ಸಾರಾಂಶ
ಬುಡಕಟ್ಟು ಜನಾಂಗದ ಆದರ್ಶ ಪುರುಷ ಭಗವಾನ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವ ನಿಮಿತ್ತ ಅವರ ಸ್ಮರಣೆಗಾಗಿ ಜಿಲ್ಲೆಯ 51 ಗ್ರಾಮಗಳನ್ನು ಪ್ರಧಾನಮಂತ್ರಿ ಜನ ಜಾತಿಯ ಉನ್ನತ ಗ್ರಾಮ ಅಭಿಯಾನ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬುಡಕಟ್ಟು ಜನಾಂಗದ ಆದರ್ಶ ಪುರುಷ ಭಗವಾನ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವ ನಿಮಿತ್ತ ಅವರ ಸ್ಮರಣೆಗಾಗಿ ಜಿಲ್ಲೆಯ 51 ಗ್ರಾಮಗಳನ್ನು ಪ್ರಧಾನಮಂತ್ರಿ ಜನ ಜಾತಿಯ ಉನ್ನತ ಗ್ರಾಮ ಅಭಿಯಾನ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.ಪತ್ರಿಕಾ ಹೇಳಿಕೆ ನೀಡಿದ ಅವರು, ನ.15ರಂದು ಬಿಹಾರ ರಾಜ್ಯದ ಜಾಮೂಯಿನಲ್ಲಿ ಜನಜಾತಿಯ ಗೌರವ ದಿವಸ ಆಚರಣೆಯ ಪ್ರಯುಕ್ತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದ ಮೈಸೂರಿನಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.
ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಜನರು ಹೆಚ್ಚು ವಾಸಿಸುವ ಗ್ರಾಮಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿದ್ದು, ಗೋಕಾಕ ತಾಲೂಕಿನಲ್ಲಿ 12, ಬೆಳಗಾವಿ -10, ಬೈಲಹೊಂಗಲ-6, ಸವದತ್ತಿ -4, ಯರಗಟ್ಟಿ-1, ಹುಕ್ಕೇರಿ -18, ಖಾನಾಪುರ -1 ಜಿಲ್ಲೆಯಲ್ಲಿ ಒಟ್ಟು 51 ಗ್ರಾಮಗಳು ಆಯ್ಕೆಯಾಗಿವೆ.ಆಯ್ಕೆಯಾದ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುದ್ಧೀಕರಣ, ಮನೆ ನಿರ್ಮಾಣ, ಆರೋಗ್ಯ ಯೋಜನೆಗಳ ಅನುಷ್ಠಾನ, ಪರಿಶಿಷ್ಟ ವರ್ಗದವರಿಗೆ ಶಿಕ್ಷಣ, ಸೋಲಾರ್ ವ್ಯವಸ್ಥೆ, ಕೃಷಿ ಮತ್ತು ತೋಟಗಾರಿಕೆ ಯೋಜನೆಗಳ ಅನುಷ್ಠಾನ ಮತ್ತು ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕ ಮುಂತಾದ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಪರಿಶಿಷ್ಟ ಪಂಗಡದ ಜನರಿಗೆ ಅನುಕೂಲ ಕಲ್ಪಿಸುವ ವಿವಿಧ 17 ಇಲಾಖೆಗಳು ಈ ಎಲ್ಲ ಗ್ರಾಮಗಳಲ್ಲಿ ಆಯಾ ಇಲಾಖೆಗಳಿಂದ ಅನುಷ್ಠಾನಗೊಳ್ಳದಿರುವ ಕಾಮಗಾರಿಗಳಿಗೆ ಹೊಸ ಕ್ರಿಯಾಯೋಜನೆ ತಯಾರಿಸಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಿವೆ ಎಂದವರು ತಿಳಿಸಿದ್ದಾರೆ.