ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ 18 ತಿಂಗಳ ಬಳಿಕ ವಿಧಾನಸಭೆ ಚುನಾವಣೆಗಳು ಬರಲಿವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ವೋಟು ಚೋರಿ ಮಾಡಿ ಚುನಾವಣೆಗಳನ್ನು ಗೆಲ್ಲುವ ಹುನ್ನಾರ ನಡೆಸಿದ್ದು, ದೇಶದ ಮತದಾರರಿಗೆ ಅನ್ಯಾಯ ಎಸಗುತ್ತಿದ್ದಾರೆ. ಅರ್ಹ ಮತದಾರರ ಹಕ್ಕು ಕಸಿದುಕೊಳ್ಳುವ ಬದಲು ಚುನಾವಣೆಗೆ ನಿಂತು ಜನರ ಆಶೀರ್ವಾದ ಪಡೆಯಿರಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ 18 ತಿಂಗಳ ಬಳಿಕ ವಿಧಾನಸಭೆ ಚುನಾವಣೆಗಳು ಬರಲಿವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ವೋಟು ಚೋರಿ ಮಾಡಿ ಚುನಾವಣೆಗಳನ್ನು ಗೆಲ್ಲುವ ಹುನ್ನಾರ ನಡೆಸಿದ್ದು, ದೇಶದ ಮತದಾರರಿಗೆ ಅನ್ಯಾಯ ಎಸಗುತ್ತಿದ್ದಾರೆ. ಅರ್ಹ ಮತದಾರರ ಹಕ್ಕು ಕಸಿದುಕೊಳ್ಳುವ ಬದಲು ಚುನಾವಣೆಗೆ ನಿಂತು ಜನರ ಆಶೀರ್ವಾದ ಪಡೆಯಿರಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಸಲಹೆ ನೀಡಿದರು.ನಗರದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಡಾ.ಅಂಬೇಡ್ಕರ್ ಅವರು ಎಲ್ಲರಿಗೂ ಸಮನಾಗಿ ಒಂದೇ ಮತ ಹಕ್ಕನ್ನು ಕೊಟ್ಟಿದ್ದಾರೆ. ಆದರೆ ಬಿಜೆಪಿಯವರು ಅನ್ಯಾಯವಾಗಿ ಅವರ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ದೊಡ್ಡ ಅಪರಾಧವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವೋಟು ಚೋರಿ ಬಗ್ಗೆ ಮೊದಲೇ ಹೇಳಿದ್ದು, ಇದೀಗ ವೋಟ್ ಚೋರಿ ಅಭಿಯಾನ ಮೂಲಕ ದೊಡ್ಡ ಆಂದೋಲನ ಆರಂಭಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶಕುಮಾರ್ ಮಾಡಿದ ಅಕ್ರಮ ಹೊರಗೆ ಬಂದಿದ್ದು, ರಾಹುಲ್ ಗಾಂಧಿಯವರು ಹೇಳಿದ್ದು ಈಗ ನಿಜವಾಗಿದೆ ಎಂದರು.ಹೀಗಾಗಿ ಈ ಕೂಡಲೇ ಜ್ಞಾನೇಶಕುಮಾರನನ್ನು ವಜಾಗೊಳಿಸಿ, ಪ್ರಾಮಾಣಿಕ ವ್ಯಕ್ತಿಯನ್ನು ನೇಮಕ ಮಾಡಬೇಕು. ಜತೆಗೆ ಈ ಪ್ರಕರಣ ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ವಿಚಾರಣೆಯಾಗಬೇಕು ಎಂದು ಆಗ್ರಹಿಸಿದರು. ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯಗಳ ವಿರುದ್ಧ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಹೋರಾಟ ನಡೆಸುತ್ತೇವೆ. ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಿಎಂ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯನವರು ಸೇರಿ ನಾಯಕರೆಲ್ಲರೂ ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳಲು, ವೋಟು ಚೋರಿ ಮಾಡಲು ನಾವು ಬಿಡುವುದಿಲ್ಲ ಎಂದು ವಾಗ್ದಾನ ಮಾಡಿದರು.
