ಪ್ರಧಾನಿ ಮೋದಿ ಸ್ಟೇಟ್ಸ್‌ಮನ್‌ ಅಲ್ಲ ಸೇಲ್ಸ್‌ಮನ್‌: ಬಿ.ಕೆ ಹರಿಪ್ರಸಾದ್‌

| Published : Apr 30 2024, 02:08 AM IST

ಪ್ರಧಾನಿ ಮೋದಿ ಸ್ಟೇಟ್ಸ್‌ಮನ್‌ ಅಲ್ಲ ಸೇಲ್ಸ್‌ಮನ್‌: ಬಿ.ಕೆ ಹರಿಪ್ರಸಾದ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಗ್ಯಾರಂಟಿ ಚೈನಾ ಸಾಮಗ್ರಿಗಳಿದ್ದಂತೆ ವಾರಂಟಿನೇ ಇರೋಲ್ಲದೇಶದ 80 ಕೋಟಿ ಜನರಿಗೆ ಭಾರತ್‌ ಅಕ್ಕಿ ನೀಡಿ ಭಿಕ್ಷುಕರಂತೆ ನಿಲ್ಲಿಸಿದೆ. 2014ರಲ್ಲಿ ಅಚ್ಛೆ ದಿನ್‌ ಘೋಷಣೆ ಮೋದಿಯಿಂದ ದೇಶಕ್ಕೆ ಭಾರಿ ಮೋಸ ಎಂದು ಬೀದರ್‌ನಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್‌ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಪ್ರಧಾನಿಯಾಗಿದ್ದವರು ಮುತ್ಸದ್ಧಿಯಾಗಿರಬೇಕು. ಅವರ ಮಾತುಗಳು ತೂಕದ್ದಾಗಿರಬೇಕು. ಆದರೆ ದೇಶಾದ್ಯಂತ ಖಾಸಗೀಕರಣಕ್ಕೆ ಒತ್ತು ನೀಡಿ ಭರ್ಪೂರ್‌ ಮಾತುಗಳ ಭಾಷಣಕ್ಕೆ ಸೀಮಿತವಾಗುವ ಮೂಲಕ ನರೇಂದ್ರ ಮೋದಿ ಒಬ್ಬ ಸ್ಟೇಟ್ಸಮನ್‌ ಅಲ್ಲ ಸೇಲ್ಸಮನ್‌ ಥರ ವರ್ತಿಸುತ್ತಿದ್ದಾರೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್‌ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ದೇಶದ ಪ್ರಧಾನಿ ಸರ್ವ ಧರ್ಮವನ್ನು ಸಮಾನವಾಗಿ ನೋಡಬೇಕು. ಆದರೆ ಚುನಾವಣಾ ಭಾಷಣಗಳಲ್ಲಿ ಮೀನು, ಮಾಂಸ ಹಾಗೂ ಮುಸ್ಲಿಂ ಪದಗಳನ್ನೇ ಹೆಚ್ಚು ಬಳಸುವ ಮೂಲಕ ಜ್ಯಾತ್ಯತೀತತೆಯನ್ನು ಮೂಲೆಗೆ ತಳ್ಳಿದ್ದು ವಿದೇಶಗಳಲ್ಲಿ ದೇಶದ ಘನತೆಗೆ ಧಕ್ಕೆ ತಂದಂತೆ ಎಂದರು.

ಬಿಜೆಪಿ ಪ್ರಣಾಳಿಕೆಯಲ್ಲಿ 10 ವರ್ಷಗಳ ಸಾಧನೆ ಅಲ್ಲ ಮುಂದಿನ 5 ವರ್ಷಗಳ ಘೋಷಣೆಯೂ ಇಲ್ಲ. ಮುಂದಿನ 2047ರ ಕನಸ್ಸು ತೋರಿಸುವ ಮೂಲಕ ಯುವಕರಿಗೆ ಇನ್ನೂ 25 ವರ್ಷಗಳ ಕಾಲ ಕಾದು ನೋಡುವಂತೆ ಮಾಡಿದ್ದು ದೇಶದ ಯುವ ಜನಾಂಗಕ್ಕೆ ಮಾಡುತ್ತಿರುವ ಮೋಸ ಎಂದರು.

ಮುಂದಿನ 2047ರ ವರೆಗೆ ಅಮೃತ ಕಾಲ ಮಾಡುತ್ತೇವೆ ಎಂದು ಹೇಳುವ ಬಿಜೆಪಿಗರ ಪ್ರಣಾಳಿಕೆ ದೂರದ ಆಸೆ ತೋರಿಸಿದಂತಿದೆ. ಅದರಲ್ಲಿ ಯಾವುದೇ ರೀತಿಯಲ್ಲಿ ಹುರುಳಿಲ್ಲ. ಅಕ್ರಮವನ್ನು ಸಕ್ರಮ ಮಾಡುವದರಲ್ಲಿಯೇ ಬಿಜೆಪಿ ಸರ್ಕಾರ ಕಾಲ ಕಳೆದಿದ್ದು ಅದಕ್ಕೆ ಎಲೆಕ್ಟೋರಲ್‌ ಬಾಂಡ್‌ ಅಕ್ರಮವೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.

