ಸದಸ್ಯರೇ ಅಲ್ಲದವರಿಗೆ ನಿವೇಶನ: 16ರಿಂದ ಅಹವಾಲು ಸ್ವೀಕಾರ

| Published : Jan 10 2024, 01:45 AM IST

ಸಾರಾಂಶ

ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 2006 ರಿಂದ 2014 ರವರೆಗೆ ನಿವೇಶನಗಳನ್ನು ಸದಸ್ಯರಲ್ಲದವರಿಗೆ ಮಾರಾಟ ಮಾಡಲಾಗಿದೆ. ಈ ಅಕ್ರಮದ ವಿಚಾರಣೆ ನಡೆದು 74 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶವಾಗಿದೆ. ಈ ಹಿನ್ನೆಲೆ ಜ.16 ರಿಂದ 19ರವರೆಗೆ 4 ದಿನಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಭದ್ರಾವತಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಭದ್ರಾವತಿ

ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 2006 ರಿಂದ 2014 ರವರೆಗೆ ನಿವೇಶನಗಳನ್ನು ಸದಸ್ಯರಲ್ಲದವರಿಗೆ ಮಾರಾಟ ಮಾಡಲಾಗಿದೆ. ಈ ಅಕ್ರಮದ ವಿಚಾರಣೆ ನಡೆದು 74 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶವಾಗಿದೆ. ಈ ಹಿನ್ನೆಲೆ ಜ.16 ರಿಂದ 19ರವರೆಗೆ 4 ದಿನಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 22 ಜೂನ್, 1989ರಲ್ಲಿ ಸಂಘವು ಸ್ಥಾಪನೆಯಾಗಿದೆ. ಪ್ರತಿ ಸದಸ್ಯ ₹1000 ಬೆಲೆಯ ಷೇರುಗಳನ್ನು ಖರೀದಿಸಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಜನ ಷೇರುಗಳನ್ನು ಪಡೆದಿದ್ದರು. 386 ಜನರಿಗೆ ಈ ಹಿಂದೆಯೇ ನಿವೇಶನಗಳನ್ನು ಅಲಾಟ್ ಮಾಡಲಾಗಿದೆ. ಬಹಳಷ್ಟು ಜನರಿಗೆ ನಿವೇಶನಗಳನ್ನು ನೋಂದಣಿ ಮಾಡಿಕೊಡಲಾಗಿತ್ತು. ಮೈಸೂರು ಕಾಗದ ಕಾರ್ಖಾನೆಯವರಿಂದ ಸರ್ವೇ ನಂ. 14ರಲ್ಲಿ ಸುಮಾರು 144 ಎಕರೆ ಜಾಗದಲ್ಲಿ 25 ಎಕರೆ ಜಾಗ 1992ರ ಫೆ.13ರಲ್ಲಿ ಸಂಘವು ಕ್ರಯಕ್ಕೆ ಪಡೆದಿದೆ. ₹35,201.40 ರಂತೆ ಒಟ್ಟು ₹8,80,035 ಹಣವನ್ನು ಕಂಪನಿಗೆ ಜಮಾ ಮಾಡಲಾಗಿತ್ತು. ನಿವೇಶನ ಅಲಾಟ್ ಆದವರೂ ಸೇರಿದಂತೆ ಕೆಲವು ಸದಸ್ಯರು ಸಂಘದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು ಎಂದರು.

ಸೈಟ್‌ ಮಾರಿ ಅವ್ಯವಹಾರ:

ಎಂಪಿಎಂ ಬಡಾವಣಿಯಲ್ಲಿ ಒಟ್ಟು 416 ನಿವೇಶನಗಳನ್ನು ವಿಂಗಡನೆ ಮಾಡಿದ್ದು, ಅದರಲ್ಲಿ ವಿವಿಧ ರೀತಿಯ ಅಳತೆಯ ನಿವೇಶನಗಳನ್ನು ಮಾಡಲಾಗಿದೆ. 30/50ರ 358 ಮತ್ತು 30/40ರ 24 ಹಾಗೂ ಅಸ್ಪಷ್ಠ ಅಳತೆಯ 34 ನಿವೇಶನಗಳು ಸೇರಿ ಒಟ್ಟು 416 ನಿವೇಶನಗಳಿವೆ. ಈ ಪೈಕಿ 342 ನಿವೇಶನಗಳು ಸದಸ್ಯರಿಗೆ ಹಂಚಿಕೆಯಾಗಿದೆ. 74 ನಿವೇಶನಗಳನ್ನು ಅಂದಿನ ಸಂಘದ ಪದಾಧಿಕಾರಿಗಳು 2006 ರಿಂದ 2014 ರವರೆಗೆ ಸದಸ್ಯರಲ್ಲದವರಿಗೆ ಮಾರುವ ಮೂಲಕ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಸಂಘಕ್ಕೆ ಹಣ ಜಮೆ ಮಾಡಿಲ್ಲ:

