ಕನ್ನಡಪ್ರಭ ವಾರ್ತೆ ಬೆಂಗಳೂರು
ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕನಕನಪಾಳ್ಯ ನಿವಾಸಿಗಳಾದ ಶಿವು ಅಲಿಯಾಸ್ ಕಲ್ಕಿ(32), ಗಿರೀಶ್ (34) ಮತ್ತು ಪೃಥ್ವಿ (32) ಬಂಧಿತರು. ಆರೋಪಿಗಳು ಆ.3 ರಂದು ಸಿದ್ದಾಪುರ ಠಾಣೆ ವ್ಯಾಪ್ತಿಯ ಭೈರಸಂದ್ರದಲ್ಲಿ ಮಾಜಿ ರೌಡಿಶೀಟರ್ ಲಕ್ಷ್ಮೀನಾರಾಯಣ್ ಹತ್ಯೆಗೆ ಸಂಚು ರೂಪಿಸಿದ್ದರು. ಈ ಮಾಹಿತಿ ಮೇರೆಗೆ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.ಮಾಜಿ ರೌಡಿಶೀಟರ್ ಲಕ್ಷ್ಮೀನಾರಾಯಣ್, 1995ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಸನ್ನಡತೆ ಆಧಾರದ ಮೇಲೆ 2006ರಲ್ಲಿ ಬಿಡುಗಡೆಯಾಗಿ ಸಿದ್ದಾಪುರದ ಕನಕನಪಾಳ್ಯದಲ್ಲಿ ಕುಟುಂಬ ಸಮೇತ ವಾಸವಾಗಿದ್ದು, ಆ ಬಳಿಕ ಯಾವುದೇ ಅಪರಾಧಗಳಲ್ಲಿ ಭಾಗಿಯಾಗದೆ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಮೂವರು ಆರೋಪಿಗಳು ಲಕ್ಷ್ಮೀನಾರಾಯಣ ಜತೆ ಕಳೆದ ವರ್ಷ ನಡೆದ ಅಣ್ಣಮ್ಮ ಜಾತ್ರೆಯಲ್ಲಿ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ದ್ವೇಷಕ್ಕೆ ಆರೋಪಿಗಳು ಲಕ್ಷ್ಮೀನಾರಾಯಣ್ ಹತ್ಯೆಗೆ ಸಂಚು ರೂಪಿಸಿದ್ದರು.
ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ಹತ್ಯೆ!ಮತ್ತೊಂದೆಡೆ ಲಕ್ಷ್ಮೀನಾರಾಯಣನನ್ನು ಹತ್ಯೆಗೈದರೆ ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಬಹುದು ಎಂಬ ಉದ್ದೇಶದಿಂದ ಆ.3ರಂದು ರಾತ್ರಿ ಮಾರಕಾಸ್ತ್ರಗಳ ಸಮೇತ ದಾಳಿಗೆ ಸಂಚು ರೂಪಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳ ಬಂಧಿಸಲಾಗಿದೆ. ಈ ಸಂಚಿನಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಶಿವನ ವಿರುದ್ಧ ಎರಡು ಕೌಟುಂಬಿಕ ಮತ್ತು ಒಂದು ಗಲಾಟೆ ಪ್ರಕರಣ ಇದೆ. ಇತರೆ ಇಬ್ಬರು ಆರೋಪಿಗಳ ವಿರುದ್ಧ ಗಲಾಟೆ ಪ್ರಕರಣಗಳು ದಾಖಲಾಗಿದೆ. ಮತ್ತೊಂದೆಡೆ ಆರೋಪಿಗಳು ಲಕ್ಷ್ಮೀನಾರಾಯಣ್ ಹತ್ಯೆಗೆ ಬೇರೆ ರೌಡಿಶೀಟರ್‌ಗಳ ನೆರವು ಪಡೆದಿರುವುದು ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಡಿಸಿಪಿ ಹರಿಬಾಬು ನೇತೃತ್ವದಲ್ಲಿ ಎಸಿಪಿ ಸಿ.ಎಸ್.ಆನಂದ್ ಮತ್ತು ಪಿಐ ಸುರೇಶ್, ನಟರಾಜ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
