ಸಾರಾಂಶ
ತಾಲೂಕಿನ ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಸೊರಬ ತಾಲೂಕಿನ ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.ಮಂಗಳವಾರ ತಾಲೂಕಿನ ನಾರ್ಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ಕಾಲುಸಂಕ ನಿರ್ಮಾಣ ಮತ್ತು ಬರದವಳ್ಳಿ ಗ್ರಾಮದ ರಸ್ತೆ, ಯಡಗೊಪ್ಪ ಗ್ರಾಮದ 92 ಮನೆಗಳಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ₹107 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ೩೫೪ ಗ್ರಾಮಗಳಿಗೆ ಶರಾವತಿ ಹಿನ್ನಿರಿನಿಂದ ₹650 ಕೋಟಿ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಶಾಶ್ವತ ಕುಡಿಯುವ ನೀರನ್ನು ಕಲ್ಪಿಸಲು ಚಿಂತನೆ ನಡೆಸಲಾಗಿದ್ದು, ಪ್ರತಿ ಗಾಮಗಳಿಗೂ ಗುಣಮಟ್ಟದ ಸಂಪರ್ಕ ರಸ್ತೆಗಳು ಶಾಲಾ ಕೊಠಡಿ ಮತ್ತು ಸಮುದಾಯ ಭವನಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅಗತ್ಯವಿದ್ದ ಗ್ರಾಮಗಳ ಬೇಡಿಕೆಗೆ ಅನುಗುಣವಾಗಿ ಶಾಲಾ ಕೊಠಡಿಗೆ ಅನುದಾನ ಬಿಡುಗಡೆಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.ನ್ಯಾರ್ಶಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ ನಾಯಕ್, ಗ್ಯಾರಂಟಿ ಯೋಜನೆ ಅನುಷ್ಠಾಪನಾ ಸಮಿತಿ ತಾಲೂಕು ಅಧ್ಯಕ್ಷ ಎಚ್.ಕೆ.ಜೈಶೀಲಗೌಡ, ತಾ.ಪಂ. ಮಾಜಿ ಅಧ್ಯಕ್ಷ ಎಚ್.ಗಣಪತಿ, ಕಲ್ಲಂಬಿ ಹಿರಿಯಣ್ಣ, ಗ್ರಾಪ ಸದಸ್ಯರಾದ ಕಾಮಾಕ್ಷಿ ಅಣ್ಣಪ್ಪ, ಕವಿತಾ, ಸರೋಜಮ್ಮ, ರವಿ, ಗಣಪತಿ, ಕಮಲಮ್ಮ, ಸೀತಾರಾ, ಪರಶುರಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಮತ್ತಿತರರಿದ್ದರು.