ಮಾರಾಟ ಮಾಡಿದ ಹಣವನ್ನೂ ಕೂಡ ಸಂಘಕ್ಕೆ ಜಮಾ ಮಾಡದೇ ಅನ್ಯಾಯ ಮಾಡಿರುವುದು ತಿಳಿದುಬಂದ ಮೇಲೆ ಸಹಾಯಕ ನಿಬಂಧಕರಿಗೆ 2018ರ ಸೆ.12ರಲ್ಲಿ ದೂರು ನೀಡಲಾಗಿತ್ತು. ಅವರು 2018ರ ನ.27ರಲ್ಲಿ ವಿಚಾರಣಾಧಿಕಾರಿಗಳನ್ನು ನೇಮಿಸಿ ಕಲಂ 64ರಡಿ ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಸದಸ್ಯರೇ ಅಲ್ಲದವರಿಗೆ ನಿವೇಶನಗಳನ್ನು ಮಾರಿರುವುದು ಸಾಬೀತಾಗಿದೆ. ಅಲ್ಲದೇ, ಸಂಘದ ಹೆಸರಿನಲ್ಲಿ ಇನ್ನೊಂದು ಬಡಾವಣೆ ಮಾಡುವುದಾಗಿ ಕೆಲವರ ಬಳಿ ಹಣ ಪಡೆದು, ಸಂಘದ ಲೆಟರ್ ಹೆಡ್ ಮತ್ತು ರಸೀದಿಗಳನ್ನು ದುರುಪಯೋಗ ಮಾಡಿರುವುದು ವಿಚಾರಣೆಯಲ್ಲಿ ಬಯಲಾಗಿದೆ ಎಂದರು.

ಸಹಾಯಕ ನಿಬಂಧಕರು ಕಲಂ 68ರಂತೆ 10 ಅಕ್ಟೋಬರ್ 2019ರಲ್ಲಿ ಆದೇಶ ಮಾಡಿ, ಸಂಘದ ಸದಸ್ಯರಲ್ಲದವರಿಗೆ ಮಾರಾಟ ಮಾಡಿದ್ದ 74 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು ನಿಯಮಾನುಸಾರ ಹಂಚಿಕೆ ಮಾಡುವಂತೆ ಹಾಗೂ ಸಂಘದ ಲೆಟರ್ ಹೆಡ್ ಮತ್ತು ರಸೀದಿಗಳನ್ನು ದುರುಪಯೋಗ ಮಾಡಿರುವ ಶ್ರೀನಿವಾಸ ಮತ್ತು ಮಂಜುನಾಥ ಹಾಗೂ ಮಾಸಿಲಾಮಣಿ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಹಾಗೂ ಸಂಘಕ್ಕೆ ನಷ್ಟವಾದ ಹಣ ವಸೂಲು ಮಾಡುವಂತೆ ತಿಳಿಸಿದ್ದಾರೆ. ಇದರಂತೆ ಸಂಘವು ಮುನ್ನಡೆದಿದ್ದು, ಮೊದಲ ಕಲಂ 29ಸಿ ಅಂತೆ ಆಡಳಿತ ಮಂಡಳಿಯಲ್ಲಿದ್ದ ಆರೋಪಿತರನ್ನು ವಿಚಾರಣೆ ನಡೆಸಿ, ಆದೇಶದಂತೆ ಅನರ್ಹತೆ ಆಗಿದ್ದಾರೆ. ಅನರ್ಹಗೊಂಡವರಲ್ಲಿ ಒಬ್ಬರು ಮೇಲ್ಮನವಿ ಸಲ್ಲಿಸಿದ್ದು, ಅಲ್ಲಿಯೂ ಸಂಘದ ಪರವಾಗಿಯೇ ತೀರ್ಪು ಬಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ವಿ.ಗೋವಿಂದಪ್ಪ, ಕಾರ್ಯದರ್ಶಿ ಎಚ್.ವೀರಭದ್ರಪ್ಪ, ಎಸ್.ಆರ್. ಸೋಮಶೇಖರ್, ಪರಮಶಿವ, ಎಚ್. ಆನಂದಮೂರ್ತಿ, ಅಭಯಕುಮಾರ್, ಸಾರಮ್ಮ ಇನ್ನಿತರರು ಉಪಸ್ಥಿತರಿದ್ದರು.

