೧೯೪೭ರಲ್ಲಿ ಟಿಎಸ್ಎಸ್ ಸಂಸ್ಥೆಯ ಸಿದ್ದಾಪುರ ಶಾಖೆ ಆರಂಭಗೊಂಡಿತು. ಇಲ್ಲಿಯ ಶಾಖೆ ಅಂದಿನಿಂದ ಇಲ್ಲಿಯವರೆಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ಈ ವರ್ಷ ಇಲ್ಲಿನ ಶಾಖೆ ₹6 ಕೋಟಿ ಲಾಭ ಗಳಿಸಿದೆ.

ಸಿದ್ದಾಪುರ: ತೋಟಗಾರ್ಸ್ ಸೇಲ್ ಸೊಸೈಟಿಗೆ ಕಳೆದ 3 ವರ್ಷಗಳ ಹಿಂದೆ ಸಂಸ್ಥೆಯ ಸದಸ್ಯರ ಆಶೀರ್ವಾದದಿಂದ ಹೊಸ ಆಡಳಿತ ಸಮಿತಿ ಆಯ್ಕೆಗೊಂಡಿದೆ. ನಮ್ಮ ಆಡಳಿತ ಮಂಡಳಿ ಅಡಕೆ ಮಾರುಕಟ್ಟೆಗೆ ಪ್ರಥಮ ಆದ್ಯತೆಯನ್ನು ನೀಡುವ ಗುರಿಯನ್ನು ಹೊಂದಿ ಅದನ್ನೇ ಅನುಸರಿಸಿಕೊಂಡು ಬರುತ್ತಿದೆ ಎಂದು ಶಿರಸಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.

ಶನಿವಾರ ಪಟ್ಟಣದ ಟಿಎಸ್ಎಸ್ ಆವರಣದಲ್ಲಿ ನಡೆದ ಸಿದ್ದಾಪುರ ಶಾಖೆಯ ವಾರ್ಷಿಕ ಸಹಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೂಪರ್ ಮಾರ್ಕೆಟ್ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುತ್ತಿದ್ದರೂ ಅಡಕೆ ಮಾರುಕಟ್ಟೆ ಮತ್ತು ಅಡಕೆ ಬೆಳೆಗಾರರ ಬೆಂಬಲಕ್ಕೆ ಸದಾ ನಿಲ್ಲುವ ಸಂಕಲ್ಪ ನಮ್ಮದು. ಪ್ರಾಮಾಣಿಕ ಸದಸ್ಯರನ್ನು ಎಂದಿಗೂ ಕಡೆಗಣಿಸುವುದಿಲ್ಲ ಎಂದರು.

೧೯೪೭ರಲ್ಲಿ ಟಿಎಸ್ಎಸ್ ಸಂಸ್ಥೆಯ ಸಿದ್ದಾಪುರ ಶಾಖೆ ಆರಂಭಗೊಂಡಿತು. ಇಲ್ಲಿಯ ಶಾಖೆ ಅಂದಿನಿಂದ ಇಲ್ಲಿಯವರೆಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ಈ ವರ್ಷ ಇಲ್ಲಿನ ಶಾಖೆ ₹6 ಕೋಟಿ ಲಾಭ ಗಳಿಸಿದೆ. ಇಲ್ಲಿನ ಸದಸ್ಯರು ₹84 ಕೋಟಿ ಠೇವನ್ನು ನೀಡಿ, ಕೇವಲ ₹49 ಕೋಟಿ ಸಾಲವನ್ನು ಪಡೆದಿರುವುದು ಮಹತ್ವದ ಸಂಗತಿ. ಮೂರು ತಾಲೂಕುಗಳನ್ನು ಒಳಗೊಂಡ ಸಂಘದಲ್ಲಿ ೮ ಸಾವಿರ ಜನ ಸದಸ್ಯರಿದ್ದಾರೆ. ಸದಸ್ಯರ ಮತ್ತು ಸಿಬ್ಬಂದಿಯ ಪ್ರಾಮಾಣಿಕತೆಯಿಂದ ಸಂಘವು ₹೨೩.೬೮ ಕೋಟಿ ಲಾಭ ಗಳಿಸಿದೆ ಎಂದರು.

ಸಿಬ್ಬಂದಿ ಗಿರಿಧರ ಎಚ್.ಎಸ್. ಅವರು, ಟಿಎಸ್ಎಸ್ ಮೊಬೈಲ್ ಆ್ಯಪ್ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ, ಉಪಾಧ್ಯಕ್ಷ ಎಂ.ಎನ್. ಭಟ್ಟ ತೋಟಿಮನೆ ಮತ್ತು ನಿರ್ದೇಶಕರು ಮತ್ತು ಸಲಹಾ ಸಮಿತಿ ಸದಸ್ಯರು ಇದ್ದರು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ೯ ಸದಸ್ಯರು, ಖರೀದಿದಾರರು, ಹಮಾಲರನ್ನು ಸನ್ಮಾನಿಸಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಸಹಕಾರಿ ಸಂಘಗಳಿಗೆ ಬಹುಮಾನ ವಿತರಿಸಲಾಯಿತು. ಸನ್ಮಾನಿತರ ಪರವಾಗಿ ಮಂಜುನಾಥ ಮಹಾಬಲೇಶ್ವರ ಹೆಗಡೆ ಬಿದ್ರಕಾನ ಮಾತನಾಡಿದರು.

ಶಾಖಾ ವ್ಯವಸ್ಥಾಪಕ ರಾಜೀವ ಹೆಗಡೆ ಸಿದ್ದಾಪುರ ಶಾಖೆಯ ವರದಿ ವಾಚಿಸಿದರು. ಸಂಘದ ನಿರ್ದೇಶಕ ರವೀಂದ್ರ ಹೆಗಡೆ ಹಿರಿಕೈ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕಿ ವಸುಮತಿ ಭಟ್ಟ ಮಾವಿನಕೋಡು ಸ್ವಾಗತಿಸಿದರು. ರಾಮಚಂದ್ರ ಭಟ್ಟ ನಿರೂಪಿಸಿದರು. ನಿರ್ದೇಶಕ ಅಶೋಕ ಹೆಗಡೆ ಅಬ್ಬಿಗದ್ದೆ ವಂದಿಸಿದರು.