ಸಾರಾಂಶ
ದೇಶದ ಅಭಿವೃದ್ಧಿಗೆ ನೈಸರ್ಗಿಕ ಸಂಪತ್ತು ಪ್ರಧಾನವಾಗಿದೆ.
ಕಲಿಕೇರಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ
ಕನ್ನಡಪ್ರಭ ವಾರ್ತೆ ಕನಕಗಿರಿದೇಶದ ಅಭಿವೃದ್ಧಿಗೆ ನೈಸರ್ಗಿಕ ಸಂಪತ್ತು ಪ್ರಧಾನವಾಗಿದೆ. ಎಲ್ಲರೂ ಮನೆ ಮುಂದೆ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದು ಗ್ರಾಪಂ ಅಧ್ಯಕ್ಷೆ ಕವಿತಾ ಹೇಳಿದರು.
ತಾಲೂಕಿನ ಸುಳೇಕಲ್ ಗ್ರಾಪಂ ವ್ಯಾಪ್ತಿಯ ಕಲಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ಕನಕಗಿರಿ ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ಈಚೆಗೆ ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು. ಪರಿಸರದ ಮೇಲೆ ಅತಿಯಾದ ದಬ್ಬಾಳಿಕೆಯಿಂದ ಪ್ರಕೃತಿ ಮುನಿಸಿಕೊಳ್ಳುತ್ತಿದೆ. ಹೀಗಾಗಿ ಅನೇಕ ವಿಕೋಪಗಳು ಎದುರಾಗುತ್ತಿವೆ. ಪರಿಸರ ರಕ್ಷಣೆ ಮಾಡಿದರಷ್ಟೇ ಸಮೃದ್ಧ ಮಳೆ, ಬೆಳೆ ನಿರೀಕ್ಷಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸಬೇಕು ಎಂದು ಹೇಳಿದರು.ಆನಂತರ ಪಿಡಿಒ ಹನುಮಂತಪ್ಪ ಮಾತನಾಡಿ, ಪರಿಸರ ಅಸಮತೋಲನದಿಂದ ತಾಪಮಾನ ಹೆಚ್ಚಳವಾಗಿದೆ.
ಸರಿಯಾದ ಆಮ್ಲಜನಕ ಸಿಗದೆ ಜನ ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಸಸಿ ಬೆಳೆಸುವುದು ಅನಿವಾರ್ಯವಾಗಿದೆ ಎಂದರು.ಬಳಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ವಿವಿಧ ಜಾತಿಯ ನೂರಕ್ಕೂ ಹೆಚ್ಚು ಸಸಿಗಳನ್ನು ತಮ್ಮ ತಾಯಿ ಹೆಸರಿನಲ್ಲಿ ನೆಟ್ಟು ಪರಿಸರ ಸಂರಕ್ಷಣೆಗೆ ತಾವು ಸದಾ ಸಿದ್ಧರಾಗಿರುವ ಸಂದೇಶ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಶಿವಾನಂದ ವಂಕಲಕುಂಟಿ, ಸದಸ್ಯರಾದ ನಾಗರಾಜ, ಯಮನೂರಪ್ಪ, ಲಕ್ಷ್ಮೀ ಬೆಟ್ಟಪ್ಪ,ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಾದ ಕವಿತಾ ನಾಯಕ, ಮಹಾಂತೇಶ, ತಾಲೂಕು ಐಇಸಿ ಸಂಯೋಜಕ ಶಿವಕುಮಾರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಪ್ಪ, ಮುಖ್ಯೋಪಾಧ್ಯಾಯ ಬಸಪ್ಪ ಕರಾಬದಿನ್ನಿ, ಶಿಕ್ಷಕರಾದ ಜಡಿಯಪ್ಪ, ರಮೇಶ, ಮಲ್ಲಪ್ಪ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.