ಮಧುಗಿರಿ ತಾಲೂಕಿನಲ್ಲಿ ಹರ್ಷತಂದ ಹಸ್ತಾ ಮಳೆ

| Published : Oct 04 2024, 01:06 AM IST

ಸಾರಾಂಶ

ಮಧುಗಿರಿ: ತಾಲೂಕಿನಲ್ಲಿ ಬುಧವಾರ ತಡ ರಾತ್ರಿ ಭರ್ಜರಿ ಸುರಿದ ಹಸ್ತದ ಮಳೆಯಿಂದ ಬಹುತೇಕ ಎಲ್ಲ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಸಿದ್ದಾಪುರ ಕೆರೆ ಮತ್ತು ಮಧುಗಿರಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಚೋಳೇನಹಳ್ಳಿ ಕೆರೆ ಹಾಗೂ ಸಿದ್ದರಕಟ್ಟೆ ತುಂಬಿ ಕೋಡಿ ಬಿದ್ದಿದೆ.

ಮಧುಗಿರಿ: ತಾಲೂಕಿನಲ್ಲಿ ಬುಧವಾರ ತಡ ರಾತ್ರಿ ಭರ್ಜರಿ ಸುರಿದ ಹಸ್ತದ ಮಳೆಯಿಂದ ಬಹುತೇಕ ಎಲ್ಲ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಸಿದ್ದಾಪುರ ಕೆರೆ ಮತ್ತು ಮಧುಗಿರಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಚೋಳೇನಹಳ್ಳಿ ಕೆರೆ ಹಾಗೂ ಸಿದ್ದರಕಟ್ಟೆ ತುಂಬಿ ಕೋಡಿ ಬಿದ್ದಿದೆ.

ಭರ್ಜರಿ ಮಳೆಗೆ ಸಿದ್ದಾಪುರ ಕೆರೆ ಮತ್ತು ಚೋಳೇನಹಳ್ಳಿ ಕೆರೆಗಳು ತುಂಬಿ ಕೋಡಿ ಬಿದ್ದ ಪರಿಣಾಮ ತಾಲೂಕಿನ ಅತಿ ದೊಡ್ಡ ಬಿಜವರ ಕೆರೆಯತ್ತ ನೀರು ಹರಿಯುತ್ತಿದೆ. ಇದನ್ನು ಸಾರ್ವಜನಿಕರು ಅಗಸರ ಹೊಳೆ ಸಮೀಪ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹುಬ್ಬಾ ಮಳೆ ಒಂದು ಹನಿ ಧರೆಗಿಳಿಯದೆ ಕೈಕೊಟ್ಟದ್ದರಿಂದ ರೈತರ ಮೊಗದಲ್ಲಿ ಆತಂಕ ಮನೆ ಮಾಡಿ ಬಿತ್ತಿದ ಬೀಜಗಳು ಕೈಗೆ ಸಿಗದೇ ಮಣ್ಣು ಪಾಲಾದವು ಎಂದು ತಲೆ ಮೇಲೆ ಕೈ ಹೊತ್ತು ಕೂತಿರುವಾಗ ಉತ್ತರೆ ಮಳೆ ಕೊನೆ ಪಾದದಲ್ಲಿ ಭರ್ಜರಿ ಮಳೆ ಬೀಳುವ ಮೂಲಕ ರೈತರಲ್ಲಿ ಹರ್ಷ ತಂದಿತ್ತು. ಪ್ರಸ್ತುತ ಹಸ್ತದ ಮಳೆ ಕೂಡ ತಾಲೂಕಿನಾದ್ಯಂತ ಸುರಿದು ರೈತರಲ್ಲಿ ಸಂತಸ ತಂದಿದೆ. ಆದರೆ ಈ ಮಳೆಯಿಂದ ಹೊಲ ಗದ್ದೆಗಳಲ್ಲಿ ಬೆಳೆದು ನಿಂತಿದ್ದ ರಾಗಿ ತೆನೆ, ಮುಸುಕಿನ ಜೋಳದ ತೆನೆ ಮತ್ತು ಶೇಂಗಾ ಕೈಗೆ ಬಂದ ಕಾಳು ಮಣ್ಣು ಪಾಲಗುವ ಭೀತಿ ಕಾಡುತ್ತಿದೆ.ಇದರಿಂದ ಬಹುತೇಕ ರೈತರು ಸಂಕಷ್ಠಕ್ಕಿಡಾಗಿದ್ದಾರೆ.

ಸಿದ್ದಾಪುರ ,ಚೋಳೇನಹಳ್ಳಿ ಮತ್ತು ಸಿದ್ದರಕಟ್ಟೆ ಕೆರೆಗಳು ತುಂಬಿ ಕೋಡಿ ಬಿದ್ದಿರುವ ಪರಿಣಾಮ ಬಿಜವರ ಕೆರೆ ಕೂಡ ತುಂಬುವ ಲಕ್ಷಣಗಳು ಕಂಡು ಬರುತ್ತಿದೆ. ಈಗಾಗಲೇ ಬಿಜವರ ಕೆರೆ ಅರ್ಧ ಕೆರೆ ತುಂಬಿದ್ದು ಕೆರೆ ಕೋಡಿ ಬಳಿ ಕೆಲವು ಕಲ್ಲುಗಳು ಜರುಗಿರುವುದರಿಂದ ತಕ್ಷಣ ಸಂಬಂಧಪಟ್ಟ ಇಲಾಖೆಯವರು ಸರಿಪಡಿಸುವಂತೆ ಅಚ್ಚುಕಟ್ಟುದಾರರು ಆಗ್ರಹಿಸಿದ್ದಾರೆ.

ಪಟ್ಟಣದ ಎಲ್ಲ ಕೆರೆ, ಬೋರ್‌ವೆಲ್ ಗಳಿಗೆ ಅಂತರ್ಜಲ ವೃದ್ಧಿಸುವ ಸಿದ್ಧರಕಟ್ಟೆ ಕೆರೆ ಕೋಡಿ ನೀರು ಸಹ ಸತತವಾಗಿ ಹರಿಯುತ್ತಿದ್ದು ಮಧುಗಿರಿ ಪಟ್ಟಣದ ಜನತೆಗೆ ಸಿಹಿ ನೀರು ಒದಗಿಸುವ ತೆಂಗಿನ ಮರದ ಬಾವಿ ನೀರಿನ ಮಟ್ಟ ಕೈಗೆಟಕುವಷ್ಠು ಮೇಲೆ ಬಂದಿದ್ದು ಇದರಿಂದ ನಾಗರಿಕರು ಸಂತಸಪಟ್ಟಿದ್ದಾರೆ. ಇನ್ನೂ ಮಧುಗಿರಿ ಬೆಟ್ಟದ ತಪ್ಪಲಲ್ಲಿರುವ ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನದ ಬಳಿಯಿರುವ ಮಧು ಫಾಲ್ಸ್‌ ತುಂಬಿ ಜುಳು ಜುಳು ನಾದ ತುಂಬಿ ಹರಿದು ನೋಡುಗರ ಕಣ್ಮನ ಸಳೆಯುತ್ತಿದೆ. ಮಳೆ ವರದಿ-

ಮಧುಗಿರಿ -54ಮಿಮೀ

ಬಡವನಹಳ್ಳಿ 55ಮಿಮೀ

ಬ್ಯಾಲ್ಯ - 94ಮಿಮೀ

ಮಿಡಿಗೇಶಿ - 30ಮಿಮೀ,

ಐಡಿಹಳ್ಳಿ -30ಮಿಮೀ

ಕೊಡಿಗೇನಹಳ್ಳಿ -66ಮಿಮೀ