ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಗಿಡಗಳು ಹನನ

| Published : Jun 17 2024, 01:33 AM IST

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಗಿಡಗಳು ಹನನ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯ ಗೋಪನಕೊಪ್ಪ-ಉಣಕಲ್ಲ ರಸ್ತೆಯಲ್ಲಿ ವಸುಂಧರಾ ಫೌಂಡೇಶನ್‌ ವತಿಯಿಂದ ಕಳೆದ 6 ವರ್ಷಗ‍ಳ ಹಿಂದೆ 150ಕ್ಕೂ ಅಧಿಕ ಸಸಿಗಳನ್ನು ಇಲ್ಲಿ ನೆಟ್ಟು ಪೋಷಿಸಿಕೊಂಡು ಬರುತ್ತಿದೆ. ಆದರೆ, ಕಳೆದ 2-3 ತಿಂಗಳಿನಿಂದ ಇವುಗಳಿಗೆ ಡಬ್ಬಾ ಅಂಗಡಿಗಳು ಮಾರಕವಾಗಿ ಪರಿಣಮಿಸಿವೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಕಳೆದ 6 ವರ್ಷಗಳಿಂದ ಮಗುವಿನಂತೆ ಕಾಪಾಡಿಕೊಂಡು ಬಂದಿರುವ ನೂರಾರು ಮರಗಳಿಗೆ ಈಗ ಕುತ್ತು ಬಂದಿದೆ. ಬೀದಿಬದಿ ಡಬ್ಬಾ ಅಂಗಡಿಗಳನ್ನಿಡುವ ಸಲುವಾಗಿ ಸಮೃದ್ಧವಾಗಿ ಬೆಳೆದ ಗಿಡಗಳಿಗೆ ಕೆಲವರು ಬೆಂಕಿಹಚ್ಚಿ ಹಾಳು ಮಾಡುತ್ತಿದ್ದಾರೆ. ಇನ್ನು ಕ್ರಮಕೈಗೊಳ್ಳಬೇಕಿದ್ದ ಪಾಲಿಕೆ ಅಧಿಕಾರಿಗಳು ಜಾಣಕುರುಡು ನೀತಿ ಅನುಸರಿಸಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿನ ಗೋಪನಕೊಪ್ಪ-ಉಣಕಲ್ಲ ರಸ್ತೆಯಲ್ಲಿ ವಸುಂಧರಾ ಫೌಂಡೇಶನ್‌ ವತಿಯಿಂದ ಕಳೆದ 6 ವರ್ಷಗ‍ಳ ಹಿಂದೆ 150ಕ್ಕೂ ಅಧಿಕ ಸಸಿಗಳನ್ನು ಇಲ್ಲಿ ನೆಟ್ಟು ಪೋಷಿಸಿಕೊಂಡು ಬರುತ್ತಿದೆ. ಆದರೆ, ಕಳೆದ 2-3 ತಿಂಗಳಿನಿಂದ ಇವುಗಳಿಗೆ ಡಬ್ಬಾ ಅಂಗಡಿಗಳು ಮಾರಕವಾಗಿ ಪರಿಣಮಿಸಿವೆ.

ಗೋಪನಕೊಪ್ಪದಿಂದ ಉಣಕಲ್ಲಿಗೆ ಸಂಪರ್ಕಿಸುವ ರಸ್ತೆಯ ಪಕ್ಕದಲ್ಲಿರುವ ನಾಲಾದ ಪಕ್ಕದಲ್ಲಿ ಸುಮಾರು 2 ಕಿಮೀ ವರೆಗೆ ಕಳೆದ 6 ವರ್ಷಗಳ ಹಿಂದೆ ವಸುಂಧರಾ ಫೌಂಡೇಶನ್‌ ಖಾಸಗಿ ಸಂಸ್ಥೆಯು ಸಾಲುಮರದ ತಿಮ್ಮಕ್ಕ ಅವರ ಪರಿಸರ ಕಾಳಜಿಯನ್ನು ಮಾದರಿಯಾಗಿಟ್ಟುಕೊಂಡು 150ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಪೋಷಿಸಿಕೊಂಡು ಬರುತ್ತಿದೆ. ನಿತ್ಯವೂ ಈ ಸಸಿಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಕುತ್ತಾ ಪೋಷಿಸಿಕೊಂಡು ಹೋಗುತ್ತಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಇಲ್ಲಿಗೆ ಸಾಲುಮರದ ತಿಮ್ಮಕ್ಕನವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಈಗ ಕೆಲವರ ಕುತಂತ್ರದಿಂದಾಗಿ ಈ ಸುಂದರವಾದ ಗಿಡಗಳು ಇಂದು ಹನನವಾಗುತ್ತಿವೆ.