ಕೇಂದ್ರದ ಬಿಜೆಪಿ ಸರ್ಕಾರ ಚುನಾವಣೆ ಆಯೋಗ ದುರುಪಯೋಗಪಡಿಸಿಕೊಂಡಿದ್ದು, ದೇಶದಲ್ಲಿ ಎಸ್.ಐ.ಆರ್ ಅವಾಂತರ ಸೃಷ್ಟಿಯಾಗಿದೆ. ಕಾಂಗ್ರೆಸ್, ಟಿಎಂಸಿ ಸೇರಿ ಅವರಿಗೆ ವಿರೋಧವಾದ ವಿರೋಧ ಪಕ್ಷಗಳ ಕೋಟ್ಯಂತರ ಮತಗಳನ್ನು ಡಿಲೀಟ್ ಮಾಡಲಾಗಿದೆ. ಚುನಾವಣೆ ಗೆಲ್ಲಬೇಕು ಎಂಬ ಏಕೈಕ ಉದ್ದೇಶದಿಂದ ದೇಶದಲ್ಲಿ ಎಸ್.ಐ.ಆರ್‌ನಲ್ಲಿ ದೊಡ್ಡ ಪ್ರಮಾಣದ ಅನ್ಯಾಯ, ಅಕ್ರಮ ಎಸಗುತ್ತಿದ್ದಾರೆ. ಹಿಂದೆಯೂ ಹೀಗೆಯೇ ಮಾಡಿ ಚುನಾವಣೆಗಳನ್ನು ಗೆದ್ದಿದ್ದಾರೆ ಎಂದು ಆರೋಪಿಸಿದರು.ನನ್ನ ಕ್ಷೇತ್ರದಲ್ಲಿಯೂ ಬಿಜೆಪಿ ಸದಸ್ಯರಾದ ಭೀಮು ಗೊಳಸಂಗಿ, ಗೋವಿಂದ ಮುದನೂರ, ಆನಂದ ಅಂಬಿಗೇರ ಸೇರಿ ಇತರರು ಸೆ.21ರಂದು 1634 ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಿ ಬಳಿಕ 23ರಂದು ಎ.ಆರ್.ಒ ಕಚೇರಿಗೆ ಹೋಗಿ ಅರ್ಜಿಗಳನ್ನು ಹಿಂಪಡೆದಿದ್ದಾರೆ. ಅದೇ ರೀತಿ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸೆ.22ರಂದು ಬಿಜೆಪಿಯಿಂದ 5 ಸಾವಿರ ಆಕ್ಷೇಪಣೆ ಅರ್ಜಿಗಳನ್ನು ಹಾಗೂ 23ರಂದು 8 ಸಾವಿರ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದು, ಬಳಿಕ ಅರ್ಜಿಗಳನ್ನು ವಾಪಸ್ ಪಡೆದಿದ್ದಾರೆ. ಇದರಲ್ಲಿ ರಾಜಕುಮಾರ ಬಿರಾದಾರ, ಸಚಿನ ಪಡಗಾನೂರ ಸೇರಿ ಕೆಲವರು ನಗರ ಶಾಸಕರ ಕಾರ್ಯಾಲಯದ ಸಿಬ್ಬಂದಿಯಾಗಿದ್ದಾರೆ. ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಮಲ್ಲನಗೌಡ ಪಾಟೀಲ, ಪ್ರೇಮಾನಂದ ಬಿರಾದಾರ, ಗಿರೀಶ ಬಿರಾದಾರ, ಚಂದ್ರು ಚೌಧರಿ ಆಕ್ಷೇಪಣೆ ಅರ್ಜಿ ಸಲ್ಲಿಸಿ ಈಗ ಅರ್ಜಿಗಳನ್ನು ವಾಪಸ್ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಪಾರದರ್ಶಕವಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಬರದ ವಿಚಾರದಲ್ಲಿ ಕೇಂದ್ರದಿಂದ ತಾರತಮ್ಯ:ಬರಗಾಲದ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದ್ದು, ಇದರ ಪರಿಣಾಮ ಜಿಲ್ಲಾದ್ಯಂತ ಮಳೆ ಆಧಾರಿತ ಕೃಷಿಗೆ ಅನ್ಯಾಯವಾಗಿದೆ. ಬರದಿಂದಾಗಿ ತೊಗರಿ, ಸೂರ್ಯಕಾಂತಿ, ಈರುಳ್ಳಿ, ಹತ್ತಿ, ಕಬ್ಬು ಸೇರಿದಂತೆ ಎಲ್ಲ ಬೆಳೆಗಳು ಹಾನಿಯಾಗಿದ್ದು, ತಕ್ಷಣ ಕೇಂದ್ರ ಸರ್ಕಾರ ದೇಶಾದ್ಯಂತ ಬರವಿದ್ದಲ್ಲಿ ರೈತರ ಸಹಾಯಕ್ಕೆ ಬರಬೇಕು, ಸಾಲಮನ್ನಾ ಮಾಡಬೇಕು. ಹಳೆಯ ಎನ್‌ಡಿಆರ್‌ಎಫ್ ನಿಯಮಗಳನ್ನು ಬದಲಾಯಿಸಿ ರೈತರ ಸಹಾಯಕ್ಕೆ ಬರಬೇಕು ಎಂದು ಆಗ್ರಹಿಸಿದರು.
ತೆಲಂಗಾಣಕ್ಕೆ ಕುಡಿಯುವ ನೀರು ಬಿಡುವ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಕುಡಿಯಲು ಸಾಕಷ್ಟು ನೀರು ಇದ್ದಾಗ ಕುಡಿಯಲು ನೀರು ಕೊಡುವುದು ಮಾನವೀಯತೆ. ನಾವು ಸಹ ಈ ಹಿಂದೆ ಮಹಾರಾಷ್ಟ್ರಕ್ಕೆ ನೀರು ಕೇಳಿದ್ದೇವೆ. ನೀರು ಲಭ್ಯವಿದ್ದರೆ ಅದನ್ನು ಕೊಡಲು ಏನೂ ಅಭ್ಯಂತರವಿಲ್ಲ, ಈ ವಿಚಾರವನ್ನು ಸಿಎಂ ನಿರ್ಧಾರ ಮಾಡುತ್ತಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮುಖಂಡರಾದ ಜಮೀರ್ ಬಕ್ಷಿ, ಅಬ್ದುಲ ಹಮೀದ್ ಮುಶ್ರೀಫ್, ದಿನೇಶ ಹಳ್ಳಿ, ಅಬ್ದುಲರಜಾಕ್ ಹೊರ್ತಿ ಇದ್ದರು.