ಶಿಕ್ಷಕರಿಗೆ ಸಮಾಲೋಚನಾ ಸಭೆ ಸಹಕಾರಿ: ಇಸ್ರಾತ್ ಜಹಾನ್

| Published : Aug 26 2024, 01:43 AM IST

ಸಾರಾಂಶ

ಶಿಕ್ಷಕರಿಗೆ ಬೋಧನೆಯಲ್ಲಿ ಬರುವ ತೊಂದರೆಗಳು ಮತ್ತು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಮಾಲೋಚನಾ ಸಭೆ ಸಹಕಾರಿಯಾಗಲಿದೆ, ಇಂತಹ ಸಭೆಗಳ ಸದುಪಯೋಗ ಪಡೆದುಕೊಂಡು ಶಿಕ್ಷಕರು ಕ್ರಿಯಾಶೀಲರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂದು ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರು ಹಾಗೂ ಹಳೇ ಡೇರಾದ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಇಸ್ರಾತ್ ಜಹಾನ್ ಹೇಳಿದರು.

ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ವಿಷಯ ಶಿಕ್ಷಕರ ೨೦೨೪-೨೫ನೇ ಸಾಲಿನ ಪ್ರಥಮ ಸಮಾಲೋಚನಾ ಸಭೆ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಶಿಕ್ಷಕರಿಗೆ ಬೋಧನೆಯಲ್ಲಿ ಬರುವ ತೊಂದರೆಗಳು ಮತ್ತು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಮಾಲೋಚನಾ ಸಭೆ ಸಹಕಾರಿಯಾಗಲಿದೆ, ಇಂತಹ ಸಭೆಗಳ ಸದುಪಯೋಗ ಪಡೆದುಕೊಂಡು ಶಿಕ್ಷಕರು ಕ್ರಿಯಾಶೀಲರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂದು ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರು ಹಾಗೂ ಹಳೇ ಡೇರಾದ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಇಸ್ರಾತ್ ಜಹಾನ್ ಹೇಳಿದರು.

ನಗರದ ಹಳೇ ಡೇರಾದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ವಿಷಯ ಶಿಕ್ಷಕರ ೨೦೨೪- ೨೫ನೇ ಸಾಲಿನ ಪ್ರಥಮ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಶಿಬಿರ ಪ್ರಯೋಜನ ಪಡೆದುಕೊಂಡು ಶಿಕ್ಷಕರು ತರಗತಿ ಬೋಧನೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಗತಿ ಸಾಧಿಸುವಂತೆ ಕಾರ್ಯನಿರ್ವಹಿಸಬೇಕು ಎಂದರು.

ಶಿಕ್ಷಣ ಸಂಯೋಜಕ, ಸಮಾಲೋಚನ ಸಭೆಗಳ ಮೇಲುಸ್ತುವಾರಿ ಯೋಗೇಶ್ ಚಕ್ಕೆರೆ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಶಿಕ್ಷಕರ ಬೋಧನಾ ಸಮಸ್ಯೆಗಳ ಪರಿಹಾರಕ್ಕೆ ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ಈ ಸಮಾಲೋಚನೆ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ಪ್ರೌಢಶಾಲಾ ಶಿಕ್ಷಕರು ಈ ಸಮಾಲೋಚನಾ ಸಭೆಯನ್ನು ಸದುಪಯೋಗಪಡಿಸಿಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸಲು ಕಾರ್ಯೋನ್ಮುಖರಾಗುವಂತೆ ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳು ಪಠ್ಯದ ಕ್ಲಿಷ್ಟಾಂಶಗಳು, ಎಫ್‌ಎಲ್‌ಎನ್, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸುವ ಬಗ್ಗೆ, ವಿಶೇಷ ತರಗತಿ, ಗ್ರಂಥಾಲಯ ಸದ್ಬಳಕೆ, ಗುಂಪು ಅಧ್ಯಯನ, ಟಿಎಲ್‌ಎಂ ತಯಾರಿಕೆ, ಸಂಭ್ರಮ ಶನಿವಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಶಿಕ್ಷಕರಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ತಾಲೂಕಿನ ೬೫ ಪ್ರೌಢಶಾಲೆಗಳಿಂದ ಕನ್ನಡ ಭಾಷೆ ಬೋಧಿಸುವ ಪ್ರೌಢಶಾಲಾ ಶಿಕ್ಷಕರು ಹಾಜರಾಗಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

ಕಾರ್ಯಾಗಾರದಲ್ಲಿ ಉರ್ದು ಶಿಕ್ಷಣ ಸಂಯೋಜಕ ಇಸ್ರಾರ್ ಪಾಷ, ತಾಲೂಕು ಸರ್ಕಾರಿ ನೌಕರರ ಸಂಘದ ಖಜಾಂಚಿ ಹಾಗೂ ಸಮಾಲೋಚನಾ ಸಭೆಯ ಸುಗಮಕಾರರಾದ ಚಿಕ್ಕಚನ್ನೆಗೌಡ, ಸಂಪನ್ಮೂಲ ವ್ಯಕ್ತಿಗಳಾದ ಚಿಕ್ಕತಿಮ್ಮಶೆಟ್ಟಿ, ದುಂಡಪ್ಪ ಮುದಡಗಿ, ಸುರೇಶ್, ಸಿದ್ದರಾಜು, ಭಾಸ್ಕರ್ ಮತ್ತಿತರರಿದ್ದರು.------------ಪೊಟೋ೨೫ಸಿಪಿಟಿ೨: ನಗರದ ಹಳೇ ಡೇರಾದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ವಿಷಯ ಶಿಕ್ಷಕರ ೨೦೨೪- ೨೫ನೇ ಸಾಲಿನ ಪ್ರಥಮ ಸಮಾಲೋಚನಾ ಸಭೆಯನ್ನು ಇಸ್ರಾತ್ ಜಹಾನ್ ಹಾಗೂ ಇತರರು ಉದ್ಘಾಟಿಸಿದರು.