ಸಾರಾಂಶ
ಹೂವಿನಹಡಗಲಿ: ಕಳೆದ 10 ವರ್ಷಗಳ ಕಾಲ ಈ ದೇಶದಲ್ಲಿ ಅಧಿಕಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದ್ಯಾರ್ಹತೆ ಬಹಿರಂಗಪಡಿಸಿಲ್ಲ. ಇನ್ನು ದೇಶದ ಪರಿಸ್ಥಿತಿಯನ್ನು ಹೇಗೆ ಬಹಿರಂಗಪಡಿಸುತ್ತಾರೆಂದು ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪ್ರಶ್ನಿಸಿದರು.
ತಾಲೂಕಿನ ಸೋಗಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ವಿಧಾನಸಭಾ ಶಾಸಕನಾಗಿದ್ದು, ಯಾರು ಬೇಕಾದರೂ ನನ್ನ ವಿದ್ಯಾರ್ಹತೆಯನ್ನು ಮಾಹಿತಿ ಹಕ್ಕು ಹಾಕಿ ತೆಗೆದುಕೊಳ್ಳಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದ್ಯಾರ್ಹತೆಯನ್ನು ಈವರೆಗೂ ಬಹಿರಂಗ ಪಡಿಸಿಲ್ಲ. ಇನ್ನು ದೇಶದ ಸ್ಥಿತಿಗತಿಯನ್ನು ಹೇಗೆ ಬಹಿರಂಗ ಪಡಿಸುತ್ತಾರೆ. ಈ ದೇಶವನ್ನು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಅಂತವರಿಗೆ ಮತ ಹಾಕುವುದರಿಂದ ಉಪಯೋಗವಿಲ್ಲ. ಈ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಈ ಹಿಂದೆ ರೈತರ ಸಾಲ ಮನ್ನಾ ಮಾಡಿದರು ಎಂದರು.ಬಡವರ ದೀನ ದಲಿತರ ಹಾಗೂ ಕೂಲಿ ಕಾರ್ಮಿಕರ ಪರವಾಗಿ ಕಾಂಗ್ರೆಸ್ ಕೆಲಸ ಮಾಡಿದೆ ಎಂದರು.
ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಗಣಿ ನಾಡಿನ ಶಾಸಕ ತುಕಾರಾಂ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಅವರ ಕ್ಷೇತ್ರದಲ್ಲಿ ಚಿನ್ನದ ಗಣಿಯಂತಿರುವ ಮೈನಿಂಗ್ ಮಣ್ಣು ತಮ್ಮ ಮೈಗೆ ಹತ್ತದಂತೆ ನೋಡಿಕೊಂಡಿದ್ದಾರೆ. ನೈಸರ್ಗಿಕ ಸಂಪತ್ತಿನ ಮೇಲೆ ದೌರ್ಜನ್ಯ ಮಾಡಿದವರು, ಅವರು ಈಗಾಗಲೇ ಎಲ್ಲ ನೋವ ಅನುಭವಿಸಿದ್ದಾರೆ, ಒಂದು ಕಪ್ಪುಚುಕ್ಕೆ ಇಲ್ಲದಂತಹ ಮನುಷ್ಯನಿಗೆ ಕಾಂಗ್ರೆಸ್ ಲೋಕಸಭೆ ಟಿಕೆಟ್ ನೀಡಿದೆ. ಅವರಿಗೆ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಮನವಿ ಮಾಡಿದರು.ಪ್ರಧಾನಿ ನರೇಂದ್ರ ಮೋದಿ ಬಡವರ ಪರ ಇಲ್ಲ. ದಲಿತರು, ಕೂಲಿ ಕಾರ್ಮಿಕರ ಪರವಾಗಿಲ್ಲ. ಬದಲಾಗಿ ಅವರು ಆಗರ್ಭ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸಂಪತ್ತು ದುಪ್ಪಟ್ಟು ಆಗುವಂತಹ ಯೋಜನೆಗಳನ್ನು ತರುತ್ತಿದ್ದಾರೆ. ಇದು ಬಡವರಿಗೆ ಏನು ಪ್ರಯೋಜನ, ಇದರಿಂದ ದೇಶ ಉದ್ಧಾರವಾಗಲು ಸಾಧ್ಯವಿಲ್ಲ ಎಂದರು.
ಬಿಜೆಪಿ ಸರ್ಕಾರಕ್ಕೆ 10 ವರ್ಷ ಕೈಗೆ ಅಧಿಕಾರ ಸಿಕ್ಕರೂ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ, ಈಗ ಮತ್ತೆ ಮತ ಹಾಕಿ ಅಭಿವೃದ್ಧಿ ಮಾಡುತ್ತೇನೆಂದು ಜಪ ಮಾಡುತ್ತಿದ್ದಾರೆ, ಇಂತಹ ಮಾತುಗಳನ್ನಾಗಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.ಬಿಜೆಪಿ ಸರ್ಕಾರ ಜನರ ಸುಲಿಗೆ ಮಾಡುತ್ತಿದೆ. ಆದರೆ ರಾಜ್ಯದಿಂದ ಹೋಗಿರುವ ತೆರಿಗೆ ಹಣವನ್ನು ನೀಡದಂತಹ ಕೇಂದ್ರ ಸರ್ಕಾರ ನಮಗೆ ಬೇಕಿಲ್ಲ. ಬಡವರ ಪರವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಮತದಾನ ಮಾಡಬೇಕೆಂದು ಮನವಿ ಮಾಡಿದರು.
ಎಂ.ಪಿ. ಪ್ರಕಾಶ ಅವರ ಪುತ್ರಿ ಎಂ.ಪಿ. ವೀಣಾ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗದ ಜನರಿಗೆ ಅನುಕೂಲವಾಗಲೆಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನ ಮಾಡಿದ್ದಾರೆ. ಆದರೆ ಕೆಲವರು ಮಹಿಳೆಯರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಶೇ.50 ಮಹಿಳೆಯರೇ ಇದ್ದಾರೆ. ಬಹಳ ಎಚ್ಚರಿಕೆಯಿಂದ ಮಹಿಳೆಯರ ಬಗ್ಗೆ ಮಾತನಾಡಬೇಕೆಂದು ವಿರೋಧ ಪಕ್ಷಗಳಿಗೆ ಸವಾಲು ಹಾಕಿದರು.ಈ ಸಂದರ್ಭದಲ್ಲಿ ಬಿ.ವಿ. ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಅರವಳ್ಳಿ ವೀರಣ್ಣ, ಪಾಟೀಲ ಬಸವನಗೌಡ, ದೂದಾನಾಯ್ಕ, ಜ್ಯೋತಿ ಮಲ್ಲಣ್ಣ, ಎಸ್.ಹಾಲೇಶ, ಶಾಂತನಗೌಡ ಸೇರಿದಂತೆ ಇತರರಿದ್ದರು.