ಪ್ಲಾಸ್ಟಿಕ್ ರಾಷ್ಟ್ರಧ್ವಜ ಬಳಕೆ ಮಾಡಕೂಡದು

| Published : Aug 03 2024, 12:30 AM IST

ಸಾರಾಂಶ

ಸರ್ಕಾರ ಪ್ಲಾಸ್ಟಿಕ್ ರಾಷ್ಟ್ರಧ್ವಜದ ಬಳಕೆ ನಿಷೇಧಿಸಿರುವುದರಿಂದ ತಾಲೂಕಿನಲ್ಲಿ ಆ.೧೫ರ ಸ್ವಾತಂತ್ರ್ಯದಿನಾಚರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಯಾರೂ ಪ್ಲಾಸ್ಟಿಕ್ ರಾಷ್ಟ್ರಧ್ವಜ ಬಳಕೆ ಮಾಡಕೂಡದು. ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲರೂ ಸಂಭ್ರಮ, ಸಡಗರದಿಂದ ಆಚರಿಸುವಂತಾಗಬೇಕು ಎಂದು ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸರ್ಕಾರ ಪ್ಲಾಸ್ಟಿಕ್ ರಾಷ್ಟ್ರಧ್ವಜದ ಬಳಕೆ ನಿಷೇಧಿಸಿರುವುದರಿಂದ ತಾಲೂಕಿನಲ್ಲಿ ಆ.೧೫ರ ಸ್ವಾತಂತ್ರ್ಯದಿನಾಚರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಯಾರೂ ಪ್ಲಾಸ್ಟಿಕ್ ರಾಷ್ಟ್ರಧ್ವಜ ಬಳಕೆ ಮಾಡಕೂಡದು. ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲರೂ ಸಂಭ್ರಮ, ಸಡಗರದಿಂದ ಆಚರಿಸುವಂತಾಗಬೇಕು ಎಂದು ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಗಸ್ಟ್‌ ೧೫ ರಂದು ಬೆಳಗ್ಗೆ ತಾಲೂಕಿನಲ್ಲಿರುವ ಎಲ್ಲ ಶಾಲಾ-ಕಾಲೇಜುಗಳಲ್ಲಿ, ವಿವಿಧ ಕಚೇರಿಗಳಲ್ಲಿ ಬೆಳಗ್ಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಬೇಕು. ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌.ಅಂಬೇಡ್ಕರ್ ಭಾವಚಿತ್ರವನ್ನು ಕಡ್ಡಾಯವಾಗಿ ಇಟ್ಟು ಪೂಜೆ ಸಲ್ಲಿಸಬೇಕು ಎಂದು ಸೂಚಿಸಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ತಾಲೂಕಾಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗುವುದು. ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ತಮ್ಮ ತಮ್ಮ ಕಾರ್ಯಾಲಯದಲ್ಲಿ ಬೆಳಗ್ಗೆ ೭ ಗಂಟೆಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ತಾಲೂಕಾಡಳಿತವು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ೮.೩೦ ಗಂಟೆಗೆ ಆಗಮಿಸಿ ೯ ಗಂಟೆಗೆ ನಡೆಯುವ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ, ಫಥಸಂಚಲನ, ವಿವಿಧ ಶಾಲಾ ಮಕ್ಕಳಿಂದ ನಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ವಿವಿಧ ಇಲಾಖೆಗಳಿಗೆ ವಹಿಸುವ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಸ್ವಾತಂತ್ರ್ಯದಿನಾಚರಣೆಯನ್ನು ಎಲ್ಲರೂ ಸೇರಿಕೊಂಡು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.ಸಭೆಯಲ್ಲಿ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಡಿಎಸ್‌ಎಸ್ ಮುಖಂಡರಾದ ಅರವಿಂದ ಸಾಲವಾಡಗಿ, ಮಹಾಂತೇಶ ಸಾಸಾಬಾಳ, ಪರಶುರಾಮ ದಿಂಡವಾರ ಮಾತನಾಡಿ, ತಾಲೂಕಾಡಳಿತವು ಹಮ್ಮಿಕೊಳ್ಳುವ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರೋಟೋಕಾಲ್‌ದಂತೆ ಇರಬೇಕು. ಆಹ್ವಾನ ಪತ್ರಿಕೆ ಹೊರತು ಪಡಿಸಿದಂತೆ ಬೇರೆ ಯಾರು ವೇದಿಕೆಯಲ್ಲಿ ಇರದಂತೆ ನೋಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ತಾಲೂಕಾಡಳಿತದಿಂದ ನಡೆಯಬೇಕು. ಈ ಸಭೆಗೆ ಗೈರಾದ ವಿವಿಧ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ವಹಿಸಬೇಕು ಎಂದರು.ಸಭೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ, ಪಿಐ ವಿಜಯಕುಮಾರ ಮುರಗೊಂಡ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಎಸಿಡಿಪಿಒ ಬಸವರಾಜ ನಿಲುಗಲ್ಲ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಮುಖಂಡರಾದ ಎಂ.ಜಿ.ಆದಿಗೊಂಡ, ಎಸ್.ಎ.ದೇಗಿನಾಳ, ಎಂ.ಬಿ.ತೋಟದ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ಮುಖ್ಯಸ್ಥರು, ಮುಖ್ಯಗುರುಗಳು ಇತರರು ಭಾಗವಹಿಸಿದ್ದರು.