ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ನಿಮಿತ್ತ ಒಂದು ತಿಂಗಳ ಪೂಜಾ ಅಭಿಯಾನದ ಪ್ರಯುಕ್ತ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕಿನ ಪವಿತ್ರ ಕ್ಷೇತ್ರ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ, ಶ್ರೀ ನರಸಿಂಹಸ್ವಾಮಿ ದೇವಸ್ಥಾನ, ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಕರ್ತೃಗದ್ದುಗೆಗೆ ಹಾಗೂ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸುಂಕದಕಟ್ಟೆ ಗ್ರಾಮದ ಶ್ರೀಮಂಜುನಾಥಸ್ವಾಮಿ, ಶ್ರೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಮಾತನಾಡಿದ ರೇಣುಕಾಚಾರ್ಯ, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿ ಹಿಡಿದು ಸೆಪ್ಟೆಂಬರ್ 17ಕ್ಕೆ 25 ವರ್ಷಗಳು ತುಂಬುತ್ತಿದ್ದು, ಅವರ ಆರೋಗ್ಯ, ಆಯುಷ್ಯ ಹೆಚ್ಚಿ ಇನ್ನಷ್ಟು ದೇಶ ಸೇವೆ ಮಾಡಲಿ ಎಂದು ತಾನು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ನರೇಂದ್ರ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಮೂರು ಬಾರಿ ಹಾಗೂ ದೇಶದ ಪ್ರಧಾನಿಯಾಗಿ ಮೂರು ಬಾರಿ ಒಟ್ಟು ನಿರಂತರವಾಗಿ 25 ವರ್ಷಗಳ ಕಾಲ ಅಧಿಕಾರ ನಡೆಸುತ್ತಿರುವ ಪ್ರಯುಕ್ತ ಸೇವಾ ಸಂಕಲ್ಪದ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅವರು ದೇಶದ ಪ್ರಧಾನಿಯಾದ ಮೇಲೆ ಭಾರತದ ಚಿತ್ರಣವೇ ಬದಲಾಗಿದ್ದು, ವಿಶ್ವವೇ ಮೆಚ್ಚುವಂತಹ ಕೆಲಸವನ್ನು ಪ್ರಧಾನಿಯವರು ಕೈಗೊಂಡಿದ್ದಾರೆ. ನನಗೆ ದೇಶ ಏನು ಮಾಡಿದೆ ಎನ್ನುವುದಕ್ಕಿಂತ ನಾನೇನು ದೇಶಕ್ಕೆ ಸೇವೆ ಸಲ್ಲಿಸಿದ್ದೇನೆ ಎನ್ನುವ ತತ್ವವನ್ನು ಮುಂದಿಟ್ಟುಕೊಂಡು ದೇಶ ಸೇವೆಯೇ ಈಶ ಸೇವೆ ಎಂದು ಕಾಯಕ ಮಾಡುತ್ತಿರುವ ಮೋದಿಯವರು ಅಪ್ಪಟ ದೇಶ ಪ್ರೇಮಿ ಎಂದು ಬಣ್ಣಿಸಿದರು.

ದೇಶದ ಗಡಿ ರಕ್ಷಣೆಯಲ್ಲಿ ಹೆಚ್ಚಿನ ಮಹತ್ವ ನೀಡಿ, ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಸಿಂಧೂರ ಕಾರ್ಯಾಚರಣೆಗಳನ್ನು ನಡೆಸಿ ಪಾಪಿ ಪಾಕಿಸ್ತಾನಕ್ಕೆ ಬಹು ದೊಡ್ಡ ಪಾಠ ಕಲಿಸಿದ್ದಾರೆ ಎಂದು ತಿಳಿಸಿದರು.

2014ರಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಜನಸಾಮಾನ್ಯರ ಮನದಾಳದಲ್ಲಿ ಉಳಿದ ನರೇಂದ್ರಮೋದಿ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಹತೋಟಿಗೆ ತರಲು ಶ್ರಮಿಸಿದರು. ಈಗ ಪ್ರತಿಯೊಬ್ಬ ಭಾರತೀಯನು ಬ್ಯಾಂಕ್ ಖಾತೆ ಹೊಂದಿ ತನ್ನ ಆರ್ಥಿಕ ಸ್ಥಿತಗತಿ ಅರಿತು ಬದುಕುವ ಕಲೆಯನ್ನು ರೂಢಿಸಿಕೊಂಡಿದ್ದಾರೆ, ಇದಕ್ಕೆ ಕಾರಣ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಎಂದು ಹೇಳಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಬೀರಪ್ಪ, ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್, ಮುಖಂಡರಾದ ಎಂ.ಎಸ್.ಪಾಲಾಕ್ಷಪ್ಪ, ನೆಲಹೊನ್ನೆ ಮಂಜುನಾಥ್, ನವೀನ್‌ ಇಂಚರ ಹಾಗೂ ಇತರರು ಇದ್ದರು