ಗಿಡಗಳ ಬುಡಕ್ಕೆ ಬೆಂಕಿ: ಸಮೃದ್ಧವಾಗಿ ಬೆಳೆದಿರುವ ಗಿಡಗಳ ಅಕ್ಕಪಕ್ಕದಲ್ಲಿರುವ ಖಾಲಿ ಜಾಗದ ಮೇಲೆ ಕೆಲವರ ಕಣ್ಣು ಬಿದ್ದಿದ್ದು, ಡಬ್ಬಾ ಅಂಗಡಿ ಇಡಲು ರಾತ್ರಿ ಗಿಡಗಳ ಬುಡಕ್ಕೆ ಕಸ ಹಾಕಿ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಈಗಾಗಲೇ ಗಿಡಗಳ ಅಕ್ಕಪಕ್ಕದಲ್ಲಿಯೇ 8-10 ಡಬ್ಬಾ ಅಂಗಡಿಗಳು ಅನಧಿಕೃತವಾಗಿ ತಲೆಎತ್ತಿವೆ. ಕೆಲವು ಡಬ್ಬಾ ಅಂಗಡಿಗಳನ್ನು ಈ ಗಿಡಗಳನ್ನೇ ಮರೆಮಾಚಿ ಕಟ್ಟಿಕೊಂಡಿದ್ದಾರೆ. ಇದರಿಂದಾಗಿ ಹಲವು ಗಿಡಗಳು ಒಣಗಿವೆ. ಇನ್ನು ಕೆಲವು ಗಿಡಗಳು ಒಣಗುವ ಹಂತಕ್ಕೆ ತಲುಪಿವೆ.

ಪಾಲಿಕೆಯ ದಿವ್ಯ ನಿರ್ಲಕ್ಷ್ಯ: ಇಲ್ಲಿನ ಸ್ಥಿತಿ ಕುರಿತು ಈಗಾಗಲೇ ವಸುಂಧರಾ ಫೌಂಡೇಶನ್‌ ಕಾರ್ಯಕರ್ತರು, ಹಲವು ಪರಿಸರ ಪ್ರೇಮಿಗಳು ಹಲವು ಬಾರಿ ಪಾಲಿಕೆಗೆ ಮನವಿ ಸಲ್ಲಿಸಿದರೂ ಸಹ ಈ ವರೆಗೂ ಸ್ಪಂದಿಸಿಲ್ಲ. ಈಚೆಗೆ ತಾಲೂಕು ಆಡಳಿತ ಭವನಕ್ಕೆ ಅಹವಾಲು ಸ್ವೀಕರಿಸಲು ಆಗಮಿಸಿದ್ದ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದ್ದು, ಕೂಡಲೇ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಯಾವುದೇ ಪ್ರಗತಿ ಕಂಡಿಲ್ಲ.

ಹು-ಧಾ ಮಹಾನಗರದಲ್ಲಿ ಒಂದು ಲಕ್ಷ ಸಸಿ ನೆಡುವ ಸಂಕಲ್ಪ ಹೊಂದಿರುವ ಪಾಲಿಕೆಯು ಸಮೃದ್ಧವಾಗಿ ಬೆಳೆದು ನಿಂತಿರುವ ಗಿಡಗಳ ರಕ್ಷಣೆಗೆ ಮುಂದಾಗುತ್ತಿಲ್ಲ. ಇದ್ದ ಗಿಡಗಳನ್ನು ರಕ್ಷಿಸದ ಪಾಲಿಕೆ ಯಾವ ಪುರುಷಾರ್ಥಕ್ಕೆ ಹೊಸ ಸಸಿ ಬೆಳೆಸುತ್ತದೆ ಎಂಬುದು ಸ್ಥಳೀಯ ಪ್ರಶ್ನೆ.

ಇನ್ನು ಮುಂದಾದರೂ ಎಚ್ಚೆತ್ತು ಇಲ್ಲಿ ಇರಿಸಲಾಗಿರುವ ಅನಧಿಕೃತ ಡಬ್ಬಾ ಅಂಗಡಿ ತೆರವುಗೊಳಿಸಿ ಗಿಡಗಳು ಬೆಳೆಯಲು ಅನುಕೂಲ ಕಲ್ಪಿಸಿಕೊಡಲಿ ಎಂಬುದು ಪರಿಸರ ಪ್ರೇಮಿಗಳ ಒಕ್ಕೊರಲ ಒತ್ತಾಯವಾಗಿದೆ.

ಕಳೆದ ಆರು ವರ್ಷಗಳಿಂದ ಮಗುವಿನಂತೆ ಗಿಡಗಳನ್ನು ಬೆಳೆಸುತ್ತಿದ್ದೇವೆ. ಕೆಲವರು ದುರುದ್ದೇಶದೊಂದಿಗೆ ಇವುಗಳಿಗೆ ಬೆಂಕಿಹಚ್ಚಿ ಡಬ್ಬಾ ಅಂಗಡಿ ಇರಿಸುತ್ತಿದ್ದಾರೆ. ಈ ಕುರಿತು ಪಾಲಿಕೆ ಆಯುಕ್ತರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ ಎಂದು ವಸುಂಧರಾ ಫೌಂಡೇಶನ್‌ ಅಧ್ಯಕ್ಷ ಮೇಘರಾಜ ಕೆರೂರ ಹೇಳುತ್ತಾರೆ.