ಉಜ್ಜಯಿನಿ ಪ್ರವಾಸಿ ತಾಣವಾಗಿಸಲು ಯೋಜನೆ

| Published : Dec 28 2023, 01:46 AM IST

ಸಾರಾಂಶ

ಪೀಠದ ಮೂಲ ಸೌಕರ್ಯ ಅಭಿವೃದ್ಧಿಯೊಂದಿಗೆ ಉಜ್ಜಯಿನಿಯನ್ನು ಪ್ರವಾಸಿ ತಾಣವಾಗಿಸುವ ಕುರಿತು ವಿಶೇಷ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಕೊಟ್ಟೂರು: ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠವನ್ನು ಪ್ರವಾಸಿ ತಾಣವಾಗಿಸುವ ಯೋಜನೆಯೊಂದಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶೀನಿವಾಸ ಭರವಸೆ ನೀಡಿದರು.

ಇತ್ತೀಚೆಗೆ ತಾಲೂಕಿನ ಉಜ್ಜಯಿನಿಯಲ್ಲಿ ನಡೆದ ಲಿಂ. ಮರುಳಸಿದ್ದ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ, ಲಕ್ಷ ದೀಪೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ, ಧರ್ಮವನ್ನು ಮೀರಿ ಸಮಾಜದಲ್ಲಿನ ಎಲ್ಲರನ್ನೂ ಒಂದೇ ಭಾವದಿಂದ ಕಂಡಿರುವುದು ಸದ್ಧರ್ಮ ಪೀಠ. ಪೀಠಕ್ಕೆ ಜರಿಮಲಿ ಪಾಳೆಗಾರರಾದಿಯಾಗಿ ಅನೇಕರು ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನ ಹಂಪಿಯಂತೆ ಸುಂದರ ಕಲಾಶಿಲ್ಪದೊಂದಿಗೆ ಕಂಗೊಳಿಸುತ್ತಿದೆ. ಪೀಠದ ಮೂಲ ಸೌಕರ್ಯ ಅಭಿವೃದ್ಧಿಯೊಂದಿಗೆ ಉಜ್ಜಯಿನಿಯನ್ನು ಪ್ರವಾಸಿ ತಾಣವಾಗಿಸುವ ಕುರಿತು ವಿಶೇಷ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಉಜ್ಜಯಿನಿ ಸದ್ಧರ್ಮ ಪೀಠದಿಂದ ಅಕ್ಷರ ಹಾಗೂ ಅನ್ನ ದಾಸೋಹ ನಡೆಯುತ್ತಿದೆ. ಪೀಠದಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗುವುದು. ಇದಕ್ಕೆ ಸರ್ಕಾರದಿಂದ ಅನುದಾನವೂ ಅಗತ್ಯವಾಗಿದ್ದು, ಶಾಸಕ ಶ್ರೀನಿವಾಸ ಅವರು ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಅನುದಾನವನ್ನು ಶೀಘ್ರ ತರುವಂತಾಗಲಿ ಎಂದರು.

ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಕೆ. ನೇಮರಾಜನಾಯ್ಕ, ಬಿ.ಪಿ. ಹರೀಶ್, ಬಿ. ದೇವೇಂದ್ರಪ್ಪ, ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕರಾದ ಪಿ.ಟಿ. ಪರಮೇಶ್ವರನಾಯ್ಕ, ಎಸ್.ವಿ. ರಾಮಚಂದ್ರಪ್ಪ, ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂಜೆಎಂ ಹರ್ಷವರ್ಧನ ಇತರರು ಇದ್ದರು. ಪ್ರತಿಭಾವಂತ ಯೋಗಪಟುಗಳು ಯೋಗ ಪ್ರದರ್ಶಿಸಿದರು.