ಮಾಗಡಿಯಲ್ಲಿ ಅನಧಿಕೃತ ಬ್ಯಾನರ್ ಗಳ ಹಾವಳಿ

| Published : Aug 07 2024, 01:12 AM IST / Updated: Aug 07 2024, 01:13 AM IST

ಸಾರಾಂಶ

ಬೆಂಗಳೂರಿನಲ್ಲಿ ಹೈಕೋರ್ಟ್ ಸಾರ್ವಜನಿಕ ಸ್ಥಳಗಳಲ್ಲಿ ಪ್ಲೆಕ್ಸ್, ಬ್ಯಾನರ್ ಗಳನ್ನು ಹಾಕಬಾರದೆಂದು ಆದೇಶ ಮಾಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆಯಿಂದ ಅನುಮತಿ ಪಡೆದು ಬ್ಯಾನರ್ ಗಳನ್ನು ಹಾಕಬಹುದು, ಆದರೆ ಇದನ್ನು ಲೆಕ್ಕಿಸದೆ ಅನಧಿಕೃತ ಬ್ಯಾನರ್ ಗಳ ಹಾವಳಿ ಹೆಚ್ಚಾಗಿದ್ದು,ಇದನ್ನು ತಡೆಯುವ ಕೆಲಸ ಪುರಸಭೆ ಅಧಿಕಾರಿಗಳು ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಮಾಗಡಿ

ಅನಧಿಕೃತ ಫ್ಲೆಕ್ಸ್ ಗಳು ಮತ್ತು ಬ್ಯಾನರ್ ಗಳಿಂದ ಪಟ್ಟಣದ ಸೌಂದರ್ಯವೇ ಹಾಳಾಗುವಂತಾಗಿದ್ದು,

ಪುರಸಭೆಯಿಂದ ಅನುಮತಿ ಪಡೆಯದೆ ಅನಧಿಕೃತ ಬ್ಯಾನರ್ ಗಳ ಹಾವಳಿಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ.

ರಾಜಕಾರಣಿಗಳನ್ನು ಒಲೈಕೆ ಮಾಡಲು ಅವರ ಬೆಂಬಲಿಗರು ದೊಡ್ಡ ದೊಡ್ಡ ಪ್ಲೆಕ್ಸ್ ಗಳನ್ನು ಪ್ರಮುಖ ಸರ್ಕಲ್ ಗಳಲ್ಲಿ ಹಾಕುತ್ತಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದ್ದು, ರಸ್ತೆ ಬದಿಯಲ್ಲಿ ಡಾಂಬರು ರಸ್ತೆಯನ್ನು ಅಗೆದು ಮರದ ಬೊಂಬುಗಳನ್ನು ಹಾಕಿ ದೊಡ್ಡ ಪ್ಲೆಕ್ಸ್ ಗಳನ್ನು ಹಾಕುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪುರಸಭೆಯವರು ಅನಧಿಕೃತವಾಗಿ ಹಾಕುವ ಬ್ಯಾನರ್ ಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ವಾಹನ ಸವಾರರಿಗೂ ಕಿರಿಕಿರಿ ಉಂಟುಮಾಡಿದೆ.

ಪ್ಲೆಕ್ಸ್ ಹಾಕಲು ಪೈಪೋಟಿ:

ದೊಡ್ಡ ದೊಡ್ಡ ಪ್ಲೆಕ್ಸ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲು ಪೈಪೋಟಿ ನಡೆದಿದ್ದು, ರಾಜಕಾರಣಿಗಳ ಬೆಂಬಲಿಗರು ತಮ್ಮ ಅಭಿಮಾನವನ್ನು ಪ್ರದರ್ಶಿಸಲು ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಹಾಕಿಸುವ ಮೂಲಕ ತಮ್ಮ ಅಂದಾಭಿಮಾನನ್ನು ಪ್ರದರ್ಶಿಸುತ್ತಿದ್ದರೂ ಯಾವುದೇ ರೀತಿ ಅನುಮತಿಯನ್ನು ಪಡೆಯದಿರುವುದು ವಿಪರ್ಯಾಸವಾಗಿದೆ.

ಅನುಮತಿ ಕಡ್ಡಾಯ:

ಪುರಸಭೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಗಳನ್ನು ಹಾಕಲು ಅನುಮತಿ ಪಡೆಯಬೇಕು. ಅಡಿ ಲೆಕ್ಕದಲ್ಲಿ ಹಣ ಕಟ್ಟಿ ಎಷ್ಟು ದಿನಕ್ಕೆ ಎಂದು ಅನುಮತಿ ಪಡೆದ ನಂತರವಷ್ಟೇ ಪ್ಲೆಕ್ಸ್ ಕಟ್ಟಬೇಕು. ಆದರೆ ಇದು ಯಾವುದನ್ನು ಲೆಕ್ಕಿಸದೇ ಎಲ್ಲೆಂದರಲ್ಲಿ ಪ್ಲೆಕ್ಸ್ ಗಳನ್ನು ಕಟ್ಟಲಾಗುತ್ತಿದ್ದು, ರಸ್ತೆ ಬದಿಯ ವಿದ್ಯುತ್ ಕಂಬಗಳ ಮೇಲೆ ಬ್ಯಾನರ್ ಗಳನ್ನು ಹಾಕುವ ಮೂಲಕ ಪಟ್ಟಣದ ಸೌಂದರ್ಯಕ್ಕೆ ಹಾನಿ ಉಂಟು ಮಾಡುತ್ತಿದ್ದು, ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸ್ಥಳೀಯ ಮುಖಂಡರಾದ ರಮೇಶ್, ರಾಜು, ಗಿರೀಶ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಹೈಕೋರ್ಟ್ ಸಾರ್ವಜನಿಕ ಸ್ಥಳಗಳಲ್ಲಿ ಪ್ಲೆಕ್ಸ್, ಬ್ಯಾನರ್ ಗಳನ್ನು ಹಾಕಬಾರದೆಂದು ಆದೇಶ ಮಾಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆಯಿಂದ ಅನುಮತಿ ಪಡೆದು ಬ್ಯಾನರ್ ಗಳನ್ನು ಹಾಕಬಹುದು, ಆದರೆ ಇದನ್ನು ಲೆಕ್ಕಿಸದೆ ಅನಧಿಕೃತ ಬ್ಯಾನರ್ ಗಳ ಹಾವಳಿ ಹೆಚ್ಚಾಗಿದ್ದು,ಇದನ್ನು ತಡೆಯುವ ಕೆಲಸ ಪುರಸಭೆ ಅಧಿಕಾರಿಗಳು ಮಾಡಬೇಕಿದೆ.