ಮಾತೆಯ ಹೆಸರಲ್ಲಿ ಸಸಿ ನೆಟ್ಟು ಪ್ರಕೃತಿ ಉಳಿಸಿ

| Published : Aug 23 2024, 01:06 AM IST

ಸಾರಾಂಶ

ರಾಷ್ಟ್ರ ಮಟ್ಟದಲ್ಲಿ ನರೇಗಾ ಯೋಜನೆಯಡಿ ಅರಣ್ಯ ಇಲಾಖೆಯ ಒಗ್ಗೂಡಿಸುವಿಕೆಯೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ

ಗದಗ: ಜಿಲ್ಲೆಯಲ್ಲಿ ಪ್ರತಿ ಪ್ರಜೆಯು ಮಾತೆಯ ಹೆಸರಲ್ಲಿ ಒಂದು ಸಸಿ ನೇಡುವ ಮೂಲಕ ಪ್ರಕೃತಿ ಉಳಿಸೋಣ ಎಂದು ಜಿಪಂ ಸಿಇಒ ಭರತ. ಎಸ್‌ ಹೇಳಿದರು.

ಅವರು ನಗರದ ತಮ್ಮ ಸರ್ಕಾರಿ ನಿವಾಸದ ಆವರಣದಲ್ಲಿ ಗುರುವಾರ ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದಿಂದ ನಡೆದ ಮಾತೆಯ ಹೆಸರಲ್ಲಿ ಒಂದು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನ ಮಂತ್ರಿ ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿರುತ್ತಾರೆ, ಅದರಂತೆ ರಾಷ್ಟ್ರ ಮಟ್ಟದಲ್ಲಿ ನರೇಗಾ ಯೋಜನೆಯಡಿ ಅರಣ್ಯ ಇಲಾಖೆಯ ಒಗ್ಗೂಡಿಸುವಿಕೆಯೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಡಿ 2024-25ನೇ ಸಾಲಿನ ಗುರಿಗನುಗುಣವಾಗಿ ಅನುಷ್ಠಾನಿಸಬೇಕಿರುವ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಹಾಸ ವರ್ಣೇಕರ್ ಸೇರಿದಂತೆ ಅರಣ್ಯ,ತೋಟಗಾರಿಕೆ ಇಲಾಖೆಯ ಅಧಿಕಾರಿ, ಗಣ್ಯರು, ಸಿಬ್ಬಂದಿಗಳು ಇದ್ದರು.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ, ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣ, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ, ಗದಗ ತಾಲೂಕಿನ ಲಕ್ಕುಂಡಿ ಗ್ರಾಪಂ ಸರ್ಕಾರಿ ಹಿರಿಯ ಪ್ರೌಢಶಾಲೆ ಆವರಣ ಹಾಗೂ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಪಂ ವ್ಯಾಪ್ತಿಯ ಕಪ್ಪತ್ತಗಿರಿ ಗ್ರಾಮ ಮತ್ತು ಪೇಠಾಲೂರು ಗ್ರಾಮದಲ್ಲಿ ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಲಾಯಿತು.