕೆ ಶೋಭೆ ತರುವಂಥ ಕೆಲಸವಲ್ಲ. ಸರ್ಕಾರ ತಕ್ಷಣ ಪ್ರತಿ ಎಕರೆಗೆ 25 ಸಾವಿರ ರು. ಬೆಳೆಹಾನಿ ಪರಿಹಾರ ಘೋಷಿಸಿ ನೊಂದ ರೈತರ ನೆರವಿಗೆ ಧಾವಿಸಲಿ.- ಚಂದ್ರಶೇಖರ ಹಿರೇಮಠ, ಅಧ್ಯಕ್ಷರು, ಶ್ರಮಜೀವಿಗಳ ವೇದಿಕೆ, ಕಲಬುರಗಿ
----ರೈತರ ಗೋಳು ಇವರಿಗೆ ಗೊತ್ತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಆಳಂದ, ಅಫಜಲ್ಪುರ, ಜೇವರ್ಗಿ ಇಲ್ಲೆಲ್ಲಾ ಸಾಲಸೋಲಕ್ಕಂಜಿ ರೈತರು ಸಾವನ್ನಪ್ಪುತ್ತಿದ್ದಾರೆ. ಭೀಕರ ಬರಗಾಲ ಆವರಿಸಿದ್ದರೂ, ಚಿಲ್ಲರೆ ಪರಿಹಾರ ನೀಡುತ್ತಿದ್ದಾರೆ. ಆಳುವವರ ಈ ಚಿಲ್ಲರೆ ಧೋರಣೆಯನ್ನು ನಾವು ರೈತರು ಬಲವಾಗಿ ಖಂಡಿಸುತ್ತೇವೆ.
- ಶರಣಬಸಪ್ಪ ಮಮಶೆಟ್ಟಿ, ಅಧ್ಯಕ್ಷರು, ಪ್ರಾಂತ ರೈತ ಸಂಘ--
ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರವೇ ಬರ ಪರಿಹಾರ ಎಕರೆಗೆ ಕನಿಷ್ಠ ₹8,000 ನೀಡಬೇಕಾಗುತ್ತದೆ. ಬೊಕ್ಕಸ ಖಾಲಿ ನೆಪ ಹೇಳುತ್ತಿರುವುದು ಹಾಸ್ಯಾಸ್ಪದ. ರೈತರ ಕೈ ಹಿಡಿಯಬೇಕಾದ ಸರ್ಕಾರ, ರೈತರ ಕೈಗೆ ಚೊಂಬು ನೀಡಿದೆ. ರೈತರು ಪರಿಹಾರಕ್ಕಾಗಿ ಭಿಕ್ಷೆ ಬೇಡುತ್ತಿಲ್ಲ, ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಬೇರೆ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಮುಂದೂಡಿ, ಆ ಹಣದಲ್ಲೇ ರೈತರಿಗೆ ಎಕರೆಗೆ ₹25,000 ಪರಿಹಾರ ನೀಡಬೇಕುರಾಜಕುಮಾರ್ ಪಾಟೀಲ್ ತೇಲ್ಕೂರ್, ಮಾಜಿ ಶಾಸಕರು, ಸೇಡಂ
----ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ, ಕಳೆದ ವರ್ಷ ಪರಿಹಾರದಲ್ಲಿ ರೈತರಿಗೆ ಮಾಡಿದ ತಾರತಮ್ಯ ಈ ವರ್ಷ ಮಾಡದೆ ರಾಜಕೀಯ ರಹಿತವಾಗಿ, ಪಕ್ಷಾತೀತವಾಗಿ ಕೂಡಲೇ ಎಲ್ಲಾ ರೈತರಿಗೆ ಪರಿಹಾರ ವಿತರಿಸಬೇಕು .
ನೊಂದ ರೈತರು, ತೊಗರಿ ಕಣಜ, ಕಲಬುರಗಿ