ಸಾರಾಂಶ
ಬ್ಯಾಡಗಿ: ವಕ್ಫ್ ಬೋರ್ಡ್ ಮುಂದಿಟ್ಟುಕೊಂಡು ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರವಿರಲಿ, ರೈತರ ಮೇಲೆ ನಡೆಯುತ್ತಿರುವ ಇಂತಹ ಗೊಡ್ಡು ಕಾನೂನು ಬೆದರಿಕೆಗಳನ್ನು ನಿಲ್ಲಿಸದಿದ್ದರೇ, ಸಚಿವ ಜಮೀರ ಅಹ್ಮದಗೆ ಹಾವೇರಿ ಜಿಲ್ಲೆಗೆ ಪ್ರವೇಶಕ್ಕೆ ನಿಷೇಧ ಹೇರಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.
ಪಟ್ಟಣದ ರೈತ ಸಂಘದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಜವಾಗಿಯೂ ವಕ್ಫ ಬೋರ್ಡ್ ಆಸ್ತಿಗಳಾಗಿದ್ದರೇ ಅದನ್ನು ಕಾನೂನು ರೀತ್ಯ ಪಡೆದುಕೊಳ್ಳಲು ನಮ್ಮದು ತಕರಾರಿಲ್ಲ, ಮೊದಲೇ ಜಿಲ್ಲೆಯಾದ್ಯಂತ ಅತೀವೃಷ್ಟಿಯಿಂದ ಕೈಯಿಗೆ ಬಂದಿದ್ದು ಬಾಯಿಗೆ ಬರದಂತಾಗಿದೆ. ರೈತರ ಬದುಕು ಅನಿಶ್ಚತತೆ ಕಡೆಗೆ ಸಾಗುತ್ತಿದ್ದು ರೈತರು ಮುಂದೇನು ಎಂದು ಆತಂಕದಲ್ಲಿರುವಾಗ ಜಿಲ್ಲೆಯಲ್ಲಿ 1649 ಆಸ್ತಿಗಳ ಮೇಲೆ ಪಹಣಿ ಕಾಲಂ ನಂ.11ರಲ್ಲಿ ವಕ್ಫ್ ಬೋರ್ಡ್ ಹೆಸರನ್ನು ನಮೂದಿಸುವಂತೆ ಸೂಚಿಸಿದ್ದು ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು.ಇನ್ನೂ ವಕ್ಫ್ ಬೋರ್ಡ್ ಹುಟ್ಟಿರಲಿಲ್ಲ: ರುದ್ರಗೌಡ ಕಾಡನಗೌಡ್ರ ಮಾತನಾಡಿ, ನಮ್ಮ ರೈತರ ಬಳಿಯಿರುವ ಜಮೀನುಗಳು ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್‌ನಿಂದ ಕಬಳಿಸಿದ್ದಲ್ಲ, ಈಗಲೂ ವಕ್ಫ್ ಬೋರ್ಡ್ ಕಬಳಿಸಲು ಮುಂದಾದಲ್ಲಿ ಬಿಡಲು ಸಾಧ್ಯವಿಲ್ಲ, ನಮ್ಮ ಕೃಷಿಭೂಮಿಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇದರಲ್ಲಿನ ಬಹಳಷ್ಟು ಆಸ್ತಿಗಳು ದೇಶಕ್ಕೆ ಸ್ವಾತಂತ್ರ್ಯಕ್ಕೆ ಸಿಗುವ ಮುನ್ನ ದೇಶದ ಸಂವಿಧಾನ ರಚನೆಗೂ ಮುನ್ನವೇ ನಮ್ಮ ಪೂರ್ವಜರಿಂದ ಬಂದಂತಹ ಆಸ್ತಿಗಳಾಗಿದ್ದು ಇಂದಿಗೂ ಖಾತೆ ಕಬ್ಜಾ ಹೊಂದಿದ್ದೇವೆ. ಆದರೆ ನಿನ್ನೆ, ಮೊನ್ನೆ ಹುಟ್ಟಿದ ವಕ್ಫ್ ಬೋರ್ಡ್ ಜಮೀನು ನಮ್ಮದು ಎಂದು ಅದೇಗೆ ಸಾಬೀತುಪಡಿಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ:ಗಂಗಣ್ಣ ಎಲಿ ಮಾತನಾಡಿ, ಜನಪ್ರತಿನಿಧಿಗಳ ಅಣತಿಯಂತೆ ಕಾನೂನು ಬಿಟ್ಟು ಕೆಲಸ ನಿರ್ವಹಿಸಿದರೇ ಜಿಲ್ಲಾಧಿಕಾರಿಗಳು ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ದಾಖಲಿಸಿ ಭೂಮಾಲೀಕರಿಗೆ ನಿಮ್ಮ ದಾಖಲೆಗಳನ್ನು ತನ್ನಿ ಎನ್ನುವುದು ಎಷ್ಟರಮಟ್ಟಿಗೆ ಸರಿ? ಇದರಿಂದ ರೈತರು ಎಷ್ಟು ಹೈರಾಣಾಗಬೇಕಾಗುತ್ತದೆ? ಇಂತಹ ಕನಿಷ್ಠ ಜ್ಞಾನ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗಿಲ್ಲವೇ, ಸರ್ಕಾರವೇ ದಾಖಲೆಗಳನ್ನು ಪರಿಶೀಲಿಸಿ ವಕ್ಫ್ ಬೋರ್ಡ್‌ಗೆ ನೀವೇ ಉತ್ತರ ನೀಡುವ ಕೆಲಸವಾಗಬೇಕು ಎಂದರು.ರೈತ ವಿರೋಧಿ ಧೋರಣೆಗಳಿಗೆ ತಕ್ಕ ಉತ್ತರ: ಮೌನೇಶ ಕಮ್ಮಾರ ಮಾತನಾಡಿ, ಸರ್ಕಾರ ಯಾವುದೇ ಇರಲಿ ರೈತ ವಿರೋಧಿ ಧೋರಣೆಗಳಿಗೆ ತಕ್ಕ ಉತ್ತರ ನೀಡದೆ ಬಿಡುವುದಿಲ್ಲ, ಜೀವ ಬಿಟ್ಟೇವು ಒಂದಿಂಚು ಭೂಮಿ ಬಿಡುವುದಿಲ್ಲ, ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈತರ ಹಿತಾಸಕ್ತಿ ಕಾಪಾಡಬೇಕಾಗಿದ್ದರೇ ಸಂಬಂಧಿಸಿದ ಶಾಸಕರು ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಲ್ಲೇಶಪ್ಪ ಡಂಬಳ, ನಿಂಗಪ್ಪ ಹೆಗ್ಗಣ್ಣನವರ, ಚಿಕ್ಕಪ್ಪ ಛತ್ರದ, ಪ್ರಕಾಶ ಸಿದ್ದಪ್ಪನವರ ಸೇರಿದಂತೆ ಇನ್ನಿತರರಿದ್ದರು.