ಹಳ್ಳಿ ಗದ್ದೆಯಲ್ಲಿ ಪೇಟೆ ವಿದ್ಯಾರ್ಥಿಗಳಿಂದ ನಾಟಿ

| Published : Nov 18 2024, 12:07 AM IST

ಹಳ್ಳಿ ಗದ್ದೆಯಲ್ಲಿ ಪೇಟೆ ವಿದ್ಯಾರ್ಥಿಗಳಿಂದ ನಾಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಂಥಹ ದೊಡ್ಡ ನಗರಗಳ ವಿದ್ಯಾರ್ಥಿಗಳು ಹಳ್ಳಿಗೆ ಬಂದು ಹಳ್ಳಿನಾಡಿನಲ್ಲಿ ದುಡಿಯುವುದೇ ಬಲು ಅಪರೂಪದ ವಿದ್ಯಮಾನ. ಅದರಲ್ಲೂ ಇಂದಿನ ಓದಿನ ನಡುವೆಯೂ ಬೆಂಗಳೂರಿನ ವಿದ್ಯಾರ್ಥಿಗಳು ಕಾರ್ಕಳದ ಹಳ್ಳಿಯೊಂದಕ್ಕೆ ಬಂದು ನಾಟಿ ಮಾಡುವ ಮೂಲಕ ಜನರ ಮನಗೆದ್ದಿದ್ದಾರೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಬೆಂಗಳೂರಿನಂಥಹ ದೊಡ್ಡ ನಗರಗಳ ವಿದ್ಯಾರ್ಥಿಗಳು ಹಳ್ಳಿಗೆ ಬಂದು ಹಳ್ಳಿನಾಡಿನಲ್ಲಿ ದುಡಿಯುವುದೇ ಬಲು ಅಪರೂಪದ ವಿದ್ಯಮಾನ. ಅದರಲ್ಲೂ ಇಂದಿನ ಓದಿನ ನಡುವೆಯೂ ಬೆಂಗಳೂರಿನ ವಿದ್ಯಾರ್ಥಿಗಳು ಕಾರ್ಕಳದ ಹಳ್ಳಿಯೊಂದಕ್ಕೆ ಬಂದು ನಾಟಿ ಮಾಡುವ ಮೂಲಕ ಜನರ ಮನಗೆದ್ದಿದ್ದಾರೆ.

ಹೆಬ್ರಿ ತಾಲೂಕಿನ ವರಂಗ ಮಾತಿಬೆಟ್ಟು ಪೆರ್ಮಾನ್ ಬಾಕ್ಯಾರ್ ಗದ್ದೆಯಲ್ಲಿ ಬೆಂಗಳೂರಿನ ಆರ್‌ಸಿ ಕಾಲೇಜು, ಎಂಇಎಸ್ ಕಾಲೇಜು ಮಲ್ಲೇಶ್ವರಂ, ನೃಪತುಂಗ ಯುನಿವರ್ಸಿಟಿ, 18ನೇ ಕ್ರಾಸಿನ ಸರ್ಕಾರಿ ಪಿಯು ಕಾಲೇಜು, ಹೆಬ್ಬಾಳದ ಸರ್ಕಾರಿ ಪದವಿ ಕಾಲೇಜು, ಎಂಇಎಸ್ ಕಿಶೋರ ಕೇಂದ್ರ, 13 ಕ್ರಾಸಿನ ಸರ್ಕಾರಿ ಕಾಲೇಜು, ಶೇಷಾದ್ರಿಪುರಂ ಮೈನ್ ಕಾಲೇಜು, ಮಹಾರಾಣಿ ಕಾಲೇಜು, ಬೆಂಗಳೂರು ಆರ್ಟ್ಸ್ ಕಾಲೇಜು, ಕಾಮರ್ಸ್ ಕಾಲೇಜು ಹಾಗೂ ವಿಜ್ಞಾನ ಕಾಲೇಜು, ಜಿಆಫ್‌ಜಿಸಿ ಪೀಣ್ಯ, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು ಸೇರಿದಂತೆ ಒಟ್ಟು 15ಕ್ಕೂ ಹೆಚ್ಚಿನ ಕಾಲೇಜು ವಿದ್ಯಾರ್ಥಿಗಳು, ಭಾರತ ಸ್ಕೌಟ್ಸ್ ಗೈಡ್ಸ್‌ನ ಬೆಂಗಳೂರಿನ ಉತ್ತರ ಜಿಲ್ಲೆಯ ಒಟ್ಟು 150 ವಿದ್ಯಾರ್ಥಿಗಳು ಸುಮಾರು ನಾಲ್ಕು ಎಕರೆ ಗದ್ದೆಗಳಲ್ಲಿ ನಾಟಿ ಮಾಡಿ ಖುಷಿಪಟ್ಟರು.

ಪದವಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ತುಳುನಾಡಿನ ಪಾರ್ದನ ಹಾಗೂ ಕೆಸರು ಗದ್ದೆಯಲ್ಲಿ ಆಟವಾಡಿ ಸಂತಸಗೊಂಡರು.

ತುಳುನಾಡಿನ ಖಾದ್ಯದ ಝಲಕ್:

ಬೆಂಗಳೂರಿನ ವಿದ್ಯಾರ್ಥಿಗಳಿಗೆ ತುಳುನಾಡ ಸ್ವಾದಿಷ್ಟ ಭೋಜನ ಏರ್ಪಡಿಸಲಾಗಿತ್ತು. ಹಲಸಿನ ಸೊಳೆಯ ಸುಕ್ಕ, ಪತ್ರೊಡೆ, ಹುರುಳಿ ಚಟ್ನಿ, ಕುಚ್ಚಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿಯ ಅನ್ನ, ಸಾರು ಉಂಡು ಖುಷಿಪಟ್ಟರು.

ಸ್ಕೌಟ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ, ಬೆಂಗಳೂರಿನ ಉತ್ತರ ಜಿಲ್ಲೆಯ ಮುಖ್ಯ ಆಯುಕ್ತ ಪ್ರಸನ್ನ ಕುಮಾರ್, ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಶೆಷಾದ್ರಿ, ಉಡುಪಿ ಜಿಲ್ಲೆಯ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಸ್ಕೌಟ್ ಕಮಿಷನರ್ ಜನಾರ್ದನ ಕೊಡವೂರ್, ಗೈಡ್ ಆಯುಕ್ತ ಜ್ಯೋತಿ ಜೆ. ಪೈ, ನಿತಿನ್ ಅಮೀನ್ ಸೇರಿದಂತೆ ಹಲವರು ಸಹಕರಿಸಿದ್ದರು.

ಮುನಿಯಾಲು ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಸುಧಾಕರ ಕೆಜೆ, ಉಪನ್ಯಾಸಕರಾದ ಮಂಜುನಾಥ್, ಸುಭಾಷ್, ಶೋಭ ಪಿ.ಪಿ., ಲೀಲಾ, ಸುಭ್ರಮಣಿ, ವಿತೇಶ್ ಕಾಂಚನ್, ಶರತ್, ಸುಶಾಂತ್ ಕೆರೆಮಠ, ಕೃಷಿಕ ರತ್ನಾಕರ್ ಮೊದಲಾದವರು ಸಹಕರಿಸಿದರು.

.................

ಸಿಟಿ ದುನಿಯಾದ ಕರ್ಕಶ ಹಾರನ್ ಜೊತೆಗೆ ಜೀವನ ನಿಜಕ್ಕೂ ಕಷ್ಟಕರ. ಹಳ್ಳಿಯ ಬದುಕು ತುಂಬಾ ಮನಸ್ಸಿಗೆ ಹಿಡಿಸಿತು. ಕೃಷಿಕರ ನೋವು ನಲಿವುಗಳು ತಿಳಿದವು.। ಹರ್ಷಿತಾ, ನೃಪತುಂಗ ವಿಶ್ವವಿದ್ಯಾಲಯ

----------------

ಮಕ್ಕಳಿಗೆ ಶಿಕ್ಷಣ ಜೊತೆಗೆ ಕೃಷಿ ಚಟುವಟಿಕೆ ಪರಿಚಯಿಸುವ ವಿನೂತನ ಪ್ರಯತ್ನ ಇದಾಗಿದೆ. ತುಳುನಾಡಿನ ಸೊಗಡನ್ನು ತಿಳಿಸುವ ಹೊಸ ರೀತಿಯ ಪ್ರಯತ್ನ ಮಾಡಲಾಗಿದೆ.

। ಜನಾರ್ದನ ಕೊಡವೂರ್, ಸ್ಕೌಟ್ ಗೈಡ್ಸ್ ಕಮಿಷನರ್ ಉಡುಪಿ