ಚಿಂತಾಮಣಿಗೆ ಕುಡಿಯುವ ನೀರು ಪೂರೈಕೆಗೆ ಯೋಜನೆ

| Published : Apr 20 2025, 01:55 AM IST

ಸಾರಾಂಶ

ಚಿಂತಾಮಣಿ ನಗರಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ನೆಕ್ಕುಂದಿ ಕೆರೆ ಕುಡಿಯುವ ನೀರಿನ ಯೋಜನೆಯನ್ನು 80 ಕೋಟಿ ವೆಚ್ಚದಲ್ಲಿ, ಕನ್ನಂಪಲ್ಲಿ ಕೆರೆ ಕುಡಿಯುವ ನೀರಿನ ಯೋಜನೆಯನ್ನು 35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು, ಭಕ್ತರಹಳ್ಳಿ ಅರಸನಕೆರೆ ನೀರಿನ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ ಚಿಂತಾಮಣಿ

ಭವಿಷ್ಯದ ದಿನಗಳಲ್ಲಿ ಚಿಂತಾಮಣಿ ನಗರಕ್ಕೆ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುವ ನಿಟ್ಟಿನಲ್ಲಿ ನಕ್ಕುಂದಿ ಕೆರೆ, ಕನ್ನಂಪಲ್ಲಿ ಕೆರೆ ಹಾಗೂ ಭಕ್ತರಹಳ್ಳಿ ಅರಸನಕೆರೆಗಳ ಕುಡಿಯುವ ನೀರಿನ ಯೋಜನೆ ಅಭಿವೃದ್ಧಿಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ತಿಳಿಸಿದರು.

ಚಿಂತಾಮಣಿ ತಾಲೂಕು ಆಡಳಿತ, ಪೌರಾಡಳಿತ ಇಲಾಖೆ ಇವರ ಸಂಯುಕ್ತಶ್ರಯದಲ್ಲಿ ಚಿಂತಾಮಣಿಗೆ ನಗರದ ಅರಳಿಕಟ್ಟೆ ಹತ್ತಿರ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ " ಚಾಲನೆ ನೀಡಿ ಮಾತನಾಡಿದರು.

₹ 115 ಕೋಟಿ ವೆಚ್ಚದ ಯೋಜನೆ

ಚಿಂತಾಮಣಿ ನಗರಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ನೆಕ್ಕುಂದಿ ಕೆರೆ ಕುಡಿಯುವ ನೀರಿನ ಯೋಜನೆಯನ್ನು 80 ಕೋಟಿ ವೆಚ್ಚದಲ್ಲಿ, ಕನ್ನಂಪಲ್ಲಿ ಕೆರೆ ಕುಡಿಯುವ ನೀರಿನ ಯೋಜನೆಯನ್ನು 35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು, ಭಕ್ತರಹಳ್ಳಿ ಅರಸನಕೆರೆ ನೀರಿನ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು. ಚಿಂತಾಮಣಿ ನಗರದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ಎಸ್,ಟಿ,ಪಿ ರಸ್ತೆ ನಿರ್ಮಾಣ, ಪೈಪ್ಲೈನ್ ಅಳವಡಿಕೆ, ಮಳೆ ನೀರು ಚರಂಡಿ ನಿರ್ಮಾಣ, ಡಾಂಬರೀಕರಣ, ರಸ್ತೆ ದುರಸ್ತಿ, ಯು.ಜಿ.ಡಿ ಸಂಪರ್ಕ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಕಸ ಸಂಗ್ರಹಣ ವಾಹನ ಖರೀದಿ, ಕಟ್ಟಿಂಗ್ ಯಂತ್ರ ಖರೀದಿ, ಸ್ವೀಪಿಂಗ್ ಯಂತ್ರ ಖರೀದಿ ಸೇರಿದಂತೆ ವಿವಿಧ ಕಾರ್ಯಗಳ ಸುಮಾರು 2705.51 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ. ಸುಮಾರು 41 ಲಕ್ಷ ವೆಚ್ಚದಲ್ಲಿ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲತ್ತು ವಿತರಿಸಲಾಗಿದೆ. ಟೈಡ್ ಮತ್ತು ಬೋರ್ಡಾ ಸಂಸ್ಥೆಯ ಸಹಯೋಗದಲ್ಲಿ 30 ಲಕ್ಷ ರು.ಗಳ ವೆಚ್ಚದ ಯಂತ್ರಗಳನ್ನು ವಿತರಣೆ ಮಾಡಲಾಗಿದೆ ಎಂದರು.ಚತುಷ್ಪಥ ರಸ್ತೆ ನಿರ್ಮಾಣ

