ಸಾರಾಂಶ
ನಾವು 70 ವರ್ಷಗಳಿಂದ ಸರ್ವೆ ನಂಬರ್ 1/2 ರಲ್ಲಿನ 38 ಗುಂಟೆ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸಿಕೊಂಡು ಬಂದಿದ್ದೇವೆ.
ಹಾರೋಹಳ್ಳಿ: ತಾಲೂಕಿನ ಮೇಡಮಾರನಹಳ್ಳಿ ಗ್ರಾಮದಲ್ಲಿ 30 ದಲಿತ ಕುಟುಂಬಗಳ ಮನೆಯ ಜಾಗವನ್ನು ಕಸಿದುಕೊಳ್ಳಲು ಸರ್ವಣಿಯ ವರ್ಗದ ವೆಂಕಟೇಶ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ ಎಂದು ಸಂತ್ರಸ್ತ ದಲಿತ ಕುಟುಂಬಗಳು ಮತ್ತು ಗ್ರಾಮಸ್ಥರು ದೂರಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರು, ನಾವು 70 ವರ್ಷಗಳಿಂದ ಸರ್ವೆ ನಂಬರ್ 1/2 ರಲ್ಲಿನ 38 ಗುಂಟೆ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸಿಕೊಂಡು ಬಂದಿದ್ದೇವೆ. ಆದರೆ, ಈಗ ವೆಂಕಟೇಶ್ ಎಂಬುವರು ನಮ್ಮ ಪಿತ್ರಾರ್ಜಿತ ಆಸ್ತಿಯೆಂದು ಕೋರ್ಟ್‌ನಲ್ಲಿ ದಾವೆ ಹೂಡಿ ದಲಿತರ ಕುಟುಂಬದ ಜಾಗವನ್ನು ಕಬಳಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
ನಾವುಗಳು ಸುಮಾರು 70 ವರ್ಷಗಳಿಂದ ಈ ಜಾಗದಲ್ಲಿ ವಾಸವಿದ್ದು, ವಿದ್ಯುತ್ ಬಿಲ್, ಕಂದಾಯ, ರೇಷನ್ ಕಾರ್ಡ್ ಹೊಂದಿದ್ದೇವೆ. ಆದರೆ, ಈಗ ಕೋರ್ಟ್‌ನಲ್ಲಿ ವೆಂಕಟೇಶ್ ಎಂಬುವರು ದಲಿತ ಕುಟುಂಬದವರಿಗೆ ನೋಟಿಸ್ ಜಾರಿ ಮಾಡಿ ಸದರಿ ಜಾಗದಲ್ಲಿ ರಾಗಿ ಹಾಗೂ ವ್ಯವಸಾಯವನ್ನು ಮಾಡುತ್ತಿರುವುದಾಗಿ ತೋರ್ಪಡಿಸಿದ್ದಾರೆ. ಈ ಜಾಗದಲ್ಲಿ 30 ಕುಟುಂಬದವರು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವಾಗ, ಈ ಜಾಗದಲ್ಲಿ ವ್ಯವಸಾಯ ಮಾಡಲು ಹೇಗೆ ಸಾಧ್ಯ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಅಧಿಕಾರಿಗಳು ನಾವುಗಳು ವಾಸವಿರುವ ಜಾಗವನ್ನು ಪರಿಶೀಲಿಸಿ ಸರ್ವೆ ನಂ.1/2 ರಲ್ಲಿನ 38 ಗುಂಟೆ ಜಾಗವನ್ನು ಹರಿಜನ ಕಾಲೋನಿ ಎಂದು ಗುರುತಿಸಲಾಗಿದೆ. ಅಲ್ಲದೆ ಅದನ್ನು ಗ್ರಾಮ ತಾಣವನ್ನು ಮಾಡಲು ಮುಂದಾಗಿದ್ದಾರೆ. ವೆಂಕಟೇಶ್ ಎಂಬವನು ನ್ಯಾಯಾಲಯದಲ್ಲಿ ದಾವೆ ಹೂಡಿ ಗ್ರಾಮದ 30 ದಲಿತ ಕುಟುಂಬದವರನ್ನು ಬೀದಿಗೆ ತರುವುದು ಸರಿಯಲ್ಲವೆಂದು ಗ್ರಾಮಸ್ಥರು ಆರೋಪಿಸಿದರು.ಮುಖಂಡರಾದ ಜಯಮ್ಮ, ಮದ್ದೂರಮ್ಮ, ಚಿಕ್ಕತಾಯಮ್ಮ, ಮರಿಯಯ್ಯ, ಶ್ರೀನಿವಾಸ್, ಸುರೇಶ್, ಭಾರ್ಗವ, ರಾಜು ಮತ್ತಿತರರು ಇದ್ದರು.
-----------10ಕೆಆರ್ ಎಂಎನ್ 11.ಜೆಪಿಜಿ
ಹಾರೋಹಳ್ಳಿ ತಾಲೂಕಿನ ಮೇಡಮಾರನಹಳ್ಳಿ ಗ್ರಾಮದಲ್ಲಿ 30 ದಲಿತ ಕುಟುಂಬಗಳು.------