2014ರಲ್ಲಿ ಅಚ್ಛೆ ದಿನ್‌ ಘೋಷಣೆ ಮೋದಿಯಿಂದ ದೇಶಕ್ಕೆ ಮೋಸ: 2014ರಲ್ಲಿ ಅಚ್ಛೆ ದಿನ್‌ ಘೋಷಣೆ ಮಾಡಿದ್ದು ಎಲ್ಲಿಗೆ ಹೋಯಿತು. ನೋಟ್‌ ಬ್ಯಾನ್‌ ಮೂಲಕ ದೇಶದ ಕಪ್ಪು ಹಣವನ್ನು ಸಕ್ರಮವಾಗಿ ಗಳಿಸಿಕೊಳ್ಳುವತ್ತ ಸಾಗಿದರು. ಅನೇಕ ಸರ್ಕಾರಿ ಸ್ವಾಮ್ಯದ ಬೃಹತ್‌ ಉದ್ಯಮಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಸಂಪತ್ತನ್ನು ಖಾಸಗಿಯವರಿಗೆ ಹಂಚಿದರು. ಹೀಗೆಯೇ ಮೋದಿ ಕಳೆದ 10 ವರ್ಷಗಳಿಂದ ದೇಶದ ಜನರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.

ದೇಶದ 80 ಕೋಟಿ ಜನರಿಗೆ ಅಕ್ಕಿ ನೀಡಿ ಭಿಕ್ಷುಕರಂತೆ ನಿಲ್ಲಿಸಿದೆ:

ದೇಶದ 80 ಕೋಟಿ ಜನರಿಗೆ ಅಕ್ಕಿ ನೀಡುವ ಯೋಜನೆಗೆ ಚಾಲನೆ ನೀಡಿ ದೇಶದ ಜನರನ್ನು ಭಿಕ್ಷುಕರನ್ನಾಗಿಸಿದೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ಕಿಡಿ ಕಾರಿದ ಅವರು, ಮಹಾತ್ಮಾ ಗಾಂಧೀಜಿಯವರ ಪೋರಬಂದರ್‌ ಇಂದು ಮಾಫಿಯಾಗಳ ಕೈಗೆ ನೀಡುವಲ್ಲಿ ಬಿಜೆಪಿ ಮುಂದಾಗುವ ಮೂಲಕ ಮಹಾತ್ಮರ ಚಿಂತನೆಗಳಿಗೆ ತೀಲಾಂಜಲಿ ಇಟ್ಟಿದೆ ಎಂದು ದೂರಿದರು.

ಕಾಂಗ್ರೆಸ್‌ ಅಧಿಕಾರಕ್ಕೇರಿದರೆ ಶೇ.75 ಮೀಸಲಾತಿ: ಮೀಸಲಾತಿ ಕುರಿತು ಈಗಾಗಲೇ ದೇಶದಲ್ಲಿ ಕಾಂಗ್ರೆಸ್‌ ಘೋಷಣೆ ಮಾಡಿದೆ. ಈಗಾಗಲೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಹೀಗೆಯೇ ನಾವು ಒಟ್ಟಾರೆ ಮೀಸಲಾತಿಯನ್ನು ಶೇ. 75ಕ್ಕೆ ಏರಿಸುತ್ತೇವೆ ಎಂದು ಘೋಷಿಸಿದ್ದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು.

ಮೋದಿಗೆ ವೀಸಾ ನಿರಾಕರಿಸಿದ್ದ ಅಮೆರಿಕ: ಪ್ರಧಾನಿಯಾಗುವದಕ್ಕೂ ಮುನ್ನ ಗುಜರಾಜ್‌ನಲ್ಲಿ ನಡೆದ ಗಲಭೆಗಳು ಇವರ ಪಾತ್ರದ ಹಿನ್ನೆಲೆ ಅಮೆರಿಕ ಇವರಿಗೆ ವೀಸಾ ನಿರಾಕರಿಸಿತ್ತು. ನಂತರ ಪ್ರಧಾನಿಯಾದ ಮೇಲೆ ರಾಜತಾಂತ್ರಿಕ ತೊಡಕುಗಳು ಬಾರದಿರಲಿ ಎಂದು ವೀಸಾ ನೀಡಿದೆ. ಹೀಗಾಗಿ ನರೇಂದ್ರ ಮೋದಿ ಚಿಂತನೆಗಳು ಹಾಗೂ ಘೋಷಣೆಗಳು ದೇಶಕ್ಕೆ ಮಾರಕ ಎಂದು ಬಿ.ಕೆ ಹರಿಪ್ರಸಾದ್‌ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಎಂಎ ಸಮೀ, ದತ್ತಾತ್ರೆಯ ಮೂಲಗೆ ಸೇರಿದಂತೆ ಇನ್ನಿತರರು ಇದ್ದರು.