ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇದೇ ಜೂ.13 ರಂದು ಹಮ್ಮಿಕೊಂಡಿರುವ 5 ಕೋಟಿ ಗಿಡ ನೆಡುವ ಚಾಲನಾ ಕಾರ್ಯಕ್ರಮಕ್ಕೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ತಿಳಿಸಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಪ್ರಶಾಂತಿ ಬಾಲ ಮಂದಿರ, ದರೆ ಫೌಂಡೇಷನ್ ಸಹಯೋಗದಲ್ಲಿ ರಾಜ್ಯದಲ್ಲಿ 5 ಕೋಟಿ ಸಸಿ ನೆಡುವ ಕಾರ್ಯಕ್ರಮದ ಕುರಿತಾಗಿ ಮಂಗಳವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಧ್ಯೇಯದೊಂದಿಗೆ ರಾಜ್ಯದಲ್ಲಿ 5 ಕೋಟಿ ಗಿಡಗಳನ್ನು ನೆಟ್ಟು ಬೆಳೆಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮುಂದಾಗಿರುವುದು ಹರ್ಷದಾಯಕವಾದ ವಿಚಾರವಾಗಿದ್ದು, ಈ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಚಾಲನೆ ದೊರಕುತ್ತಿರುವುದು ಸಂತಸದ ವಿಷಯವಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ್ ಶೆಟ್ಟಿ, ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ನ್ಯಾಯಾಲಯಗಳ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಹಂಚಾಟೆ ಸಂಜೀವ ಕುಮಾರ್ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮದ ಅಂಗವಾಗಿ 5 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಈ ವರ್ಷದಲ್ಲಿ 5 ಲಕ್ಷ ಗಿಡಗಳನ್ನು ನೆಡಲಾಗುವುದು. ಸ್ಥಳೀಯ ಸಾರ್ವಜನಿಕರು ಈ ಎಲ್ಲ ಗಿಡಗಳನ್ನು ಉಳಿಸಿ ಬೆಳೆಸಿಕೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕು ಎಂದು ಮನವಿ ಮಾಡಿದರು.ಮಂಚೇನಹಳ್ಳಿ,ಚೇಳೂರಲ್ಲಿ ಕಲಾಪ:ಜಿಲ್ಲೆಯಲ್ಲಿ ನೂತನವಾಗಿ ರಚನೆ ಆಗಿರುವ ಮಂಚೇನಹಳ್ಳಿ ಹಾಗೂ ಚೇಳೂರು ತಾಲೂಕು ಕೇಂದ್ರಗಳಲ್ಲಿ ಮುಂದಿನ ವಾರದಿಂದ ವಾರಕ್ಕೆ ಎರಡು ದಿನ ಕೋರ್ಟ್ ಕಲಾಪಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯಲಿವೆ. ಈ ತಾಲೂಕು ಕೇಂದ್ರಗಳಲ್ಲಿ ನ್ಯಾಯಾಲಯದ ಕಟ್ಟಡಗಳನ್ನು ನಿರ್ಮಿಸಲು ಜಾಗಗಳನ್ನು ಗುರ್ತಿಸುವ ಕಾರ್ಯ ಪ್ರಗತಿಯಲ್ಲಿದ್ದು, ನ್ಯಾಯಾಲಯಗಳ ಸ್ಥಾಪನೆಗೆ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಚಿಂತಾಮಣಿ ಮತ್ತು ಗುಡಿಬಂಡೆ ತಾಲೂಕು ಕೇಂದ್ರಗಳಲ್ಲಿರುವ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕಾತಿಯ ಕೊರತೆಯಿಂದ ನ್ಯಾಯಾಲಯದ ಕಲಾಪಗಳಿಗೆ ತೊಡಕಾಗಿತ್ತು. ಈ ಎರಡು ಕೋರ್ಟ್ ಗಳಿಗೆ ನೂತನವಾಗಿ ನ್ಯಾಯಾಧೀಶರು ನೇಮಕವಾಗಿದ್ದು, ಬರುವ 15 ರಿಂದ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿರುವ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ಹಾಗೂ ಸಮರ್ಪಕ ಇತ್ಯರ್ಥಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.ಜುಲೈ 11ಕ್ಕೆ ಬೃಹತ್ ಲೋಕ ಅದಾಲತ್: 2026ನೇ ಸಾಲಿನ ಎರಡನೇ ಬೃಹತ್ ಲೋಕ ಅದಾಲತ್ ಕಾರ್ಯಕ್ರಮವನ್ನು ಜುಲೈ 11ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿದ್ದು ಜಿಲ್ಲೆಯ ಸಾರ್ವಜನಿಕರು ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು. ಅದಾಲತ್ ನಲ್ಲಿ ರಾಜಿ ಸಂಧಾನವಾಗುವ ಸು. 16 ಸಾವಿರ ಪ್ರಕರಣಗಳನ್ನು ಈಗಾಗಲೇ ಗುರ್ತಿಸಲಾಗಿದೆ. ಸಂಬಂಧಪಟ್ಟ ಕಕ್ಷಿದಾರರು ಹಾಗೂ ಜಿಲ್ಲೆಯ ಸಾರ್ವಜನಿಕರು ಜುಲೈ 11 ರಂದು ಜಿಲ್ಲೆಯಲ್ಲಿ ನಡೆಯುವ ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಪ್ರಕರಣ ಇತ್ಯರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪ ಇದ್ದರು. ಸಿಕೆಬಿ-4 ಸುದ್ದಿಗೋಷ್ಠಿಯಲ್ಲಿ ನ್ಯಾ.ಟಿ.ಪಿ. ರಾಮಲಿಂಗೇಗೌಡ ಮಾತನಾಡಿದರು.