ಸಾರಾಂಶ
ತಾಲೂಕಿನಲ್ಲಿ ಅವ್ಯಾಹತವಾಗಿ ಮಾದಕ ವಸ್ತುಗಳು ಯುವ ಜನತೆಯ ಕೈಗೆ ಸಿಗುತ್ತಿರುವ ಸಂಗತಿ ಬೆಳಕಿಗೆ ಬಂದ ಬಳಿಕ ಎಚ್ಚೆತ್ತಿರುವ ತಾಲೂಕು ಆಡಳಿತ ಮಾದಕ ವಸ್ತುಗಳ ಮುಕ್ತ ತಾಲೂಕನ್ನಾಗಿ ಮಾಡಲು ಪಣ ತೊಟ್ಟಿದೆ ಎಂದು ತಹಸೀಲ್ದಾರ್ ಕುಂಇ ಅಹಮದ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನಲ್ಲಿ ಅವ್ಯಾಹತವಾಗಿ ಮಾದಕ ವಸ್ತುಗಳು ಯುವ ಜನತೆಯ ಕೈಗೆ ಸಿಗುತ್ತಿರುವ ಸಂಗತಿ ಬೆಳಕಿಗೆ ಬಂದ ಬಳಿಕ ಎಚ್ಚೆತ್ತಿರುವ ತಾಲೂಕು ಆಡಳಿತ ಮಾದಕ ವಸ್ತುಗಳ ಮುಕ್ತ ತಾಲೂಕನ್ನಾಗಿ ಮಾಡಲು ಪಣ ತೊಟ್ಟಿದೆ ಎಂದು ತಹಸೀಲ್ದಾರ್ ಕುಂಇ ಅಹಮದ್ ಹೇಳಿದ್ದಾರೆ.ತಹಸೀಲ್ದಾರ್ ರವರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮಾದಕ ದ್ರವ್ಯಗಳು ತಾಲೂಕಿನಲ್ಲಿ ಹೆಚ್ಚು ಮಾರಾಟವಾಗುತ್ತಿದೆ ಎಂಬ ಸಂಗತಿ ಭಯ ಹುಟ್ಟಿಸಿದೆ. ಮಾದಕ ವಸ್ತುಗಳಿಗೆ ದಾಸರಾಗಿ ಹಲವಾರು ಯುವಕರು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಸಮಾಜಘಾತುಕ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ತಾಲೂಕಿನಾದ್ಯಂತ ಜಾಗೃತಿ ಆಂದೋಲನ ಉಂಟು ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು. ಬಹುಮಾನ: ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಉಂಟು ಮಾಡುವುದು. ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಮಾದಕ ವಸ್ತುಗಳನ್ನು ಸೇವಿಸುವವರ ಬಗ್ಗೆಯೂ ಮಾಹಿತಿ ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಅಲ್ಲದೆ ಅವರಿಗೆ ತಾಲೂಕು ಆಡಳಿತದಿಂದ ಗೌಪ್ಯವಾಗೇ ಬಹುಮಾನವನ್ನೂ ಸಹ ನೀಡಲಾಗುವುದು ಎಂದು ತಹಸೀಲ್ದಾರ್ ಕುಂಇ ಅಹಮದ್ ತಿಳಸಿದ್ದಾರೆ. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತ ತಂಡ ರಚಿಸಲಾಗುವುದು. ಮಾರಾಟ ಮಾಡುವವರ ಮತ್ತು ಸೇವನೆ ಮಾಡುವವರ ವಿವರವನ್ನು ಗುಪ್ತವಾಗಿ ಸಂಗ್ರಹಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಗಡೀಪಾರು: ಮಾದಕ ವಸ್ತುಗಳನ್ನು ನಿಗ್ರಹ ಮಾಡಲು ಪಣ ತೊಟ್ಟಿರುವ ತಾಲೂಕು