ಶುಕ್ರವಾರ ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಮುಖ್ಯವಾಗಿ ಪ್ರಧಾನಿ ಅವರ ಸುರಕ್ಷತೆಯ ಬಗ್ಗೆ ಭಾರೀ ಸಿದ್ಧತೆಗಳಾಗುತ್ತಿದೆ. ಪ್ರಧಾನಿ ಅವರ ಆಗಮನಕ್ಕಾಗಿಯೇ ಆದಿಉಡುಪಿ ಮೈದಾನದಲ್ಲಿ ಹೆಚ್ಚುವರಿ ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗಿದೆ.
ಎಲ್ಲೆಲ್ಲೂ ಪ್ರಧಾನಿ ಆಗಮನ ಹವಾ, ಚರ್ಚೆ । ಹೆಚ್ಚುತ್ತಿದೆ ಕಾತುರ, ಕುತೂಹಲ
ಉಡುಪಿ: ಕಳೆದ ಎರಡು ದಿನಗಳಿಂದ ಉಡುಪಿಯಲ್ಲಿ ಮೋದಿಯದ್ದೇ ಹವಾ, ಮಾತು. ಚರ್ಚೆ, ಪರ್ಯಾಯ ಪುತ್ತಿಗೆ ಮಠದ ವತಿಯಿಂದ 28ರಂದು ನಡೆಯುವ ಲಕ್ಷ ಕಂಠ ಗೀತ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸುತ್ತಿರುವ ಬಗ್ಗೆ ಜನರಲ್ಲಿ ಕಾತರ, ಕುತೂಹಲ ಹೆಚ್ಚುತ್ತಿದೆ.ಜೊತೆಗೆ ಪ್ರಧಾನಿ ಅವರ ಭೇಟಿ ಹಿನ್ನೆಲೆಯಲ್ಲಿ ಮುಖ್ಯವಾಗಿ ಪ್ರಧಾನಿ ಅವರ ಸುರಕ್ಷತೆಯ ಬಗ್ಗೆ ಭಾರೀ ಸಿದ್ಧತೆಗಳಾಗುತ್ತಿದೆ. ಪ್ರಧಾನಿ ಅವರ ಆಗಮನಕ್ಕಾಗಿಯೇ ಆದಿಉಡುಪಿ ಮೈದಾನದಲ್ಲಿ ಹೆಚ್ಚುವರಿ ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗಿದೆ. ಬುಧವಾರ ದೆಹಲಿಯಿಂದ ಬಂದ ವಾಯು ಸೇನೆಯ ಅಧಿಕಾರಿಗಳು ಅವುಗಳ ಗುಣಮಟ್ಟವನ್ನು ಪರೀಕ್ಷಿಸಿದರು. ನಂತರ ವಾಯು ಸೇನೆಯ 3 ಹೆಲಿಕಾಪ್ಟರ್‌ಗಳು ಬಂದು ಆದಿಉಡುಪಿ ಆಕಾಶದಲ್ಲಿ ಅನೇಕ ಬಾರಿ ಸುತ್ತು ಹೊಡೆದು ಈ ಹೆಲಿಪ್ಯಾಡ್‌ನಲ್ಲಿ ಇಳಿಯುವ ಮತ್ತು ಟೇಕಾಫ್ ಮಾಡುವ ಬಗ್ಗೆ ರಿಹರ್ಸಲ್ ನಡೆಸಿದರು ಮತ್ತು ಹೆಲಿಪ್ಯಾಡ್‌ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಂಡರು. ಗುರುವಾರ, ಆದಿಉಡುಪಿಯಿಂದ ಕೃಷ್ಣಮಠದವರೆಗೆ ಪ್ರಧಾನಿ ಸಾಗುವ 2 ಕಿ.ಮೀ. ಮತ್ತು ನಡುವೆ 1 ಕಿ.ಮೀ. ರೋಡ್ ಶೋ ನಡೆಸುವ ರಸ್ತೆಯಲ್ಲಿಯೂ ಪ್ರಧಾನಿ ಅವರ ವಾಹನಗಳ ಸಂಚಾರದ ರಿಹರ್ಸಲ್ ನಡೆಯಲಿದೆ.
