ಸಾರಾಂಶ
ಕೊಪ್ಪಳ:
ಭೂಮಿ ಹಸಿರಾಗಿರಲು ಹೆಚ್ಚೆಚ್ಚು ಗಿಡ ನೆಟ್ಟು ಕಾಡು ಬೆಳೆಸಬೇಕು. ಅಂದಾಗ ಮಾತ್ರ ಭೂಮಿ ರಕ್ಷಣೆ ಸಾಧ್ಯ ಎಂದು ಶಿರಸಿ ಫಾರೆಸ್ಟ್ರಿ ಕಾಲೇಜ್ ಮುಖ್ಯಸ್ಥ ಡಾ. ವಾಸುದೇವನ್ ಹೇಳಿದರು.ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೀರ್ಲೋಸ್ಕರ್ ಕಾರ್ಖಾನೆ ವತಿಯಿಂದ ಆಯೋಜಿಸಿದ್ದ ಕೀರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೫೫೦ ವರ್ಷಗಳ ಹಿಂದೆ ಪಕ್ಕದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಆನೆಗೊಂದಿಯಲ್ಲಿ ೨೦೦೦ ಆನೆ ಸಾಕುತಿದ್ದರು. ಆಗ ಆನೆಗುಂದಿ, ಹಂಪಿ, ಕೊಪ್ಪಳ ಸೇರಿದಂತೆ ೧೬ ವಿವಿಧ ಪ್ರಭೇದದ ಎಲೆ ಉದುರುವ ಮರಗಳ ಕಾಡುಗಳು ಇದ್ದವು ಎಂದು ಇತಿಹಾಸ ಮೆಲುಕು ಹಾಕಿದರು.ಕೊಪ್ಪಳ ಉಪವಿಭಾಗದ ಅರಣ್ಯಾಧಿಕಾರಿ ಅಬ್ದುಲ್ ಖಾನ್ ಮುಲ್ಲಾ ಮಾತನಾಡಿ, ಜಿಲ್ಲೆಯು ಕೇವಲ ಶೇ. ೭ರಷ್ಟು ಅರಣ್ಯ ಪ್ರದೇಶವಿದ್ದು ಇಲ್ಲಿ ಆನೆ, ಹುಲಿ, ಸಿಂಹದಂತಹ ದೊಡ್ಡ ಪ್ರಾಣಿಗಳನ್ನು ಹೊರತುಪಡಿಸಿ ವಿವಿಧ ಜಾತಿಯ ವನ್ಯಜೀವಿ ಪ್ರಾಣಿ ಸಂಪತ್ತು ಹೊಂದಿದ ವೈವಿಧ್ಯಮಯ ಜೀವ ಸಂಕಲವಿದೆ. ಅರಣ್ಯ ನಾಶ ಮಾಡಿದರೇ ಹವಾಮಾನ ವೈಪರಿತ್ಯ ಅನುಭವಿಸಬೇಕಾಗುತ್ತದೆ. ಹೀಗಾದರೆ ಕಾಲಕಾಲಕ್ಕೆ ಮಳೆ ಆಗುವುದಿಲ್ಲ. ಹೀಗಾಗಿ ಕಾರ್ಖಾನೆಗಳು ಅರಣ್ಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ ಶೇಕಡಾವಾರು ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಇದೇ ವೇಳೆ ಭೂಮಿ ಸಂರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪರಿಸರ ಪ್ರೇಮಿ ಗಜಾನನ ಭಟ್ ಅವರಿಗೆ ವಸುಂಧರಾ ಸನ್ಮಾನ ಅವಾರ್ಡ್ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಹಾಗೂ ಸಾರ್ವಜನಿಕ ಆಡಳಿತ ವಿಭಾಗದ ಕಾರ್ಯನಿರ್ವಾಹರ ಉಪಾಧ್ಯಕ್ಷ ಪಿ. ನಾರಾಯಣ, ಕಿರ್ಲೋಸ್ಕರ್ ಕಾರ್ಖಾನೆಯ ಹಣಕಾಸು ವಿಭಾಗದ ಮುಖ್ಯಸ್ಥ ಶ್ರೀವತ್ಸವನ್, ವಸುಂಧರಾ ಫೆಸ್ಟಿವಲ್ ನಿರ್ದೇಶಕರಾದ ವೀರೇಂದ್ರ ಚಿತ್ರವ್, ಅಧಿಕಾರಿಗಳಾದ ಉದ್ದವ್ ಕುಲಕರ್ಣಿ, ಚಂದ್ರಶೇಖರ, ಸಿ. ರಮೇಶ ಸೇರಿದಂತೆ ಹಲವು ಅಧಿಕಾರಿಗಳು, ಗುತ್ತಿಗೆದಾರರು, ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು ಇದ್ದರು.