ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಆಕೃತಿ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮತ್ತು ಎಂಡೋಕ್ರೈನ್ ಸೂಪರ್ ಸ್ಪೆಷಾಲಿಟಿ ವ್ಯವಸ್ಥೆ ಒಳಗೊಂಡಿದ್ದು, ಆಧುನಿಕ ಆರೋಗ್ಯ ಸೇವೆಯ ದೊಡ್ಡ ಕೊರತೆಯನ್ನು ನೀಗಿಸಿದೆ ಎಂದು ಅಂತಾರಾಷ್ಟ್ರೀಯ ಅಲಾಯನ್ಸ್ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ತಿಳಿಸಿದರು.ಆ.೨೯ರಂದು ಜನರಲ್ ಆಸ್ಪತ್ರೆ ರಸ್ತೆಯಲ್ಲಿ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ. ದಿವ್ಯಸಾನ್ನಿಧ್ಯ ಮತ್ತು ಉದ್ಘಾಟನೆಯನ್ನು ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ನೆರವೇರಿಸುವರು. ಅತಿಥಿಗಲಾಗಿ ಪಂಚಾಯತ್ ರಾಜ್ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಸ್ಸಾಂ ಗೋಲ್ಪಾರ ಜಿಲ್ಲಾ ಅರಣ್ಯಾಧಿಕಾರಿ ತೇಜಸ್ ಮರಿಸ್ವಾಮಿ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್‌ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಅಂತಾಆರಾಷ್ಟ್ರೀಯ ಅಲಯನ್ಸ್ ಕ್ಲಬ್‌ಗಳ ನಿರ್ದೇಶಕ ಡಾ.ನಾಗರಾಜ ವಿ.ಭೈರಿ ಪಾಲ್ಗೊಳ್ಳುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೂತನ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಕೊಠಡಿ, ತೀವ್ರ ನಿಗಾ ಘಟಕ, ವಿಶೇಷ ಮತ್ತು ಸಾಮಾನ್ಯ ವಾರ್ಡ್‌ಗಳು, ಸ್ಟೇನ್‌ಲೆಸ್‌ಸ್ಟೀಲ್ ಮೊಡ್ಯೂಲರ್ ಆಫರೇಷನ್ ಥಿಯಟರ್‌ಗಳ ಸೌಲಭ್ಯಗಳನ್ನು ಹೊಂದಿದೆ. ಒಂದೇ ಸೂರಿನಡಿ ಸಮಗ್ರ ಚಿಕಿತ್ಸೆಯ ಎಲ್ಲಾ ಸೌಲಭ್ಯ ಒಳಗೊಂಡಿದೆ. ತೀವ್ರ ನಿಗಾ ಘಟಕದ ರೋಗಿಗಳ ಆರೈಕೆಗೆ ಪೂರ್ಣಕಾಲೀನ ಅರವಳಿಕೆ ತಜ್ಞರನ್ನು ಹೊಂದಿದೆ. ಮೊಡ್ಯುಲರ್ ಓಟಿಗಳ ಸಾಮಗ್ರಿಗಳು ಬ್ಯಾಕ್ಟೀರಿಯಾ ನಿರೋಧಕವಾಗಿದ್ದು ಸುಲಭವಾಗಿ ಸ್ವಚ್ಛಗೊಳಿಸಬಹುದು. ಫಿಲ್ಟ್ರೇಷನ್ ಸಿಸ್ಟಮ್‌ಗಳು ಧೂಳು, ಬ್ಯಾಕ್ಟೀರಿಯಾ, ವೈರಸ್‌ಗಳನ್ನು ಫಿಲ್ಟರ್ ಮಾಡುತ್ತದೆ ಎಂದರು.ಜಿಲ್ಲೆಯ ನಿವಾಸಿಗಳು ಈ ಮೊದಲು ವಿಶೇಷ ಗಂಭೀರ ಗಾಯಗಳು, ಸಂಕೀರ್ಣ ಎಂಡೋಕ್ರೈನ್ ಅಸಮತೋಲನಗಳಿಂದ ಬಳಲುತ್ತಿದ್ದರು. ಈಗ ಆ ಕೊರತೆಯನ್ನು ಆಕೃತಿ ಆಸ್ಪತ್ರೆ ನೀಗಿಸಲಿದೆ. ಆಸ್ಪತ್ರೆಯಲ್ಲಿ ಪೂರ್ಣಕಾಲಿಕ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಕರನ್ನು ಹೊಂದಿದ್ದು ಗಂಭೀರ ಗಾಯಗಳಿಗೆ ಸಮಗ್ರ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಸಕ್ಕರೆ ಕಾಯಿಲೆ ಗಾಯಗಳು, ಸುಟ್ಟ ಗಾಯಗಳು, ಅಪಘಾತದಿಂದಾಗುವ ಪ್ರಾಣಾಂತಿಕ ಗಾಯಗಳಿಗೆ ಚಿಕಿತ್ಸೆ ನೀಡುವ ಸೂಕ್ಷ್ಮವಾದ ಕೈ, ಪಾದ, ಸ್ತನ ಮತ್ತು ಮುಖ, ದವಡೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುವುದು ಎಂದರು.
ಎಂಡೋಕ್ರೈನಾಲಜಿಸ್ಟ್‌ಗಳ ಕೊರತೆಯಿಂದ ನಿಯಂತ್ರಣಕ್ಕೆ ಬಾರದ ಮಧುಮೇಹ, ಚಿಕಿತ್ಸೆ ಪಡೆಯದ ಗಾಯಗಳಿಂದ ಅನಗತ್ಯ ಅಂಗವಿಚ್ಛೇಧನಗಳು ನಡೆಯುತ್ತಿತ್ತು. ಆಸ್ಪತ್ರೆಯಲ್ಲಿ ಪೂರ್ಣಕಾಲಿಕ ಎಂಡೋಕ್ರೈನಾಲಜಿಸ್ಟ್ ಲಭ್ಯವಿರುವುದರಿಂದ ಮಧುಮೇಹಕ್ಕೆ ಸಂಬಂಧಿಸಿದ ಮಧುಮೇಹ ನಿರ್ವಹಣೆ, ಥೈರಾಯ್ಡ್ ವೈಫಲ್ಯ, ಹಾರ್ಮೋನ್ ಅಸಮತೋಲನಗಳು, ಪಿಟ್ಯೂಟರಿ ಗ್ರಂಥಿ ಸಮಸ್ಯೆಗಳು, ಅತಿಯಾದ ತೂಕ, ರಕ್ತದೊತ್ತಡ, ಅಸ್ಥಿ ಸೌಕ್ಷ್ಯ ಮತ್ತು ಸಂತಾನೋತ್ಪತ್ತಿ ಎಂಡೊಕ್ರೈನಾಲಜಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.ಗೋಷ್ಠಿಯಲ್ಲಿ ಡಾ.ಕೆ.ಸಿ.ಸುಹಾಸ್, ಡಾ.ಸೋನಾಲಿ ಉಚ್ಚಿಲ್, ಡಾ.ಶ್ರುತಿ, ಕೆ.ಎಸ್.ಚಂದ್ರಶೇಖರ್, ಪ್ರೊ.ಶಿವಕುಮಾರ್ ಇದ್ದರು.