ಸಾರಾಂಶ
ಮುಂಡಗೋಡ: ರಾಜ್ಯದ ಜನತೆಗೆ ಸುರಕ್ಷತೆ ಹಾಗೂ ಸಮರ್ಪಕ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಸಾರಿಗೆ ಸಂಸ್ಥೆಗೆ ಕಾಯಕಲ್ಪ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸೋಮವಾರ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ₹೪ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಸಾರಿಗೆ ಸಂಸ್ಥೆ ಬಸ್ (ಘಟಕ) ಡಿಪೋ ಉದ್ಘಾಟಿಸಿ ಮಾತನಾಡಿದರು.ನಿತ್ಯ ೧.೧೦ ಕೋಟಿ ಜನ ರಾಜ್ಯ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಶಕ್ತಿ ಯೋಜನೆ ಜಾರಿಯಾದ ಬಳಿಕ ಸುಮಾರು ೨೫ ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ರಾಜ್ಯ ಸಾರಿಗೆ ಸಂಸ್ಥೆಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
ಮತ್ತೆ ೩೭೫ ಹೊಸ ಬಸ್‌ಗಳನ್ನು ಖರೀದಿಸಲಾಗಿದ್ದು, ಮತ್ತಷ್ಟು ಬಸ್‌ಗಳ ಖರೀದಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಎಲ್ಲ ಬಸ್ ಘಟಕಗಳಿಗೆ ಅಗತ್ಯ ಬಸ್‌ಗಳನ್ನು ಒದಗಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಕೊರೋನಾ ಸಂದರ್ಭದಲ್ಲಿ ೩೮೦೦ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಗ್ರಾಮಾಂತರ ಹಾಗೂ ನಗರ ಪ್ರದೇಶದ ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.ಶೀಘ್ರ ಕಾರ್ಯಾರಂಭ: ಈ ಭಾಗದ ಜನತೆಯ ಹಲವು ವರ್ಷಗಳ ಬೇಡಿಕೆಯಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಡಿಪೋ ನಿರ್ಮಾಣ ಮಾಡಲಾಗಿದ್ದು, ಡೀಸೆಲ್ ಪಂಪ್ ಹಾಗೂ ಕಾಂಕ್ರಿಟ್ ಬೆಡ್ ಕೂಡ ಶೀಘ್ರದಲ್ಲಿ ಪೂರ್ಣಗೊಳಿಸಿ ಅಗತ್ಯ ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ನೀಡಿ ಸಕಲ ಸೌಲಭ್ಯದೊಂದಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಮುಂಡಗೋಡದಲ್ಲಿ ಬಸ್ ಡಿಪೋ ನಿರ್ಮಾಣವಾಗಿರುವುದು ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಈವರೆಗೆ ಸುತ್ತಮುತ್ತ ಪ್ರದೇಶದ ಡಿಪೋಗಳ ಬಸ್‌ಗಳನ್ನು ಅವಲಂಬಿಸಿ ಪ್ರಯಾಣಿಸಬೇಕಾದ ಪರಿಸ್ಥಿತಿ ಇಲ್ಲಿಯ ಜನರದ್ದಾಗಿತ್ತು. ಪ್ರತಿಯೊಂದು ಡಿಪೋದವರು ಕೂಡ ತಮ್ಮ ಲಾಭವನ್ನು ಗಮನದಲ್ಲಿಟ್ಟುಕೊಂಡು ಬಸ್ ಬಿಡುತ್ತಿದ್ದರು. ಇದರಿಂದ ಸಮರ್ಪಕ ಬಸ್ ಸೌಲಭ್ಯವಿಲ್ಲದೆ ತಾಲೂಕಿನ ಜನತೆ ತೀವ್ರ ತೊಂದರೆ ಅನುಭವಿಸಬೇಕಾಗಿತ್ತು. ವಿಶೇಷವಾಗಿ ಹೆಣ್ಣುಮಕ್ಕಳು ಪಟ್ಟ ಪಾಡು ಅಷ್ಟಿಷ್ಟಲ್ಲ. ಇಷ್ಟು ದಿನ ನಾವು ದತ್ತುಪುತ್ರರಾಗಿದ್ದೆವು. ಈಗ ನಮ್ಮದೇ ಆದ ಸ್ವಂತ ಡಿಪೋ ಆಗಿರುವುದರಿಂದ ತಾಲೂಕಿನ ಸಾರಿಗೆ ವ್ಯವಸ್ಥೆಗೆ ಒಂದು ಶಕ್ತಿ ಬಂದಂತಾಗಿದ್ದು, ಈ ಭಾಗದ ಬಹುದಿನದ ಕನಸು ನನಸಾದಂತಾಗಿದೆ ಎಂದರು.ಮಾಜಿ ಶಾಸಕ ವಿ.ಎಸ್. ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿದರು. ಕೆಎಸ್ಆರ್‌ಟಿಸಿ ಶಿರಸಿ ವಿಭಾಗ ನಿಯಂತ್ರಣಾಧಿಕಾರಿ ಕೆ.ಎಚ್. ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್. ದುಂಡಸಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಧುರೀಣ ಕೃಷ್ಣ ಹಿರೇಹಳ್ಳಿ, ಗುಡ್ಡಪ್ಪ ಕಾತೂರ, ವಾಯವ್ಯ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ ಮುಖ್ಯ ಸಂಚಾರಿ ವ್ಯವಸ್ಥಾಪಕ ವಿವೇಕಾನಂದ, ಸಿವಿಲ್ ಎಂಜಿನಿಯರ್ ದಿವಾಕರ ಯರಗೊಪ್ಪ ಮುಂತಾದವರು ಉಪಸ್ಥಿತರಿದ್ದರು. ಭೋಜರಾಜ ನಿರೂಪಿಸಿದರು. ಪ್ರಕಾಶ ನಾಯ್ಕ ವಂದಿಸಿದರು.