ನಾಳೆ ಭಕ್ತರಿಗೆ ನಿರ್ಬಂಧಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ಹಿನ್ನೆಲೆಯಲ್ಲಿ ಭಕ್ತರ ಭೇಟಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಭಕ್ತರು ಅಂದು ಬೆಳಗ್ಗೆ ಎಂಟು ಗಂಟೆಯವರೆಗೆ ಕೃಷ್ಣನ ದರ್ಶನ ಪಡೆಯಬಹುದು, 8 ಗಂಟೆಯಿಂದ ಮೋದಿ ಅವರು ಹಿಂತೆರಳುವ ವರೆಗೆ ಅಂದರೆ 3 ಗಂಟೆಯವರೆಗೂ ಭಕ್ತರಿಗೆ ಕೃಷ್ಣಮಠ ಮತ್ತು ರಥಬೀದಿಗೆ ಪ್ರವೇಶ ಅವಕಾಶ ಇರುವುದಿಲ್ಲ, ನಂತರ ದೇವರ ದರ್ಶನದಲ್ಲಿ ಭಕ್ತರು ಭಾಗವಹಿಸಬಹುದು ಎಂದು ಕೃಷ್ಣಮಠದ ಪ್ರಕಟಣೆ ತಿಳಿಸಿದೆ. ಭಾರಿ ಪೊಲೀಸ್ ಬಂದೋಬಸ್ತು
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಉಡುಪಿಗೆ ಕರೆಸಲಾಗಿದ್ದು, ಈಗಾಗಲೇ ನಗರದಲ್ಲೆಲ್ಲಾ ಪೊಲೀಸರೇ ಕಂಡು ಬರುತಿದ್ದಾರೆ. ಮೋದಿ ಸಂಚರಿಸುವ ರಸ್ತೆಯಲ್ಲಿ ಪೊಲೀಸರ ಕಣ್ಗಾವಲು ಹಾಕಲಾಗಿದೆ. ಆದಿಉಡುಪಿಯಿಂದ ಕಲ್ಸಂಕ ವೃತ್ತದವರೆಗೂ ಬಲಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಕಬ್ಬಿಣದ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಈ ಬ್ಯಾರಿಕೇಡ್ ಗಳ ಹೊರಗೆ ನಿಂತು ಅಭಿಮಾನಿಗಳು ಮೋದಿಯತ್ತ ಕೈಬೀಸಬಹುದಾಗಿದೆ. ಉಡುಪಿಯೀಗ ಕೇಸರಿಮಯಪ್ರಧಾನಿ ಮೋದಿ ಅವರು ಸಂಚರಿಸುವ ಆದಿಉಡುಪಿ - ಕೃಷ್ಣಮಠದ ಮಾರ್ಗದ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯಲ್ಲಿ ಕೇಸರಿ ಭಗವಧ್ವಜಗಳನ್ನು ಅಳವಡಿಸಲಾಗಿದೆ. ಕಲ್ಸಂಕ, ನಾರಾಯಣಗುರು ವೃತ್ತಗಳಲ್ಲಿ ಕೇಸರಿ ಪತಾಕೆಗಳನ್ನು ಕಟ್ಟಲಾಗಿದೆ. ಈ ಪ್ರದೇಶದಲ್ಲೀಗ ಎಲ್ಲೆಲ್ಲಿಯೂ ಕೇಸರಿ ಬಣ್ಣವೇ ಕಾಣುತ್ತಿದೆ, ಜೊತೆಗೆ ಮೋದಿ ಅವರನ್ನು ಸ್ವಾಗತಿಸುವ ಕಟೌಟುಗಳು, ಫ್ಲಕ್ಸ್ ಅಳವಡಿಸುವ ಕಾರ್ಯ ನಡೆಯುತ್ತಿದೆ.