ಜಿಲ್ಲೆಯಲ್ಲಿನ 3294 ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ: ಜಿ.ಪ್ರಭು,

| Published : Jul 01 2024, 01:47 AM IST

ಸಾರಾಂಶ

ಜಿಲ್ಲೆಯಲ್ಲಿ ಈಗ 3294 ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ ಮೂಲಕ ಜಿಪಂ ಶೈಕ್ಷಣಿಕ ಕ್ರಾಂತಿಗೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು ಜಿಲ್ಲೆಯಲ್ಲಿ ಈಗ 3294 ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ ಮೂಲಕ ಜಿಪಂ ಶೈಕ್ಷಣಿಕ ಕ್ರಾಂತಿಗೆ ಮುಂದಾಗಿದೆ. ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಮೂಲಕ ಕೆಲಸ ನೀಡುವ ಜೊತೆಗೆ ಸಾರ್ವಜನಿಕ ಆಸ್ತಿಯನ್ನು ಸೃಜನೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಈ ವರ್ಷ ಶಾಲಾಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಹೊತ್ತು ನೀಡಲಾಗುತ್ತಿದ್ದು, ಶಾಲಾ ಕಾಂಪೌಂಡ್, ಆಟದ ಮೈದಾನ, ಶೌಚಾಲಯ ನಿರ್ಮಾಣದಲ್ಲಿ ಜಿಪಂ ಮುಂದಾಗಿದೆ.ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿಯೂ ಶಾಲಾಭಿವೃದ್ಧಿ ಕಾಮಗಾರಿಗಳು ನರೇಗಾ ಯೋಜನೆಯಡಿ ಅನುಷ್ಠಾನವಾಗುತ್ತಿವೆ. ಇದರ ಜೊತೆಗೆ ವಿವಿಧ ಸಾರ್ವಜನಿಕ ಆಸ್ತಿಗಳಾದ ಸಿಸಿ ರಸ್ತೆ, ಸಿಸಿ ಚರಂಡಿ, ಸಮುದಾಯ ಶೌಚಾಲಯ, ಕೆರೆ ಅಭಿವೃದ್ಧಿ , ಸರ್ಕಾರಿ ಕಚೇರಿಗಳು, ಚೆಕ್ ಡ್ಯಾಮ್ ಸೇರಿಂದಂತೆ ಹಲವು ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಪ್ರತ್ಯೇಕವಾಗಿ ಶಾಲಾಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಯೋಜನೆಗಳ ಅನುದಾನವನ್ನು ಬಳಸಿಕೊಂಡು ಶಾಲಾ ದುರಸ್ತಿ ಮತ್ತು ಅವಶ್ಯಕತೆ ಇರುವ ಕಡೆ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು ಜಿಲ್ಲಾ ಪಂಚಾಯತಿ ಮುಂದಾಗಿದೆ. ಜಿಲ್ಲೆಯಲ್ಲಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗನ್ನು ಸೇರಿ ಒಟ್ಟು 3310 ಸರ್ಕಾರಿ ಶಾಲೆಗಳಿದ್ದು 183768 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿದರೆ ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮವಾಗುತ್ತದೆ ಎನ್ನುವ ಉದ್ದೇಶದಿಂದ ನರೇಗಾ ಯೋಜನೆಯಡಿ ಪ್ರಸಕ್ತ ವರ್ಷದಲ್ಲಿ 3220 ಶಾಲಾಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಜಿಪಂ ಸಿಇಒ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ 15400 ಶಾಲಾ ಕೊಠಡಿಗಳಿದ್ದು, ಇವುಗಳಲ್ಲಿ 9954 ಕೊಠಡಿಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿವೆ. 3965 ಕೊಠಡಿಗಳು ದುರಸ್ತಿ ಹಂತದಲ್ಲಿ ಮುಂದಿನ ಕೆಲವೇ ತಿಂಗಳುಗಳಲ್ಲಿ ಸುಸ್ಥಿತಿಗೆ ತರಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. 1500 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು ನೆಲಸಮ ಮಾಡಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಜಿಪಂ, ತಾಪಂ, ಗ್ರಾಪಂ ಅನಿರ್ಬಂದಿತ ಅನುದಾನದಡಿ ಶಾಲೆಗಳಿಗೆ ಶುದ್ಧ ಕುಡಿಯವ ನೀರಿ ಘಟಕ, ಪೌಷ್ಟಿಕ ಕೈತೋಟ ಸೇರಿದಂತೆ ಸುಣ್ಣ ಬಣ್ಣ ಮಾಡಿಸಿ ಆರ್ಷದಕವಾಗಿ ರೂಪುಗೊಳಿಸುವ ಯೋಜನೆ ರೂಪಿಸಲಾಗಿದೆ.

