ಹಂಪಿಯಲ್ಲಿ ರಾಜ್ಯದ 2ನೇ ಅತಿದೊಡ್ಡ ತಾರಾಲಯ ನಿರ್ಮಾಣಕ್ಕೆ ಚಿಂತನೆ: ಸಚಿವ ಬೋಸರಾಜು

| Published : May 20 2025, 01:20 AM IST / Updated: May 20 2025, 01:21 AM IST

ಹಂಪಿಯಲ್ಲಿ ರಾಜ್ಯದ 2ನೇ ಅತಿದೊಡ್ಡ ತಾರಾಲಯ ನಿರ್ಮಾಣಕ್ಕೆ ಚಿಂತನೆ: ಸಚಿವ ಬೋಸರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿಯಲ್ಲಿ ರಾಜ್ಯದ ಎರಡನೇ ಅತಿದೊಡ್ಡ ಹಾಗೂ ಕಲ್ಯಾಣ ಕರ್ನಾಟಕದ ಅತಿ ದೊಡ್ಡ ತಾರಾಲಯ ಹಾಗೂ ವಿಜ್ಞಾನ ಕೇಂದ್ರ ನಿರ್ಮಿಸಲಾಗುವುದು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿಯಲ್ಲಿ ರಾಜ್ಯದ ಎರಡನೇ ಅತಿದೊಡ್ಡ ಹಾಗೂ ಕಲ್ಯಾಣ ಕರ್ನಾಟಕದ ಅತಿ ದೊಡ್ಡ ತಾರಾಲಯ ಹಾಗೂ ವಿಜ್ಞಾನ ಕೇಂದ್ರ ನಿರ್ಮಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.

ಕಲ್ಯಾಣ ಕರ್ನಾಟಕದ ಭಾಗದ ಜನಪ್ರಿಯ ಪ್ರವಾಸಿ ತಾಣ ವಿಜಯನಗರ ಜಿಲ್ಲೆಯ ಕಮಲಾಪುರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ನೂತನ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸೋಮವಾರ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ಯುವ ಜನರಲ್ಲಿ ವೈಜ್ಞಾನಿಕ ಮನೋಭಾವ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಆಶಯದಂತೆ ಪ್ರತಿ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ನಿರ್ಮಿಸಲಾಗುತ್ತಿದೆ. ಯುನೆಸ್ಕೋ ಪಾರಂಪರಿಕ ತಾಣವಾಗಿರುವ ಹಂಪಿಯಲ್ಲಿ ಉತ್ತಮ ದರ್ಜೆಯ ಸೌಲಭ್ಯಗಳನ್ನು ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಉತ್ತಮ ಜಾಗ ಮಂಜೂರು:ಕಮಲಾಪುರದ ಪ್ರಮುಖ ಜಾಗವನ್ನು ವಿಜ್ಞಾನ ಕೇಂದ್ರ ಹಾಗೂ ತಾರಾಲಯ ನಿರ್ಮಾಣಕ್ಕೆ ಉತ್ತಮ ಜಾಗವನ್ನು ಮಂಜೂರು ಮಾಡಲಾಗಿದೆ. ಪ್ರಮುಖ ರಸ್ತೆಯಲ್ಲಿ 10 ಎಕರೆ ಜಾಗ ಮಂಜೂರಾಗಿದ್ದು ಉತ್ತಮ ವಿನ್ಯಾಸದ ಮೂಲಕ ಜಾಗದ ಸದುಪಯೋಗ ಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ರಾಜ್ಯದ ಎರಡನೇ ಅತಿದೊಡ್ಡ ತಾರಾಲಯ:

ಕಲ್ಯಾಣ ಕರ್ನಾಟಕದ ಅತಿದೊಡ್ಡ ಹಾಗೂ ರಾಜ್ಯದ ಎರಡನೇ ಅತಿದೊಡ್ಡ ತಾರಾಲಯವನ್ನು ಇಲ್ಲಿ ನಿರ್ಮಿಸಲು ಯೋಜಿಸಲಾಗಿದೆ. 12 ಮೀಟರ್ ನಾನೋಸೀಮ್ ಡೋಮ್ ತಾರಾಲಯ ಹಾಗೆಯೇ ಅತ್ಯಾಧುನಿಕ ಸೌಲಭ್ಯ ಹೊಂದಿರುವ ವಿಜ್ಞಾನ ಕೇಂದ್ರ ನಿರ್ಮಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಈ ಜಾಗವನ್ನು ನೀಡಿದೆ. ಇಲ್ಲಿ ಕಾಮಗಾರಿಗಳ ಪ್ರಾರಂಭಕ್ಕೆ ಅಗತ್ಯ ತಯಾರಿ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಈ ಸಂಧರ್ಭ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್ನ) ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಪ್ರಭು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.