ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಬಿಜೆಪಿ ಹುಣಸಗಿ ಮಂಡಲ ವತಿಯಿಂದ ಪಟ್ಟಣದ ಮಲ್ಲಯ್ಯ ದೇವರ ಆವರಣದಲ್ಲಿ ಸೇವಾ ಸಂಕಲ್ಪ ಅಭಿಯಾನದ ಮೂಲಕ ‘ಆಶೀರ್ವಾದದ ದೀಪ’ ಬೆಳಗಿಸಿ ಶುಭ ಹಾರೈಸಲಾಯಿತು.

ಕನ್ನಡಪ್ರಭ ವಾರ್ತೆ ಹುಣಸಗಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಬಿಜೆಪಿ ಹುಣಸಗಿ ಮಂಡಲ ವತಿಯಿಂದ ಪಟ್ಟಣದ ಮಲ್ಲಯ್ಯ ದೇವರ ಆವರಣದಲ್ಲಿ ಸೇವಾ ಸಂಕಲ್ಪ ಅಭಿಯಾನದ ಮೂಲಕ ‘ಆಶೀರ್ವಾದದ ದೀಪ’ ಬೆಳಗಿಸಿ ಶುಭ ಹಾರೈಸಲಾಯಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಪ್ಪ ಗುಳಗಿ ಮಾತನಾಡಿ, ದೇಶದ ಅಭಿವೃದ್ಧಿ, ಜನಕಲ್ಯಾಣ ಹಾಗೂ ಸಾರ್ವಜನಿಕ ಸೇವೆಯ ಆಶಯಗಳೊಂದಿಗೆ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಂಕಲ್ಪ ಹೊಂದಲಾಗಿದೆ. ಜನಸೇವೆಯೇ ಜನಾರ್ದನನ ಸೇವೆ’ ಆಶಯದೊಂದಿಗೆ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸೆ.17ರಿಂದ ಅ.17ರವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನಸೇವೆ ಹಾಗೂ ಸುಶಾಸನದ ಪಯಣವನ್ನು ಸ್ಮರಿಸುವ ಉದ್ದೇಶದಿಂದ ಅಭಿಯಾನ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ವಿವಿಧ ಜನಪರ ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಂಘಟನಾತ್ಮಕವಾಗಿ ಮಾರ್ಗ ಸೂಚಿ ಹಾಕಿಕೊಂಡಿದೆ ಎಂದು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ಸಾಹುಕಾರ ವೈಲಿ ಮಾತನಾಡಿ, ಸೆ.17ರಂದು ದೇಶಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸೂಚಿಸಲಾಗಿದ್ದು, ಮನೆ-ಮನೆಗೆ ತೆರಳಿ ಜನಕಲ್ಯಾಣ ಯೋಜನೆಗಳ ಫಲಾನುಭವಿಗಳ ಮನೆಗಳಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ. ಶಾಲಾ ಮಕ್ಕಳಿಗಾಗಿ ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆ, ಪ್ರಧಾನಿ ಅವರ 25 ವರ್ಷಗಳ ಸೇವಾ ಕಾರ್ಯಗಳ ಕುರಿತ ಬೀದಿ ನಾಟಕ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಗೌರವಿಸುವ ಕಾರ್ಯಕ್ರಮಗಳು ಹಮ್ಮಿಕೊಂಡಿದೆ ಎಂದು ಹೇಳಿದರು.

ಇದು ಅಲ್ಲದೆ ‘ಸೇವಾ ಜ್ಯೋತಿ ಕಲಶ ಯಾತ್ರೆ–ವಿಕಸಿತ ಭಾರತ ಸಂಕಲ್ಪ’, ‘ಸೇವೆಯೇ ನನ್ನ ಕೊಡುಗೆ’, ‘ಸೇವಾ ಸೇತು ಅಭಿಯಾನ’, ರಾಷ್ಟ್ರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ರಂಗೋಲಿ ಮೂಲಕ ಜನಕಲ್ಯಾಣ ಯೋಜನೆಗಳ ಪ್ರಚಾರ, ರಾಷ್ಟ್ರೀಯ ಇನ್ನೋವೇಶನ್ ಚಾಲೆಂಜ್ ಹಾಗೂ ‘ಸುಶಾಸನ ಸೇವಾ ಸಂವಾದ’ ಸಹಿತ 12 ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಮಾಹಿತಿ ನೀಡಿರು.

ಸೋಮಶೇಖರ್ ಸ್ಥಾವರಮಠ, ಬಿ.ಎಲ್.ಹಿರೇಮಠ, ತಿಪ್ಪಣ್ಣ ಸಾಹುಕಾರ್ ಚಂದಾ, ಸುರೇಶ ದೊರಿ, ಶಿವನಗೌಡ ಚನ್ನೂರ, ಬಸಣ್ಣ ದೇಸಾಯಿ,ಮುರಿಗೆಣ್ಣ ದೇಸಾಯಿ,ಶಿವನಗೌಡ ಪಾಟೀಲ್, ಬಸವರಾಜ ಮೇಲಿನಮನಿ, ಶಿವರುದ್ರ ದೇಸಾಯಿ, ಶಿವಲಿಂಗಸ್ವಾಮಿ ವೀರಕ್ತಮಠ, ಸಂಗನಗೌಡ ಪೊಲೀಸ್ ಪಾಟೀಲ್, ಆನಂದ ಬಾರಿಗಿಡದ,ನೀಲಕಂಠ ಚಿಂಚೋಳಿ, ಮಹೇಶ ಸ್ಥಾವರಮಠ, ಪ್ರಶಾಂತ ಹಿರೇಮಠ, ಗುರಲಿಂಗಪ್ಪ ಸಜ್ಜನ್, ನಂದಪ್ಪ ಪೀರಾಪೂರ, ಮಡಿವಾಳಪ್ಪ ಮಿಲ್ಟ್ರಿ, ಅನಿಲ್ ಬಳಿ, ಮಹಾಂತೇಶ ಮುರಾಳ, ಅಲ್ಲಾಬಕ್ಷ ಜಾಲಿಬೆಂಚಿ, ಗೋಪಾಲ ಹುಲಿಮನಿ ಸೇರಿದಂತೆ ಇನ್ನಿತರರು ಇದ್ದರು.