- - -

ಬಾಕ್ಸ್‌-1 ದಾಖಲೆಗಳ ಪರಿಶೀಲನೆಗೆ ಉಪಸಮಿತಿ 74 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಇದ್ದರೂ ಆ ನಿವೇಶನಗಳನ್ನು ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನದಂತೆ ಕೊಂಡುಕೊಂಡವರನ್ನು ಒಮ್ಮೆ ಕರೆಸಿ, ಅವರ ದಾಖಲೆಗಳ ಪರಿಶೀಲಿಸಿ ಮತ್ತು ಅವರ ಅಹವಾಲನ್ನು ಕೇಳಬೇಕೆಂದು ಸಂಘದಲ್ಲಿ ಉಪಸಮಿತಿ ನೇಮಕ ಮಾಡಲಾಗಿದೆ. ಆ ಸಮಿತಿಯವರಾದ ಹಾಲಿ ನಿರ್ದೇಶಕರೂ ಆಗಿರುವ ಎಸ್.ಆರ್. ಸೋಮಶೇಖರ್, ಪರಮಶಿವ, ರಂಗಸ್ವಾಮಿ, ಎಚ್. ಆನಂದಮೂರ್ತಿ, ಅಭಯಕುಮಾರ್ ಖಡ್ಡು ಮತ್ತು ಲೋಕಾನಂದ ರಾವ್ ಅವರು 2024ರ ಜ.16ರಿಂದ ಜ.19ರವರೆಗೆ 4 ದಿನಗಳ ಕಾಲ ಬೆಳಗ್ಗೆ 10.30 ರಿಂದ 12.30 ರವರೆಗೆ ಹಾಜರಿದ್ದು, ಬಂದವರ ದಾಖಲೆಗಳನ್ನು ಮತ್ತು ಅಹವಾಲು ದಾಖಲಿಸಲಿದ್ದಾರೆ ಎಂದು ವಿವರಿಸಿದರು.

- - - ಬಾಕ್ಸ್‌-2 ಶೇ.90 ಹಣ ವಂಚನೆ

ಕಲಂ 69 ಹಾಗೂ ಕಲಂ 103ರಂತೆ ಆಗಿನ ನಿರ್ದೇಶಕರ ಮೇಲೆ ವಸೂಲಾತಿಗಾಗಿ ದಾವೆ ಹಾಕಿದ್ದು, ಅದು 2022ರ ಜುಲೈ 29ರಿಂದ ವಿಚಾರಣೆ ನಡೆಯುತ್ತಿದೆ. ಬಹುಮುಖ್ಯವಾಗಿ 74 ನಿವೇಶನಗಳ ಮಾರಾಟ ಮಾಡಿದ ಹಣದಲ್ಲಿ ಶೇ.90ರಷ್ಟು ಹಣ ಅಂದಿನ ಆಡಳಿತ ಮಂಡಳಿಯವರು ಸಂಘಕ್ಕೆ ಜಮಾ ಮಾಡಿಲ್ಲ. ಅದರ ಅಂದಿನ ಮೌಲ್ಯವೇ ಸುಮಾರು ₹74 ಲಕ್ಷಗಳಾಗಿದ್ದು, ಪ್ರಸ್ತುತ ಅದರ ಮೌಲ್ಯ ಸುಮಾರು ₹15 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು.

- - - -ಡಿ9ಬಿಡಿವಿಟಿ:

ಭದ್ರಾವತಿಯಲ್ಲಿ ಮಂಗಳವಾರ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.