ಚಿಂತಾಮಣಿಗೆ ಮತ್ತು ಹೊಸಕೋಟೆ ನಗರಗಳನ್ನು ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ಈ ಯೋಜನೆಗೆ ಶಂಕುಸ್ಥಾಪನೆಗೆ ಕ್ರಮವಹಿಸಲಾಗುವುದು. ನಗರೋತ್ಥಾನ ಯೋಜನೆಯಲ್ಲಿ ಜಿಲ್ಲೆಯ ನಗರಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗುತ್ತದೆ. ಡಲ್ಟ್ ಯೋಜನೆಯಡಿ 25 ಕೋಟಿ ಮಂಜೂರಾಗಿದ್ದು, ಈ ಅನುದಾನವನ್ನು ಸಂಪರ್ಕವಾಗಿ ಬಳಸಲಾಗುವುದು ಎಂದರು .ಚಿಂತಾಮಣಿ ಕ್ಷೇತ್ರ ಅಭಿವೃದ್ಧಿ ಕಾರ್ಯ

ವಿಧಾನ ಪರಿಷತ್‌ ಸದಸ್ಯ ಎಂ.ಎಲ್ ಅನಿಲ್ ಕುಮಾರ್‌ ಮಾತನಾಡಿ, ಚಿಂತಾಮಣಿ ನಗರ ಅಭಿವೃದ್ಧಿಯಲ್ಲಿ ವೇಗವನ್ನು ಪಡೆದುಕೊಂಡಿದೆ. 150 ಕೋಟಿ ವೆಚ್ಚದಲ್ಲಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಚಾಲನೆಯಲ್ಲಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಈ ಸರ್ಕಾರ ಕಂಕಣ ಬದ್ಧವಾಗಿದೆ. ಇಂದು ಸುಮಾರು 30ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಿಂತಾಮಣಿಯಲ್ಲಿ ಚಾಲನೆ ಸಿಕ್ಕಿರುವುದು ಹರ್ಷದಾಯಕ ವಿಚಾರ ಎಂದರು. ಈ ಸಂದರ್ಭದಲ್ಲಿ ಚಿಂತಾಮಣಿ ನಗರಸಭೆ ಅಧ್ಯಕ್ಷ ಆರ್.ಜಗನ್ನಾಥ, ನಗರಸಭೆ ಉಪಾಧ್ಯಕ್ಷ ರಾಣಿಯಮ್ಮ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್. ಶ್ರೀನಾಥ್, ನಗರಸಭೆಯ ಸದಸ್ಯರಾದ ಅಕ್ಷಯ್, ಹರೀಶ್, ಕಲಾವತಿ, ಜಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕೆ. ಮಾಧವಿ, ತಹಸೀಲ್ದಾರ್‌ ಕೆ.ಆರ್. ಸುದರ್ಶನ್ ಯಾದವ್, ನಗರಸಭೆಯ ಪೌರಾಯುಕ್ತ ಜಿ. ಎನ್. ಚಲಪತಿ, ಮಾಜಿ ನಗರಸಭಾ ಸದಸ್ಯ ರೇಖಾ ಉಮೇಶ್, ಜೈ ಭೀಮ್ ಮುರಳಿ, ಮತ್ತಿತರರು ಇದ್ದರು.