ಕನ್ನಡ ಮಕ್ಕಳ ನಾಲಿಗೆಯ ಮೇಲೆ ನಲಿದಾಡುವಂತೆ ಮಾಡಬೇಕು. ಭಾಷೆಯ ಉಳಿಸುವ ನಿಟ್ಟಿನಲ್ಲಿ ಇದು ಪೋಷಕರ ಕರ್ತವ್ಯ. ಮನೆಯಲ್ಲಿ ಮಕ್ಕಳೊಂದಿಗೆ ಮಾತನಾಡುವಾಗ ಇಂಗ್ಲೀಷ್‌ನ್ನು ಬದಿಗಿಟ್ಟು ಕನ್ನಡದಲ್ಲಿ ಮಾತನಾಡಬೇಕು. ಇದರಿಂದ ಪ್ರೀತಿ, ಆತ್ಮೀಯತೆ ಬೆಳೆಯುತ್ತದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಪರಿಸರದ ಭಾಷೆಯಾಗಿ, ಜೀವಂತ ಭಾಷೆಯಾಗಿ ಉಳಿಸಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಕನ್ನಡ ಅಂದು-ಇಂದು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಮಕ್ಕಳ ನಾಲಿಗೆಯ ಮೇಲೆ ನಲಿದಾಡುವಂತೆ ಮಾಡಬೇಕು. ಭಾಷೆಯ ಉಳಿಸುವ ನಿಟ್ಟಿನಲ್ಲಿ ಇದು ಪೋಷಕರ ಕರ್ತವ್ಯ. ಮನೆಯಲ್ಲಿ ಮಕ್ಕಳೊಂದಿಗೆ ಮಾತನಾಡುವಾಗ ಇಂಗ್ಲೀಷ್‌ನ್ನು ಬದಿಗಿಟ್ಟು ಕನ್ನಡದಲ್ಲಿ ಮಾತನಾಡಬೇಕು. ಇದರಿಂದ ಪ್ರೀತಿ, ಆತ್ಮೀಯತೆ ಬೆಳೆಯುತ್ತದೆ ಎಂದು ನುಡಿದರು.
ಇಂಗ್ಲಿಷ್ ವ್ಯಾಮೋಹಕ್ಕೆ ನಾವೂ ಒಳಗಾಗಿರುವುದಲ್ಲದೆ, ಮಕ್ಕಳನ್ನೂ ಒಳಗಾಗುವಂತೆ ಮಾಡಿದ್ದೇವೆ. ಮಕ್ಕಳಿಗೆ ಕನ್ನಡ ಕಲಿಸುವ, ಕನ್ನಡದಲ್ಲಿ ಮಾತನಾಡುವ, ಭಾಷೆಯ ಬಗ್ಗೆ ಆಕರ್ಷಿತರಾಗುವಂತೆ ಮಾಡಬೇಕಿದೆ. ಇಂಗ್ಲಿಷ್‌ನ್ನು ಭಾಷೆಯಾಗಿ ಕಲಿತುಕೊಳ್ಳಲಿ. ಹೃದಯದ ಭಾಷೆಯಾಗಿ ಕನ್ನಡ ಮಕ್ಕಳ ಮನಸ್ಸಿನಲ್ಲಿ ಉಳಿಸಬೇಕು ಎಂದರು.ಮಕ್ಕಳಿಗೆ ಕನ್ನಡವನ್ನು ನಾವೇ ಕಲಿಸುತ್ತಿಲ್ಲ. ಕಲಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ. ನಮ್ಮ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವಾಗ ಆನಂದಪಡುವ ನಾವು ಕನ್ನಡದಲ್ಲಿ ಮಾತನಾಡಿದಾಗ ಖುಷಿಪಡುವುದಿಲ್ಲ. ನಮ್ಮ ಭಾಷೆಯ ಬಗ್ಗೆ ನಮ್ಮಲ್ಲೇ ಪ್ರೀತಿ-ಅಭಿಮಾನ ಮೂಡದಿದ್ದರೆ ಮಕ್ಕಳ ಮನಸ್ಸಿನಲ್ಲಿ ಮೂಡಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಪುಸ್ತಕಗಳನ್ನು ಓದಿ ಮಕ್ಕಳಿಗೆ ಕನ್ನಡ ಕಲಿಸಬೇಕಾದ ನಾವು ಗೂಗಲ್‌ನಲ್ಲಿ ಬರುವ ಕನ್ನಡವನ್ನು ಕಲಿಸುವ ಪ್ರಯತ್ನಕ್ಕಿಳಿದಿದ್ದೇವೆ. ಆತ್ಮೀಯತೆ, ವಿಶ್ವಾಸ, ಬಾಂಧವ್ಯ ಬೆಳೆಸುವ ಕನ್ನಡ ಭಾಷೆಯನ್ನು ದೂರ ತಳ್ಳುವುದು ಬೇಡ. ಅದನ್ನು ಸದಾ ಕಾಲ ಜೀವಂತವಾಗಿ ಉಳಿಯುವಂತೆ ಮಾಡಬೇಕಾದರೆ ಎಲ್ಲರ ನಾಲಿಗೆಯ ಮೇಲೆ ಕನ್ನಡ ನಲಿದಾಡಬೇಕು ಎಂದು ನುಡಿದರು. ಸಂವಾದದಲ್ಲಿ ವಾಗ್ಮಿ ಪ್ರೊ.ಕೃಷ್ಣೇಗೌಡ ಮತ್ತಿತರರಿದ್ದರು.