ತೋಟದ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಲು ಹಾಸನ ಜಿಲ್ಲಾಧಿಕಾರಿಗೆ ಒತ್ತಾಯ

| Published : Jan 25 2024, 02:02 AM IST

ಸಾರಾಂಶ

ತೋಟ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸುವಂತೆ, ದಿನಕ್ಕೆ ೧೦೦೦ ರು. ಕನಿಷ್ಠ ಕೂಲಿ ನಿಗದಿಪಡಿಸುವಂತೆ ಹಾಗೂ ಮತ್ತಿತರ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ೨ನೇ ದಿನದ ಪ್ರತಿಭಟನೆಯಲ್ಲಿ ಕರ್ನಾಟಕ ಪ್ರೊವೆನ್ಷಿಯಲ್ ಪ್ಲಾಂಟೇಷನ್ ಕಾರ್ಮಿಕರ ಸಂಘದಿಂದ ತೋಟ ಕಾರ್ಮಿಕರು ಬುಧವಾರ ಹಾಸನದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಡಿಸಿ ಕಚೇರಿ ಮುಂದೆ ಪ್ಲಾಂಟೇಷನ್ ಕಾರ್ಮಿಕರ ಸಂಘ, ತೋಟದ ಕಾರ್ಮಿಕರ ಪ್ರತಿಭಟನೆ । ಸಿಐಟಿಯು ನೇತೃತ್ವ । ಜಿಲ್ಲಾಡಳಿತಕ್ಕೆ ಮನಿವಿಕನ್ನಡಪ್ರಭ ವಾರ್ತೆ ಹಾಸನ

ತೋಟ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸುವಂತೆ, ದಿನಕ್ಕೆ ೧೦೦೦ ರು. ಕನಿಷ್ಠ ಕೂಲಿ ನಿಗದಿಪಡಿಸುವಂತೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಂತೆ ಹಾಗೂ ಮತ್ತಿತರೆ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ೨ನೇ ದಿನದ ಪ್ರತಿಭಟನೆಯಲ್ಲಿ ಕರ್ನಾಟಕ ಪ್ರೊವೆನ್ಷಿಯಲ್ ಪ್ಲಾಂಟೇಷನ್ ಕಾರ್ಮಿಕರ ಸಂಘದಿಂದ ತೋಟ ಕಾರ್ಮಿಕರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಅತ್ಯಂತ ಕಡಿಮೆ ಕೂಲಿ ಹಾಗೂ ಅತಿ ಕಡಿಮೆ ನಾಗರಿಕ ಮತ್ತು ಸಾಮಾಜಿಕ ಸೌಲಭ್ಯಗಳನ್ನಷ್ಟೇ ಪಡೆದುಕೊಂಡು ಅತ್ಯಂತ ಕಡು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಂದಿನ ದುಬಾರಿ ಮಾರುಕಟ್ಟೆಯಲ್ಲಿ ಜೀವನ ನಡೆಸಲು ಬೇಕಾದ ಅತ್ಯಾವಶ್ಯಕ ವಸ್ತುಗಳು ಮತ್ತು ಸೇವೆಗಳ ಬೆಲೆಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ತೋಟದ ಕಾರ್ಮಿಕರು ತಮ್ಮ ಹಾಗೂ ತಮ್ಮ ಕುಟುಂಬದ ಕನಿಷ್ಠ ಅಗತ್ಯಕ್ಕೆ ಅನುಗುಣವಾದ ಆಹಾರ ಸಾಮಾಗ್ರಿಗಳು, ಬಟ್ಟೆಬರೆಗಳು, ಆರೋಗ್ಯ-ಔಷಧಿಗಳು, ವಸತಿ, ಶಿಕ್ಷಣ ಇತ್ಯಾದಿ ಕನಿಷ್ಠ ಜೀವನಾವಶ್ಯಕ ಅಗತ್ಯಗಳನ್ನೂ ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದರು.

ಸರ್ಕಾರ ತಂದಿರುವ ಕಾರ್ಮಿಕರ ಕಾಯ್ದೆ ಕಾನೂನುಗಳಲ್ಲಿನ ಬದಲಾವಣೆಗಳಿಂದಾಗಿ ಕಾರ್ಮಿಕರ ಶೋಷಣೆ ಮತ್ತಷ್ಟು ಹೆಚ್ಚಾಗುತ್ತಿದೆ. ತೋಟಗಳಲ್ಲಿ ಖಾಯಂ ಕಾರ್ಮಿಕರನ್ನು ಕಡಿಮೆ ಮಾಡುತ್ತ ಗುತ್ತಿಗೆ, ಹೊರಗುತ್ತಿಗೆ ಮತ್ತು ಸಾಂದರ್ಭಿಕ ಕಾರ್ಮಿಕ ಪದ್ಧತಿಯಲ್ಲಿ ತೋಟ ಕಾರ್ಮಿಕರನ್ನು ದುಡಿಸಿಕೊಳ್ಳುತ್ತ ಅವರಿಗೆ ಶಾಸನಬದ್ಧವಾಗಿ ನೀಡಬೇಕಾದ ಕನಿಷ್ಠ ಕೂಲಿ, ಭವಿಷ್ಯನಿಧಿ, ವೈಧ್ಯಕೀಯ ವೆಚ್ಛ, ಬೋನಸ್, ರಜೆಗಳು, ಗ್ರಾಚ್ಯುಟಿ ಇತ್ಯಾದಿ ಸೇವಾ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಕಾಫಿ ತೋಟಗಳಲ್ಲಿ ದುಡಿಯಲು ದೂರದ ಹೊರ ರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರನ್ನು ಅತ್ಯಂತ ಹೀನಾಯವಾಗಿ ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕೆಪಿಪಿಡಬ್ಲ್ಯೂಯು ಅಧ್ಯಕ್ಷರು ವಿ. ಸುಕುಮಾರ್, ಕಾರ್ಯದರ್ಶಿ ಸೌಮ್ಯ, ಖಜಾಂಚಿ ಟಿ. ರಮೇಶ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಜಿಲ್ಲಾ ಕಾರ್ಯದರ್ಶಿ ಅರವಿಂದ್ ಮತ್ತು ಜಯಂತಿ ಭಾಗವಹಿಸಿದ್ದರು.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ತೋಟದ ಕಾರ್ಮಿಕರು.