ಮೈಸೂರಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವೆ: ಸಂಸದ ಯದುವೀರ್

| Published : Jun 14 2024, 01:01 AM IST

ಮೈಸೂರಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವೆ: ಸಂಸದ ಯದುವೀರ್
Share this Article
  • FB
  • TW
  • Linkdin
  • Email

ಸಾರಾಂಶ

ಚಾಮುಂಡಿ ಬೆಟ್ಟ ಒಂದು ಧಾರ್ಮಿಕ ಕ್ಷೇತ್ರ. ಅಲ್ಲಿಗೆ ರೋಪ್ ವೇ ಅಗತ್ಯವಿಲ್ಲ. ಇನ್ನು ವಿಮಾನ ನಿಲ್ದಾಣ ವಿಸ್ತರಣೆ, ಹೆಚ್ಚು ವಿಮಾನಗಳ ಹಾರಾಟ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮೈಸೂರಿನಲ್ಲಿರುವ ಪ್ರವಾಸಿ ತಾಣಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಜತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರವಾಸೋದ್ಯಮ ತಾಣವಾಗಿ ಮೈಸೂರನ್ನು ಸಮಗ್ರ ಅಭಿವೃದ್ಧಿಪಡಿಸಲು ಅಗತ್ಯ ಯೋಜನೆ ರೂಪಿಸುವುದಾಗಿ ನೂತನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ದೃಷ್ಟಿಯಲ್ಲಿ ಮೈಸೂರಿಗೆ ಸಾಕಷ್ಟು ಯೋಜನೆ ರೂಪಿಸಬೇಕಿದೆ. ಅಂತೆಯೇ ಸಂಸದರಾಗಿದ್ದ ಪ್ರತಾಪ ಸಿಂಹ ಅವರ ಅವಧಿಯಲ್ಲಿ ಕೈಗೊಂಡಿದ್ದ ಕೆಲಸಗಳ ಪ್ರಗತಿ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರಿಗಳ ಸಮಯ ನೋಡಿಕೊಂಡು ಪರಿಶೀಲಿಸಲಾಗುವುದು ಎಂದರು.

ಚಾಮುಂಡಿ ಬೆಟ್ಟ ಒಂದು ಧಾರ್ಮಿಕ ಕ್ಷೇತ್ರ. ಅಲ್ಲಿಗೆ ರೋಪ್ ವೇ ಅಗತ್ಯವಿಲ್ಲ. ಇನ್ನು ವಿಮಾನ ನಿಲ್ದಾಣ ವಿಸ್ತರಣೆ, ಹೆಚ್ಚು ವಿಮಾನಗಳ ಹಾರಾಟ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮೈಸೂರಿನಲ್ಲಿರುವ ಪ್ರವಾಸಿ ತಾಣಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಜತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ. ಅಭಿವೃದ್ಧಿಯ ದೃಷ್ಟಿಯಿಂದ ಅಗತ್ಯಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿ ಆಗುತ್ತೇನೆ ಎಂದರು.

ಇಂದಿನಿಂದ ನರಸಿಂಹರಾಜ ಕ್ಷೇತ್ರದಲ್ಲಿ ಪ್ರವಾಸ ಆರಂಭಿಸಿದ್ದೇನೆ. ಆ ಭಾಗದಲ್ಲಿ ಪಾದಯಾತ್ರೆ ನಡೆಸಿ ಜನರ ಸಮಸ್ಯೆ ಆಲಿಸುತ್ತೇನೆ. ಮೈಸೂರು- ಕೊಡಗು ಕ್ಷೇತ್ರ ದೊಡ್ಡ ಕ್ಷೇತ್ರ. ಇಲ್ಲಿ ಜನರನ್ನು ಭೇಟಿಯಾಗುವುದೇ ಸವಾಲು. ಆದರೆ, ಸಮಯ ತೆಗೆದುಕೊಂಡು ಜನರನ್ನು ಭೇಟಿ ಆಗುತ್ತೇನೆ. ಭ್ರಷ್ಟಮುಕ್ತ ಕೆಲಸದ ತತ್ವದೊಡನೆ ನಾನು ಮುಂದುವರೆಯುತ್ತೇನೆ ಎಂದರು.

ಮೈಸೂರಿನಲ್ಲಿ ಸಾಕಷ್ಟು ಕೈಗಾರಿಕಾ ಪಾರ್ಕ್ ಇವೆ. ಅವುಗಳ ಅಭಿವೃದ್ಧಿ ಮತ್ತು ಹೊಸ ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಹಿಂದಿನ ರೈಲ್ವೆ ಯೋಜನೆಗಳನ್ನು ಕೂಡ ಮುಂದುವರೆಸಲಾಗುವುದು. ಅಭಿವೃದ್ಧಿಯ ವಿಷಯ ಬಂದಾಗ ರಾಜಕೀಯ ಇರುತ್ತದೆ. ಅದನ್ನು ಮೀರಿ ಕೆಲಸ ಮಾಡುತ್ತೇನೆ ಎಂದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಯಿಂದಲೇ ಅವರು ಅಧಿಕಾರಕ್ಕೆ ಬಂದಿದ್ದಾರೆ. ಈ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಗಮನಿಸಿದರೆ ಈ ಯೋಜನೆ ಇರಲಿ. ಆದರೆ, ಮುಂದುವರೆಸುವುದು ಬಿಡುವುದು ಸರ್ಕಾರದ ಇಚ್ಛೆ. ನಾನು ಚುನಾವಣೆಗೂ ಕುವೆಂಪುನಗರದಲ್ಲಿ ಕಚೇರಿ ಆರಂಭಿಸಿದ್ದೆ. ಸರ್ಕಾರದ ಅಧಿಕೃತ ಕಚೇರಿ ಆರಂಭ ಆಗುವವರಗೂ ಅಲ್ಲಿಯೇ ಸಿಗುತ್ತೇನೆ ಎಂದರು.

ಈ ಚುನಾವಣೆಯಲ್ಲಿ ಸುಮಾರು ಹದಿನಾಲ್ಕು ಲಕ್ಷ ಮಂದಿ ಮತದಾರರು ಪಾಲ್ಗೊಂಡು ಮತದಾನ ಮಾಡಿದ್ದಾರೆ. ಅಂತೆಯೇ ಎನ್.ಡಿ.ಎ ಕಾರ್ಯಕರ್ತರು ಕೂಡ ಶ್ರಮಿಸಿದ್ದಾರೆ ಅವರಿಗೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕರ್ನಾಟಕದಿಂದ ಐವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ದೊರಕಿದೆ. ಈ ಹಿನ್ನೆಲೆಯಲ್ಲಿ ಸಮಸ್ಥ ಕನ್ನಡಿಗರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಘು, ಕೇಬಲ್ ಮಹೇಶ್, ವಕ್ತಾರ ಮಹೇಶ್ರಾಜೇ ಅರಸ್ ಇದ್ದರು.ಮಾರುಕಟ್ಟೆ ಕೆಡವುವ ಅಗತ್ಯವಿಲ್ಲ ಯದುವೀರ್ಮೈಸೂರು ನಗರದ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಕೆಡವಿ ನಿರ್ಮಿಸುವ ಅಗತ್ಯವಿಲ್ಲ ಎಂದು ಸಂಸದ ಯದುವೀರ್ ತಿಳಿಸಿದರು.

ಗುರುವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಅವುಗಳನ್ನೇ ಮತ್ತೆ ಪುನರ್ ನವೀಕರಿಸಬಹುದು. ಅವುಗಳನ್ನು ಕೆಡವಿ ನಿರ್ಮಿಸುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.