ದೇಶ ಪ್ರಗತಿ ಪಥದತ್ತ ಹೆಜ್ಜೆ ಹಾಕುತ್ತಿರುವ ಕಾಲಘಟ್ಟದಲ್ಲಿ ನಮ್ಮ ಮುಂದೆ ಪರಿಸರ ಮಾಲಿನ್ಯ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕೈಗಾರಿಕೆಗಳು ಹೆಚ್ಚಿದಂತೆ ಜಲ ಮಾಲಿನ್ಯ, ವಾಯು ಮಾಲಿನ್ಯ, ಅರಣ್ಯ ನಾಶ ಸೇರಿದಂತೆ ಹತ್ತು ಹಲವು ಪರಿಸರ ಸಮಸ್ಯೆಗಳು ಕಾಡುತ್ತಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ತಮ್ಮ ಹುಟ್ಟುಹಬ್ಬ ಆಚರಣೆ ವೇಳೆ ಅನಗತ್ಯ ಆಚರಣೆ ಕೈಬಿಟ್ಟು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ನಾಗಮಂಗಲದ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಸಾರಿಗೆ ನಿರೀಕ್ಷಕ ಸಿ.ಎಸ್.ಸತೀಶ್ ಕರೆ ನೀಡಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಾಗಮಂಗಲದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಯಲ್ಲಿ ಜಾಗೃತಿ ಭಿತ್ತಿ ಚಿತ್ರ ಬಿಡುಗಡೆ ಮಾಡಿ ಮಾತನಾಡಿದರು.

ದೇಶ ಪ್ರಗತಿ ಪಥದತ್ತ ಹೆಜ್ಜೆ ಹಾಕುತ್ತಿರುವ ಕಾಲಘಟ್ಟದಲ್ಲಿ ನಮ್ಮ ಮುಂದೆ ಪರಿಸರ ಮಾಲಿನ್ಯ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕೈಗಾರಿಕೆಗಳು ಹೆಚ್ಚಿದಂತೆ ಜಲ ಮಾಲಿನ್ಯ, ವಾಯು ಮಾಲಿನ್ಯ, ಅರಣ್ಯ ನಾಶ ಸೇರಿದಂತೆ ಹತ್ತು ಹಲವು ಪರಿಸರ ಸಮಸ್ಯೆಗಳು ಕಾಡುತ್ತಿವೆ ಎಂದರು.

ನಗರೀಕರಣದ ಪರಿಣಾಮ ಘನ ತ್ಯಾಜ್ಯ ವಿಲೇ ಸಮಸ್ಯೆ ಕಾಡುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಿದಂತೆ ವಾಯು ಮಾಲಿನ್ಯ, ಕೈಗಾರಿಕೀಕರಣ, ಸಾರಿಗೆ ಸಂಚಾರ ವ್ಯವಸ್ಥೆ, ಕಲ್ಲು ಗಣಿಗಾರಿಕ ಮುಂತಾದವುಗಳಿಂದ ಪರಿಸರ ಸ್ವಚ್ಚತೆ ಹಾಳಾಗುತ್ತಿದೆ. ಇದರಿಂದ ಮನುಷ್ಯನಿಗೆ ಅಸ್ತಮಾ, ಶ್ವಾಸಕೋಶದ ಸಮಸ್ಯೆ, ಚರ್ಮರೋಗಗಳು ಮುಂತಾದ ನಾನಾ ರೋಗಗಳು ಕಾಡುತ್ತಿವೆ ಎಂದು ಎಚ್ಚರಿಸಿದರು.

ಜಾಗೃತಿ ಮಾಸಾಚರಣೆ ಉದ್ಘಾಟಿಸಿದ ಸಹಾಯಕ ಸಾರಿಗೆ ಅಧಿಕಾರಿ ಹೊನ್ನೇಗೌಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಾಯು ಮಾಲಿನ್ಯದ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಕಾರಣದಿಂದ ಸಾರಿಗೆ ಇಲಾಖೆಯ ವತಿಯಿಂದ ಸದರಿ ಕಾಲೇಜಿನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಇಲಾಖೆ ನಿವೃತ್ತ ಅಧಿಕಾರಿ ಎಂ.ಜಿ.ಎನ್ ಪ್ರಸಾದ್ ಪ್ರಾತ್ಯಕ್ಷಿತೆಗಳ ಮೂಲಕ ವಾಯ ಮಾಲಿನ್ಯದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳನ್ನು ತಿಳಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಸಾರಿಗೆ ಇಲಾಖೆಯ ಶಹಬಾಜ್‌ಖಾನಂ, ಪ್ರಾಧ್ಯಾಪಕ ಡಾ.ಜಯಕೀರ್ತಿ, ಎಲ್.ಎನ್.ಶೋಬಾ, ಆನಂದ್, ನಂದೀಶ್, ಸಂಜಯ್, ಉದಯಕುಮಾರ್ ಮತ್ತಿತರರಿದ್ದರು.