ಹಿಂಗುಲಾಜಮಾತ ಶಕ್ತಿ ಪೀಠವನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಯೋಜನೆ

| Published : Apr 08 2024, 01:02 AM IST

ಹಿಂಗುಲಾಜಮಾತ ಶಕ್ತಿ ಪೀಠವನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗದ ಶ್ರೀ ವಿಠ್ಠಲ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಹಿಂಗುಲಾಂಬಿಕಮಾತಾ ಜಯಂತಿ ಕಾರ್ಯಕ್ರಮದಲ್ಲಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಉಮೇಶ ಗುಜ್ಜಾರ್, ಸುರೇಶ್ ಬಾಬು, ಮೋಹನ್ ಗುಜ್ಜಾರ್, ರಾಜು ಹೊವಳೆ ಮತ್ತಿತರರು ಹಾಜರಿದ್ದರು.

ಕನ್ನಡಪ್ರಭವಾರ್ತೆ ಹೊಸದುರ್ಗ

ಪಾಕಿಸ್ತಾನದ ಹಿಂಗ್ಲಾಜ್‌ನಲ್ಲಿರುವ ಭಾವಸಾರ ಕ್ಷತ್ರೀಯ ಸಮಾಜದ ಕುಲದೇವತೆ ಹಿಂಗುಲಾಜಮಾತ ಶಕ್ತಿ ಪೀಠವನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಅಖಿಲ ಭಾರತ ಭಾವಸಾರ ಕ್ಷತ್ರೀಯ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಉಮೇಶ ಗುಜ್ಜಾರ್ ತಿಳಿಸಿದರು.

ಪಟ್ಟಣದ ಶ್ರೀ ವಿಠ್ಠಲ ದೇವಾಲಯದಲ್ಲಿ ಭಾನುವಾರ ಭಾವಸಾರ ಕ್ಷತ್ರೀಯ ಸಮಾಜ ಹಾಗೂ ತುಳುಜಾಭವಾನಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಶ್ರೀ ಹಿಂಗುಲಾಂಬಿಕಾ ಮಾತಾ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾವಸಾರ ಕ್ಷತ್ರೀಯ ಸಮಾಜದ ಕುಲ ದೇವತೆಯಾದ ಹಿಂಗುಲಾಜ ಮಾತೆಯ ಶಕ್ತಿ ಪೀಠ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಹಿಂಗ್ಲಾಜ್ ಪ್ರದೇಶದಲ್ಲಿದೆ. ಆರ್ಥಿಕವಾಗಿ ಹಿಂದುಳಿದಿರುವ ಭಾವಸಾರ ಕ್ಷತ್ರೀಯ ಸಮಾಜದ ಜನರು ಆರ್ಥಿಕ ಹಾಗೂ ರಾಜಕೀಯ ಕಾರಣಗಳಿಂದ ಕುಲ ದೇವತೆಯ ದರ್ಶನ ಮಾಡಲು ಸಾಧ್ಯವಾಗದೆ ಧಾರ್ಮಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಧಾರ್ಮಿಕ ಶ್ರದ್ದೆ ಹೊಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಹಿಂಗುಲಾಜ ದೇವಿಯ ಶಕ್ತಿ ಪೀಠ ಸ್ಥಾಪಿಸಲು ನೆರವು ನಿಡಬೇಕು ಎಂದು ಕೋರಿದರು.

ರಾಜ್ಯದಲ್ಲಿ ದೇವಿಯ ಶಕ್ತಿಪೀಠ ಸ್ಥಾಪನೆಯಾದರೆ ಭಾವಸಾರ ಕ್ಷತ್ರೀಯ ಸಮಾಜಕ್ಕೆ ಧಾರ್ಮಿಕ ಶಕ್ತಿ ನೀಡಿದಂತಾಗುತ್ತದೆ. ಈಗಾಗಲೇ ಧಾರವಾಡದ ಬಳಿ 100 ಎಕರೆ ಜಮೀನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ದಾರವಾಡದ ಜಿಲ್ಲಾಧಿಕಾರಿಗೆ ಭೂಮಿ ಪರಿಶೀಲಿಸಲು ಸೂಚನೆ ನೀಡಿದೆ. ದೇವಾಲಯ ನಿರ್ಮಾಣದ ಜೊತೆಗೆ ಗುರುಪೀಠ ಸ್ಥಾಪಿಸುವ ಅಲೋಚನೆ ಕೂಡ ಇದೆ ಎಂದರು.

ಮುಖಂಡ ರಾಜಾರಾಮ್ ಮಾತನಾಡಿ ಭಾವಸಾರ ಕ್ಷತ್ರೀಯ ಸಮಾಜ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಪಾಕಿಸ್ತಾನದ ಬಲೂಚಿಸ್ಥಾನದಲ್ಲಿರುವ ಇಂಗುಲಾಂಬಿಕಾ ದೇವಿಯ ದರ್ಶನಕ್ಕೆ ಅವಕಾಶವಿಲ್ಲದಂತಾಗಿದೆ. ಶಕ್ತಿಪೀಠವನ್ನು ನಾಶಪಡಿಸಲು ನಡೆಸಿದ ಹಲವಾರು ಪ್ರಯತ್ನಗಳು ವಿಫಲವಾಗಿವೆ. ದೇವಿಯಲ್ಲಿರುವ ಶಕ್ತಿಯು ಇದಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಹಿಂಗುಲಾಜ ಮಾತೆ ಪೀಠ ಸ್ಥಾಪನೆಯಾದರೆ ಸಮುದಾಯಕ್ಕೆ ಧಾರ್ಮಿಕ ಸ್ವಾತಂತ್ರ್ಯ ದೊರೆತಂತಾಗುತ್ತದೆ ಎಂದರು.

ಸುರೇಶ್ ಬಾಬು, ಮೋಹನ್ ಗುಜ್ಜಾರ್, ಮಂಗಳ ಕುಂಠೆ, ಸಾಧನ, ನಂದಿನಿ, ಪ್ರಶಾಂತ್ ಗುಜ್ಜಾರ್, ಬಾಬುರಾವ್, ರಾಜು ಹೊವಳೆ, ರಂಗನಾಥ್ ಜಿಂಗಾಡೆ, ಗಣೇಶ್ ಮಾಳತ್ಕರ್, ವಾಸುದೇವರಾವ್, ರಾಮಣ್ಣ, ಸಂತೋಷ ಇತರರು ಹಾಜರಿದ್ದರು.