ಈ ಯೋಜನೆಯ ಅಡಿ ಜಿಲ್ಲೆಯಲ್ಲಿ ಒಟ್ಟು 1,02,506 ಮಂದಿ ಅರ್ಹ ಫಲಾನುಭವಿಗಳಲ್ಲಿ ಇಲ್ಲಿಯವರೆವಿಗೂ 92,562 ಜನ ಅರ್ಹ ಫಲಾನುಭವಿಗಳು ಮಾತ್ರ ಇ-ಕೆ.ವೈ.ಸಿ ಮಾಡಿಸಿದ್ದು, ಉಳಿಕೆ 9,944 ಜನ ಅರ್ಹ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಲ್ಲ.

ಎಂ.ಅಫ್ರೋಜ್ ಖಾನ್

ರಾಮನಗರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಂ.ಕಿಸಾನ್) ಯೋಜನೆಗೆ ಅರ್ಹರಾಗಿರುವ 9944 ರೈತರು ಇ-ಕೆವೈಸಿ ಮಾಡಿಸಲಾಗದೆ ಸಹಾಯಧನದಿಂದ ವಂಚಿತರಾಗಿದ್ದಾರೆ.ಈ ಯೋಜನೆಯ ಅಡಿ ಜಿಲ್ಲೆಯಲ್ಲಿ ಒಟ್ಟು 1,02,506 ಮಂದಿ ಅರ್ಹ ಫಲಾನುಭವಿಗಳಲ್ಲಿ ಇಲ್ಲಿಯವರೆವಿಗೂ 92,562 ಜನ ಅರ್ಹ ಫಲಾನುಭವಿಗಳು ಮಾತ್ರ ಇ-ಕೆ.ವೈ.ಸಿ ಮಾಡಿಸಿದ್ದು, ಉಳಿಕೆ 9,944 ಜನ ಅರ್ಹ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಲ್ಲ. 

ರೈತರಿಗೆ ಆರ್ಥಿಕ ನೆರವು ನೀಡುವ ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ ಯೋಜನೆ 2019ರಿಂದ ಜಾರಿಗೆ ಬಂದಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ತಲಾ 2 ಸಾವಿರ ರು.ನಂತೆ ವರ್ಷಕ್ಕೆ 6 ಸಾವಿರ ರು., ಸಹಾಯಧನ ನೀಡಲಾಗುತ್ತದೆ.ಪಿಎಂ ಕಿಸಾನ್‌ ಯೋಜನೆಯಡಿ ರೈತರ ಬ್ಯಾಂಕ್‌ ಖಾತೆಗೆ ಹಣ ಸಂದಾಯ ಮಾಡಲಾಗುತ್ತದೆ. 

ಈ ವರ್ಷ ಬಾಕಿ ಇರುವ ಅರ್ಹ ಫಲಾನುಭವಿ ರೈತರು ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಹಣವನ್ನು ಪಡೆಯಲು ಇ-ಕೆ.ವೈ.ಸಿ ಮಾಡಿಸುವುದು ಕಡ್ಡಾಯವಾಗಿದೆ.

ಇ-ಕೆವೈಸಿ ಏಕೆ? :ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ , ಅರೆ ಸರ್ಕಾರಿ ನೌಕರಿಯಲ್ಲಿರುವ ಸದಸ್ಯರನ್ನು ಹೊಂದಿದ ರೈತ ಕುಟುಂಬದರು ಪಿಎಂ ಕಿಸಾನ್‌ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಯೋಜನೆಯ ಪ್ರಾರಂಭದಲ್ಲಿ ಕೆಲವರು ವ್ಯಾಪ್ತಿಗೆ ಬರದಿದ್ದರೂ ಹಣ ಪಡೆದು ನಂತರ ಹಿಂದಿರುಗಿಸಿದ್ದರು. ಪ್ರಸ್ತುತ ಯೋಜನೆ ಪ್ರಾರಂಭವಾಗಿ ಆರು ವರ್ಷ ಕಳೆದಿರುವುದರಿಂದ ಮೃತಪಟ್ಟವರು, ಜಮೀನು ಮಾರಾಟ ಮಾಡಿದವರು ಮೊದಲಾಗಿ ನಿಖರವಾದ ಸಮೀಕ್ಷೆಗೆ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಈ ಬಾರಿ ಇ-ಕೆವೈಸಿ ಕಡ್ಡಾಯಗೊಳಿಸಿದೆ.

