ಸಾರಾಂಶ
ಗ್ರಹ ಪ್ರಭಾವದಿಂದ ನಮ್ಮ ಬಣ್ಣ, ಗುಣ, ಸ್ವಭಾವ ಕೂಡಾ ನಿರ್ಧರಿಸಲ್ಪಡುತ್ತದೆ. ಉದಾಹರಣೆಗೆ ಜಾತಕದಲ್ಲಿ ಲಗ್ನದ ಮೇಲೆ ರವಿಯ ಪ್ರಭಾವ ಇದ್ದರೆ ಕೂದಲು ಕಡಿಮೆ ಇರುತ್ತದೆ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.
ಗೋಕರ್ಣ: ಜೀವನದ ಪ್ರತಿ ಹಂತದಲ್ಲೂ ಗ್ರಹಗಳ ಸಮನ್ವಯವನ್ನು ಅರ್ಥ ಮಾಡಿಕೊಳ್ಳಬೇಕು. ಇದರಿಂದ ಬದುಕು ಸುಲಲಿತ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುಮಾಸ್ಯ ಕೈಗೊಂಡಿರುವ ಶ್ರೀಗಳು 12ನೇ ದಿನವಾದ ಗುರುವಾರ ಕಾಲ ಪ್ರವಚನ ಸರಣಿಯಲ್ಲಿ ಮಾತನಾಡಿ, ಜೀವನದಲ್ಲಿ ಬಳಸುವ ಪ್ರತಿ ವಸ್ತುಗಳೂ ಗ್ರಹಮಯ. ಜೀವನದ ಪ್ರತಿ ಹಂತದಲ್ಲೂ ಗ್ರಹಗಳನ್ನು ಸಮನ್ವಯ ಮಾಡಿಕೊಂಡು ಹೋಗುವ ಪರಿಪಾಠ ಬೆಳೆಸಿಕೊಳ್ಳಬೇಕು. ಇದರಿಂದ ಬದುಕು ಸರಳವಾಗುತ್ತವೆ. ಗ್ರಹಗತಿಯನ್ನು ಅರಿತುಕೊಂಡರೆ ಜೀವನ ಸುಲಲಿತವಾಗುತ್ತದೆ ಎಂದರು.
ಗ್ರಹ ಪ್ರಭಾವದಿಂದ ನಮ್ಮ ಬಣ್ಣ, ಗುಣ, ಸ್ವಭಾವ ಕೂಡಾ ನಿರ್ಧರಿಸಲ್ಪಡುತ್ತದೆ. ಉದಾಹರಣೆಗೆ ಜಾತಕದಲ್ಲಿ ಲಗ್ನದ ಮೇಲೆ ರವಿಯ ಪ್ರಭಾವ ಇದ್ದರೆ ಕೂದಲು ಕಡಿಮೆ ಇರುತ್ತದೆ. ಸೂರ್ಯನನ್ನು ಪಿತೃಸ್ಥಾನದಲ್ಲಿ ನೋಡಬೇಕು. ಆತ್ಮಸೌಖ್ಯಕ್ಕೂ ಸೂರ್ಯ ಕಾರಣ. ಪ್ರತಾಪ, ಧೈರ್ಯ, ಶೌರ್ಯ ಎಲ್ಲವೂ ಸೂರ್ಯಶಕ್ತಿಯಿಂದ ಬರುವಂಥದ್ದು ಎಂದು ವಿಶ್ಲೇಷಿಸಿದರು.ಶರೀರ ವಾತ, ಪಿತ್ತ, ಕಫಗಳೆಂಬ ಮೂರು ಧಾತುಗಳಿಂದ ನಿರ್ಮಾಣವಾದಂಥದ್ದು. ಇಡೀ ದೇಹದ ಸ್ವಭಾವವನ್ನು ಆತನ ಗ್ರಹಗತಿಗಳು ನಿರ್ಧರಿಸುತ್ತವೆ. ಇಂಥ ದೇಹಪ್ರಕೃತಿಯನ್ನು ತಿಳಿದುಕೊಂಡರೆ ಆ ವ್ಯಕ್ತಿಯ ಸಮಗ್ರ ಆರೋಗ್ಯಸ್ಥಿತಿಯನ್ನು ಅರಿತುಕೊಳ್ಳಬಹುದು. ಅಂಥ ಜ್ಞಾನವನ್ನು ಜ್ಯೋತಿಷ ನೀಡುತ್ತದೆ ಎಂದರು.
ಶ್ರೀಮಠದ ಸವಾರಿಯ ರಹದಾರಿಗಳನ್ನು ನಿವೃತ್ತ ಉಪ ತಹಸೀಲ್ದಾರ್ ಲಕ್ಷ್ಮೀನಾರಾಯಣ ಅನಂತ ಭಟ್ಟ ನೆರವೇರಿಸಿದರು. ಪ್ರತಿವರ್ಷದಂತೆ ಚಾತುರ್ಮಾಸ್ಯ ಸಂದರ್ಭದಲ್ಲಿ ಭಂಡಾರಿ ಸಮಾಜದಿಂದ ಸುವರ್ಣ ಪಾದುಕಾಪೂಜೆ ಸೇವೆ ನೆರವೇರಿತು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ, ಮಹಾಮಂಡಲ ಪ್ರಾಂತ ಕಾರ್ಯದರ್ಶಿ ರುಕ್ಮಾವತಿ ರಾಮಚಂದ್ರ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ. ಹೆಗಡೆ ಹೊಸಾಕುಳಿ ಮತ್ತಿತರರು ಉಪಸ್ಥಿತರಿದ್ದರು.