ಪ್ರತ್ಯೇಕ ಕ್ರಿಯಾ ಯೋಜನೆ: ಶಾಲಾಭಿವೃದ್ಧಿ ಕಾಮಗಾರಿಗಳಿಗೆ ಪ್ರತ್ಯೇಕವಾಗಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲಾಗಿದ್ದು, ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಿಡಿಒಗಳು ಪರಿಶೀಲನೆ ನಡೆಸಿ ಅವಶ್ಯಕತೆ ಇರುವ ಕಡೆ ಶಾಲಾ ಆಟದ ಮೈದಾನ, ಶೌಚಾಲಯ ಮತ್ತು ಕಾಂಪೌಂಡ್‌ಗಳನ್ನು ಗುರುತಿಸುತ್ತಿದ್ದಾರೆ.

ಶಾಲಾ ಮಕ್ಕಳ ಆರೋಗ್ಯದ ಹಿತ ದೃಷ್ಠಿಯಿಂದ ಸರ್ಕಾರಿ ಶಾಲೆಗಳಿಗೆ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪ್ರತ್ಯೇಕವಾಗಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 303 ಶಾಲಾ ಶೌಚಾಲಯಗಳು ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಿಗೂ ವಿಸ್ತರಿಸಲಾಗುತ್ತದೆ.

ಜಿ.ಪ್ರಭು, ಜಿಪಂ ಸಿಇಒ ಜಿಲ್ಲೆಯಲ್ಲಿ ಪ್ರಗತಿಯಲ್ಲಿವೆ 292 ಶಾಲಾ ಕಾಂಪೌಂಡ್: ಕ್ರಿಯಾ ಯೋಜನೆಯಲ್ಲಿ 685 ಕಾಂಪೌಂಡ್‌ಗಳಿಗೆ ಅನುಮೋದನೆ ನೀಡಲಾಗಿದ್ದು, 292 ಸರ್ಕಾರಿ ಶಾಲೆಗಳ ಕಾಂಪೌಂಡ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಂಪೌಂಡ್ ನಿರ್ಮಾಣದಿಂದ ಮಕ್ಕಳಿಗೆ ಹಾಗೂ ಶಾಲೆಗೆ ರಕ್ಷಣೆ ಒದಗಿಸುವುದರ ಜೊತೆ ಶೈಕ್ಷಣಿಕ ಪ್ರಗತಿ ಸಾಧಿಸಿದಂತಾಗುತ್ತದೆ.

587 ಆಟದ ಮೈದಾನ: ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಆಟದ ಮೈದಾನ ನಿರ್ಮಾಣ ಮಾಡಲು ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 253 ಸರ್ಕಾರಿ ಶಾಲಾ ಆಟದ ಮೈದಾನಗಳು ಪ್ರಗತಿ ಹಂತದಲ್ಲಿವೆ. ಸಿಂಥೆಟಿಕ್ ಆಟದ ಮೈದಾನಗಳಾದ ವಾಲಿಬಾಲ್, ಶಟಲ್, ಬಾಸ್ಕೆಟ್ ಬಾಲ್ ಹಾಗೂ ಮಣ್ಣಿನ ಆಟದ ಮೈದಾನಗಳಾದ ಕಬ್ಬಡ್ಡಿ, ಖೋ ಖೋ ಮೈದಾನಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಮಾಡಲಾಗುತ್ತಿದೆ.