ಇ - ಕೆವೈಸಿ ಮಾಡಿಸುವುದು ಎಲ್ಲಿ:ಒಂದು ವೇಳೆ ಜಾಲತಾಣದ ಮೂಲಕ ಇ-ಕೆ.ವೈ.ಸಿ ಮಾಡಲು ಸಾಧ್ಯವಾಗದಿದ್ದಲ್ಲಿ ರೈತರು ಸಮೀಪದ ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಕೈಬೆರಳಿನ ಗುರುತು ಮತ್ತು ಆಧಾರ್ ಸಂಖ್ಯೆಯನ್ನು ಬಳಸಿ ಇ-ಕೆವೈಸಿ ಮಾಡಬಹುದಾಗಿದೆ. ಪಿ.ಎಂ ಕಿಸಾನ್ ಮೊಬೈಲ್ ಆಪ್‌ನಲ್ಲಿ ಫೇಸ್ ಸ್ಕ್ಯಾನ್ ಮಾಡಿಸುವುದರ ಮೂಲಕ ಇ-ಕೆ.ವೈ.ಸಿ ಮಾಡಬಹುದಾಗಿದೆ. ಈ ಯೋಜನೆಯಡಿ ರೈತ ಕುಟುಂಬ ಎಂದರೆ ಪತಿ, ಪತ್ನಿ ಮತ್ತು ಅಪ್ರಾಪ್ತ ಮಕ್ಕಳನ್ನು ಒಳಗೊಂಡಿದೆ. ಒಂದು ಕುಟುಂಬದಿಂದ ಅರ್ಹ ಕೃಷಿ ಭೂಮಿ ಹೊಂದಿರುವ ಪತಿ ಅಥವಾ ಪತ್ನಿ ಯೋಜನೆಯ ಫಲಾನುಭವಿಯಾಗಲು ಅವಕಾಶವಿದೆ.

ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿ:

ಪಿಡಿಎಸ್ ರೇಷನ್ ಕಾರ್ಡ್ ಡಾಟಾಬೇಸ್‌ನ ಫಲಾನುಭವಿಗಳ ಮಾಹಿತಿಯನ್ನು ಪಿಎಂಕೆಐಎಸ್‌ಎಎನ್ ಯೋಜನೆಯ ಫಲಾನುಭವಿಗಳ ಮಾಹಿತಿಯೊಂದಿಗೆ ಪರಿಶೀಲಿಸಿ ಒಂದೇ ರೇಷನ್ ಕಾರ್ಡ್‌ನಲ್ಲಿ ಇರುವ 11,403 ಫಲಾನುಭವಿಗಳ ಪಟ್ಟಿಯನ್ನು ನೀಡಲಾಗಿದ್ದು ಇದನ್ನು ಪರಿಶೀಲಿಸಿ (1587) ಅಂಗೀಕರಿಸಿದ ನಂತರವೇ ಅರ್ಹ ಫಲಾನುಭವಿಗಳು ಯೋಜನೆಯಡಿ ಆರ್ಥಿಕ ಸೌಲಭ್ಯಕ್ಕೆ ಅರ್ಹರಾಗುತ್ತಾರೆ.ಇಲ್ಲವಾದಲ್ಲಿ (ಉಳಿಕೆ 9,816) ರೈತ ಕುಟುಂಬದ ಎಲ್ಲಾ ಸದಸ್ಯರು ಮುಂದಿನ ಕಂತುಗಳಿಗೆ ಅನರ್ಹರಾಗುವ ಸಾಧ್ಯತೆಗಳಿರುತ್ತದೆ.

ಆದ್ದರಿಂದ, ಒಂದೇ ಕುಟುಂಬದ ಇಬ್ಬರು ಸದಸ್ಯರು ಯೋಜನೆಯಡಿ ಪ್ರಯೋಜನಗಳನ್ನು ಪಡೆಯುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಫಲಾನುಭವಿಗಳು ಕ್ಷೇತ್ರ ಮಟ್ಟದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ....ಬಾಕ್ಸ್ ...

ಇ - ಕೆವೈಸಿ ಮಾಡಿಸದ ರೈತರ ವಿವರತಾಲೂಕುಇ ಕೆವೈಸಿ ಮಾಡಿಸದ ರೈತರು

ರಾಮನಗರ 2,022

ಚನ್ನಪಟ್ಟಣ1,944 

ಕನಕಪುರ3,234 

ಮಾಗಡಿ2,744 

ಒಟ್ಟು9,944