2ಎ ಮೀಸಲಾತಿ ಹೋರಾಟ ಮತ್ತಷ್ಟು ಗಟ್ಟಿಸುವ ಯೋಜನೆ: ಸೋಮನಗೌಡ ಎಂ. ಪಾಟೀಲ್

| Published : Oct 05 2024, 01:36 AM IST

2ಎ ಮೀಸಲಾತಿ ಹೋರಾಟ ಮತ್ತಷ್ಟು ಗಟ್ಟಿಸುವ ಯೋಜನೆ: ಸೋಮನಗೌಡ ಎಂ. ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ನಿಯೋಜಿತ ರಾಜ್ಯಾಧ್ಯಕ್ಷ ಸೋಮನಗೌಡ ಎಂ. ಪಾಟೀಲ್ ಅವರು ಕಾರಟಗಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಹೇಳಿದರು.

ಕಾರಟಗಿ: ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ನಿಯೋಜಿತ ರಾಜ್ಯಾಧ್ಯಕ್ಷ ಸೋಮನಗೌಡ ಎಂ. ಪಾಟೀಲ್ ಹೇಳಿದರು.

ಇಲ್ಲಿನ ಎಪಿಎಂಸಿ ಆವರಣದಲ್ಲಿ ತಾಲೂಕು ಪಂಚಮಸಾಲಿ ಸಮಾಜದಿಂದ ಇತ್ತೀಚೆಗೆ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಸಮಾಜದ ಕನಸಾಗಿರುವ ಒಬಿಸಿ ಅಥವಾ ೨ಎ ಮೀಸಲಾತಿಗಾಗಿ ಹೋರಾಟ. ಈ ಹೋರಾಟದ ರೂಪುರೇಷಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು, ರಾಜಕೀಯೇತರವಾಗಿ ಮೀಸಲಾತಿಗಾಗಿ ಹೋರಾಟ ಮಾಡುವುದು ಮುಂದಿನ ಉದ್ದೇಶವಾಗಿದೆ. ಸಮಾಜದ ಶಾಸಕರು ಯಾವುದೇ ಪಕ್ಷದಲ್ಲಿ ಇರಲಿ ಅದನ್ನು ಹೊರತುಪಡಿಸಿ ಪಕ್ಷಾತೀತವಾಗಿ ನಮಗೆ ನ್ಯಾಯ, ಮೀಸಲಾತಿ ಸಿಗುವ ತನಕ ಹೋರಾಟ ನಡೆಸಲಾಗುವ ಗುರಿ ಹೊಂದಲಾಗಿದೆ ಎಂದರು.

ಅ. ೬ರಂದು ಹರಿಹರದ ಜಗದ್ಗುರು ಪಂಚಮಸಾಲಿ ಪೀಠದ ಆವರಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿ ಪ್ರಮಾಣ ವಚನ ಮತ್ತು ಅಧಿಕಾರ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಪದಗ್ರಹಣದಲ್ಲಿ ರಾಜ್ಯದ ಪಂಚಮಸಾಲಿ ಸಮಾಜದ ಮೂರು ಪೀಠಗಳ ಭಕ್ತರು, ಸಮಾಜ ಬಾಂಧವರು ಯಾವುದೇ ಬೇಧ-ಭಾವ ಇಲ್ಲದೇ ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೆ ಕಾರಣರಾಗಬೇಕು ಎಂದು ಕೋರಿದರು.ಸಮಾಜಕ್ಕೆ ಇಲ್ಲಿಯವರೆಗೆ ೬ ಜನ ಅಧ್ಯಕ್ಷರಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದು, ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ, ಸಮಾಜದ ಕಾರ್ಯಚಟುವಟಿಕೆ ತಲುಪಿಸುವ ಪ್ರಯತ್ನ ಮಾಡುತ್ತೇನೆ. ಸಂಘದ ಸಂಸ್ಥಾಪಕ ಡಾ. ಹನುಮನಾಳ, ಎಸ್.ಆರ್. ಕಾಶಪ್ಪನವರ, ಅವರ ಆಸೆಯಂತೆ ಈ ಸಮಾಜವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಹಿಳಾ, ಯುವ ಹಾಗೂ ನೌಕರರ ಘಟಕಗಳನ್ನು ಇನ್ನಷ್ಟು ಕ್ರಿಯಾಶೀಲ ಮತ್ತು ಸದೃಢವಾಗಿ ಕಟ್ಟುವುದು, ಒಂದು ಲಕ್ಷ ಸದಸ್ಯತ್ವ ಗುರಿ ಮಾಡುವುದು ಮುಖ್ಯ ಉದ್ದೇಶ. ಹರಿಹರ ಪೀಠದಲ್ಲಿ ನಿತ್ಯ ದಾಸೋಹ, ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆ ಉಚಿತ ತರಬೇತಿ ನೀಡುವ ಕೆಲಸವನ್ನು ಮಾಡುತ್ತೇನೆ. ಪ್ರತಿ ಜಿಲ್ಲಾಧ್ಯಕ್ಷರನ್ನು ಕರೆಯಿಸಿ ಸಭೆ ಮಾಡದೇ ನಾನೇ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ಭೇಟಿ, ಜತೆಗೆ ಸಮಾಜದ ಕಟ್ಟಕಡೆಯ ಬಡ ಕುಟುಂಬಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವುದಾಗಿ ಹೇಳಿದರು.ತವರು ಜಿಲ್ಲೆ ಕೊಪ್ಪಳದಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಸಮಾಜದವರು ಆಗಮಿಸಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಬೇಕು ಎಂದು ಸೋಮನಗೌಡ ಎಂ. ಪಾಟೀಲ್ ಹೇಳಿದರು.

ಕೂಡಲ ಸಂಗಮ ಗುರುಪೀಠದ ದಾಸೋಹ ಸಮಿತಿ ರಾಜ್ಯಾಧ್ಯಕ್ಷ ಚನ್ನಬಸಪ್ಪ ಸುಂಕದ್, ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್ ಮಾತನಾಡಿದರು.ಪಂಚಮಸಾಲಿ ಸಮಾಜದ ದೇವರಾಜ ಹಾಲಸಮುದ್ರ, ಪಂಚಸೈನ್ಯದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಶಿವಪೂಜಿ, ಗುಂಡಪ್ಪ ಕುಳಗಿ, ರುದ್ರಪ್ಪ ಯರಡೋಣಾ, ಬಸವನಗೌಡ, ಬಸವರಾಜ ಕೂಡ್ಲೂರು, ನಿಜಗುಣಪ್ಪ ಮೇಟಿ, ಭಾರತೇಶ ಕೆಂಡದ್, ಶಿವಕುಮಾರ ಗೋನಾಳ, ಶರಣಪ್ಪ ಹೊಸಮನಿ, ನಾಗಪ್ಪ ಬಜಾರ, ಬಸವರಾಜ ಎತ್ತಿನಮನಿ, ಮಂಜು ಬಸಾಪುರ, ಪಂಪಾಪತಿ ಶೀಲವಂತರ, ನಾಗರಾಜ ಗುಂಡೂರು, ಅಮರೇಶ ಗುಂಡೂರು ಇನ್ನಿತರರು ಇದ್ದರು.