ಬೇಸಿಗೆಯಲ್ಲೂ ಮೇವು ದೊರೆಯುವ ಯೋಜನೆ ರೂಪಿಸಿ: ಶಾಂತಾರಾಮ ಸಿದ್ದಿ

| Published : Feb 16 2024, 01:45 AM IST

ಬೇಸಿಗೆಯಲ್ಲೂ ಮೇವು ದೊರೆಯುವ ಯೋಜನೆ ರೂಪಿಸಿ: ಶಾಂತಾರಾಮ ಸಿದ್ದಿ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ದನಗರ ಗೌಳಿಗರು ಎದುರಿಸುತ್ತಿರುವ ಸಮಸ್ಯೆ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ವಿಸ್ತೃತವಾಗಿ ಮಾಹಿತಿ ನೀಡಿದರು.

ಯಲ್ಲಾಪುರ: ವಿ.ಪ. ಸದಸ್ಯ ಶಾಂತಾರಾಮ ಸಿದ್ದಿ ಫೆ. ೧೪ರಂದು ನಡೆದ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಾಸವಾಗಿರುವ ದನಗರ ಗೌಳಿ ಸಮಾಜದ ಹೈನುಗಾರಿಕೆ, ಸಮುದಾಯದ ಮೂಲಭೂತ ಸಮಸ್ಯೆ ಮತ್ತು ಕಂದಾಯ ಗ್ರಾಮಗಳ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ.ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಕಾಡು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಹೈನುಗಾರಿಕೆಯನ್ನೇ ಮೂಲ ಕಸುಬನ್ನಾಗಿಸಿಕೊಂಡು ವಾಸಿಸುತ್ತಿರುವ ಗೌಳಿ ಜನಾಂಗಕ್ಕೆ ಇತ್ತೀಚಿನ ದಿನಗಳಲ್ಲಿ ದನಕರುಗಳಿಗೆ ಆಹಾರ ನೀಡುವುದು ಕಷ್ಟವಾಗಿ, ಬೇಸಿಗೆಯಲ್ಲಿ ಒಣ ಹುಲ್ಲನ್ನು ಖರೀದಿಸುವ ಸಂಕಷ್ಟ ಇತ್ತೀಚೆಗೆ ತೀವ್ರವಾಗಿದೆ. ಹಿಂದೆ ಗೌಳಿ ಜನಾಂಗದ ಪ್ರತಿ ಕುಟುಂಬಗಳಲ್ಲೂ ೧೫೦-೨೦೦ ದನಕರು ಮತ್ತು ಎಮ್ಮೆಗಳನ್ನು ಸಾಕುತ್ತಿದ್ದರು. ಅವರಿಗೆ ಇತ್ತೀಚೆಗೆ ಆಹಾರ ನೀಡುವುದು ಕಷ್ಟವಾಗಿ, ಜಾನುವಾರು ಸಾಕಣೆಯನ್ನು ಕಡಿಮೆ ಮಾಡಿದ್ದಾರೆ. ಅನೇಕರು ಜೀವನ ನಿರ್ವಹಣೆಗಾಗಿ ವಲಸೆ ಹೋಗುತ್ತಿದ್ದು, ಅವರಿಗೆ ಹೈನುಗಾರಿಕೆಯ ವೃತ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೇಸಿಗೆ ಕಾಲದಲ್ಲೂ ಮೇವು ದೊರೆಯುವ ಯೋಜನೆ ರೂಪಿಸುವುದು ಅವಶ್ಯವಿದೆ ಎಂದು ಶಾಂತಾರಾಮ ಸಿದ್ದಿ ಸದನದಲ್ಲಿ ಪ್ರತಿಪಾದಿಸಿದರು. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಯಲ್ಲಾಪುರ, ಹಳಿಯಾಳ ಮತ್ತು ಮುಂಡಗೋಡು ತಾಲೂಕುಗಳ ಸುಮಾರು ೮೩೭೫ ಕುಟುಂಬದವರು ಹೈನುಗಾರಿಕೆಯನ್ನೇ ಮೂಲ ವೃತ್ತಿಯನ್ನಾಗಿಸಿಕೊಂಡು, ಜೀವನ ನಿರ್ವಹಿಸುತ್ತಿದ್ದಾರೆ. ಈ ವರೆಗೆ ಕಾಡಿನಲ್ಲಿ ಸಿಗಬಹುದಾದ ಮೇವುಗಳನ್ನೇ ಆಧರಿಸಿ ಗೌಳಿಗರು ಜಾನುವಾರು ಸಾಕುತ್ತಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಕಾಡಿನಲ್ಲಿಯೂ ಮೇವಿನ ಕೊರತೆಯಾಗಿದೆ. ಅವರ ಮೂಲ ಕಸುಬಿನ ನಿರ್ವಹಣೆಗೆ ಧಕ್ಕೆಯೊದಗಿದೆ. ಇಂತಹ ಸನ್ನಿವೇಶದಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಿದ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ಪ್ರಕ್ರಿಯೆ ನಿಧಿ (ಎಸ್.ಡಿ.ಆರ್.ಎಫ್.) ಮತ್ತು ರಾಷ್ಟ್ರೀಯ ವಿಪತ್ತಿ ಪ್ರಕ್ರಿಯೆ ನಿಧಿ ನೆರವಿನಿಂದ ಮೇವು ಕೊರತೆ ಉಂಟಾಗಿರುವ ಪ್ರದೇಶಗಳಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಿ, ತಾತ್ಕಾಲಿಕ ಮೇವು ನಿಧಿ ಘಟಕಗಳನ್ನು ಸ್ಥಾಪಿಸಿ, ಜಾನುವಾರು ಮಾಲೀಕರಿಗೆ ಮೇವು ಪೂರೈಸಲು ಕ್ರಮ ಕೈಗೊಳ್ಳುವಂತೆ ಶಾಂತಾರಾಮ ಸಿದ್ದಿ ಸಲಹೆ ನೀಡಿದರು. ಈ ಎಲ್ಲ ಚರ್ಚೆಗಳ ನಂತರ ಸರ್ಕಾರದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ ಮತ್ತಿತರ ಸದಸ್ಯರ ಸರ್ವಾನುಮತದೊಂದಿಗೆ ಈ ಎಲ್ಲ ಸಲಹೆ-ಸೂಚನೆಗಳಿಗೆ ಸಮ್ಮತಿ ನೀಡಿದ್ದಾರೆ ಎಂದು ಶಾಂತಾರಾಮ ಸಿದ್ದಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.