ಇದು ಪಕ್ಷಾತೀತ ಹೋರಾಟವಾಗಿದ್ದು, ನಮ್ಮ ಉಳಿವಿಗಾಗಿ ಹೋರಾಡಲೇಬೇಕಾದ ಅನಿವಾರ್ಯತೆ ಇದೆ. ಬಡವರಿಗೆ ಸರ್ಕಾರದಿಂದ ಮನೆಗಳು ಸಹ ಬರುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಬಡವರಿಗೆಗಾಗಿ ಯಾವುದೇ ಸೌಲಭ್ಯಗಳನ್ನು ಸರ್ಕಾರ ಮಾಡುತ್ತಿಲ್ಲ.
ಸಿದ್ದಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ಬಡವರನ್ನು ಮತ್ತು ಕೂಲಿ ಕಾರ್ಮಿಕರನ್ನು ಒಕ್ಕಲೆಬ್ಬಿಸಿ ಅವರನ್ನು ಹತ್ತಿಕ್ಕಲು ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ತಿಮ್ಮಪ್ಪ ಎಂ.ಕೆ. ಆರೋಪಿಸಿದರು.
ತಾಲೂಕಿನ ಕವಂಚೂರು ಗ್ರಾಮ ಪಂಚಾಯಿತಿ ಎದುರು ನಮ್ಮ ಮನೆ ನಮ್ಮ ಹಕ್ಕು ಹೋರಾಟದ ಜನಾಂದೋಲನದ ನೇತೃತ್ವ ವಹಿಸಿ ಮಾತನಾಡಿ, ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ಈಗ ಬಡವರ ಜೀವನವನ್ನೇ ಬಲಿ ಕೊಡುತ್ತಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚೆಯಾದಾಗ ನಮ್ಮ ಭಾಗದ ಶಾಸಕರು ಏನು ಮಾಡುತ್ತಿದ್ದರು? ಯಾಕೆ ಇದರ ವಿರುದ್ಧ ಧ್ವನಿ ಎತ್ತಲಿಲ್ಲ? ಸರ್ಕಾರಕ್ಕೆ ಮತ್ತು ಶಾಸಕರಿಗೆ ಬಡವರ ಪರ ಎಷ್ಟು ಕಾಳಜಿ ಇದೆ ಎಂದು ಇದರಿಂದ ಸ್ವಷ್ಟವಾಗಿ ತಿಳಿಯುತ್ತಿದೆ ಎಂದರು.ಇದು ಪಕ್ಷಾತೀತ ಹೋರಾಟವಾಗಿದ್ದು, ನಮ್ಮ ಉಳಿವಿಗಾಗಿ ಹೋರಾಡಲೇಬೇಕಾದ ಅನಿವಾರ್ಯತೆ ಇದೆ. ಬಡವರಿಗೆ ಸರ್ಕಾರದಿಂದ ಮನೆಗಳು ಸಹ ಬರುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಬಡವರಿಗೆಗಾಗಿ ಯಾವುದೇ ಸೌಲಭ್ಯಗಳನ್ನು ಸರ್ಕಾರ ಮಾಡುತ್ತಿಲ್ಲ ಎಂದರು.
ನಿಕಟಪೂರ್ವ ಮಂಡಲಾಧ್ಯಕ್ಷ ಮಾರುತಿ ನಾಯ್ಕ ಹೊಸೂರು ಮಾತನಾಡಿ, ನಮ್ಮ ಭಾಗದ ರೈತರು ಸರ್ಕಾರಿ ಭಾಗದಲ್ಲಿ ಹಲವಾರು ವರ್ಷದಿಂದ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅದರಂತೆ ಮನೆ ಕರವನ್ನು ಸಹ ಭರಣ ಮಾಡುತ್ತಿದ್ದಾರೆ. ಆದರೆ ಈಗ ಸರ್ಕಾರ ಅಂತಹ ಮನೆಗಳ ಕರವನ್ನು ಪಡೆಯಬಾರದು ಎಂದು ಆದೇಶ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಮನೆಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.ಆದ್ದರಿಂದ ಕಾಂಚೂರಿನಲ್ಲಿ ಆರಂಭಗೊಂಡ ಈ ಹೋರಾಟವನ್ನು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ನಡೆಸಲಾಗುವುದು. ತಾಲೂಕಿನಲ್ಲಿಯೂ ಮಳೆ ಇಲ್ಲದ ಕಾರಣ ಗದ್ದೆಗಳು ಒಣಗಿ ರೈತರು ಸಂಕಷ್ಟದಲ್ಲಿದ್ದಾರೆ. ಕಾರಣ ಶಾಸಕರು ಸರ್ಕಾರಕ್ಕೆ ಮಾನವರಿಕೆ ಮಾಡಿ ಸಿದ್ದಾಪುರವನ್ನೂ ಬರಪೀಡಿತ ತಾಲೂಕು ಎಂದು ಘೋಷಿಸಬೇಕು. ತಾಲೂಕಿನ ರೈತ ಸಂಘಟನೆಗಳು ಕೇವಲ ನಾಮಕಾವಸ್ತೆ ಇವೆ. ಸರ್ಕಾರ ರೈತ ವಿರೋಧಿ ಆದೇಶಗಳನ್ನು ಮಾಡಿದರೂ ಯಾವುದೇ ಪ್ರತಿಭಟನೆ ನಡೆಸುತ್ತಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ ನಾಯ್ಕ, ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ ಮಾತನಾಡಿದರು. ಪ್ರಮುಖರಾದ ಸುರೇಶ ಬಾಲಿಕೊಪ್ಪ, ಮಂಜುನಾಥ ಭಟ್ಟ, ಜಿ.ಕೆ. ನಾಯ್ಕ ಕೊಪ್ಪ, ರಾಜು ಕಟ್ಟೆಮನೆ ಮುಂತಾದವರು ಇದ್ದರು. ಮನವಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರವಾಗಿ ಕಾರ್ಯದರ್ಶಿ ಶಾರದಾ ಶೆಟ್ಟಿ ಅವರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.