ಆಡಳಿತ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಕಂಡು ಬಂದಲ್ಲಿ ಅಂತಹವರನ್ನು ಹಿಡಿದು ತಾಲೂಕಿನಿಂದ ಗಡೀಪಾರು ಮಾಡಲು ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಲಾಗುವುದು. ಮೆಡಿಕಲ್ ಸ್ಟೋರ್ ಗಳಲ್ಲಿ ಚಿಕಿತ್ಸೆಗಳಿಗೆ ಅಗತ್ಯವಿರುವ ಮಾತ್ರೆಗಳು ಹಾಗೂ ಇನ್ನಿತರ ಡ್ರಗ್ಸ್ ಗಳನ್ನು ವೈದ್ಯರ ಶಿಫಾರಸ್ಸು ಪತ್ರವಿಲ್ಲದೇ ಯಾವುದೇ ಕಾರಣಕ್ಕೂ ನೀಡಬಾರದು. ಅಕ್ರಮವಾಗಿ ಮಾರಾಟ ಮಾಡಿದಲ್ಲಿ ಅಂತಹ ಮೆಡಿಕಲ್ ಸ್ಟೋರ್ ಗಳ ವಿರುದ್ಧ ಕಾನುನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪಟ್ಟಣದಲ್ಲಿನ ಒಂದು ಮೆಡಿಕಲ್ ಅಂಗಡಿಯಲ್ಲಿ ಅಕ್ರಮ ನಡೆದಿರುವುದು ಪತ್ತೆ ಹಚ್ಚಲಾಗಿದೆ. ಆ ಮೆಡಿಕಲ್ ಸ್ಟೋರ್ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ತಹಸೀಲ್ದಾರ್ ಕುಂಇ ಅಹಮದ್ ತಿಳಿಸಿದ್ದಾರೆ. ಮುಂಜಾಗ್ರತಾ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ರಂಗನಾಥ್, ಜಿಲ್ಲಾ ಸಹಾಯಕ ಔಷಧ ನಿಯಂತ್ರಕರಾದ ಬಿ.ಸುರೇಶ್, ಪೋಲಿಸ್ ಇಲಾಖೆ, ತಾಲೂಕು ಪಂಚಾಯತ್ ನ ಅಧಿಕಾರಿಗಳು ಭಾಗವಹಿಸಿದ್ದರು. ತಾಲೂಕಿನಲ್ಲಿ ಮಾದಕ ವಸ್ತಗಳ ಬಳಕೆ ಮತ್ತು ಮಾರಾಟ ಸಂಬಂಧ ಯಾವುದೇ ಮಾಹಿತಿಗಳು ಇದ್ದಲ್ಲಿ ದಿನದ ೨೪ ಗಂಟೆಯೂ ಕಾರ್ಯ ನಿರ್ವಹಿಸಿಸುವ ದೂರವಾಣಿ ಸಂಖ್ಯೆ ೦೮೧೩೯ - ೨೮೭೩೨೫ ಗೆ ಅಥವಾ ತಹಸೀಲ್ದಾರ್ ರವರ ದೂರವಾಣಿ ಸಂಖ್ಯೆ ೯೪೮೧೭೭೨೨೪೩ ಗೆ ಸಂಪರ್ಕಿಸಲು ಕೋರಲಾಗಿದೆ. ಅಲ್ಲದೇ ತಮ್ಮ ಗ್ರಾಮ ವ್ಯಾಪ್ತಿಯ ಕಂದಾಯ ನಿರೀಕ್ಷಕರು ಅಥವಾ ಗ್ರಾಮ ಪಂಚಾಯ್ತಿಯ ಪಿಡಿಓ ಗಳು ಅಥವಾ ಕಾರ್ಯದರ್ಶಿಗಳ ಗಮನಕ್ಕೆ ತರಲು ತಹಸೀಲ್ದಾರ್ ಕುಂಇ.ಅಹಮದ್ ಮನವಿ ಮಾಡಿಕೊಂಡಿದ್ದಾರೆ.ತಾಲೂಕಿನಲ್ಲಿ ಅತಿಯಾಗಿ ಮಾದಕ ವಸ್ತುಗಳು ಮಾರಾಟವಾಗುತ್ತಿದೆ. ಮಾದಕ ವಸ್ತು ಸೇವನೆಯಿಂದಾಗಿ ತನ್ನ ಮಗ ಹಾಳಾಗಿದ್ದಾನೆ. ಅವನನ್ನು ಜೈಲಿಗೆ ಕಳಿಸಿ ಇಲ್ಲಾ ಅವನನ್ನು ಸಾಯಿಸಲು ನನಗೆ ಅನುಮತಿ ನೀಡಿ ಎಂದು ತಾಯಿಯೊಬ್ಬರು ಪೊಲೀಸರಲ್ಲಿ ವಿನಂತಿಸಿಕೊಂಡ ವರದಿಯನ್ನು ಪತ್ರಿಕೆ ವರದಿ ಮಾಡಿತ್ತು ಎಂಬುದು ಗಮನಾರ್ಹ. ಇದರಿಂದ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಕಾರ್ಯಾಚರಣೆಗೆ ಇಳಿದಿದೆ.