ಸಾರಾಂಶ
- 1 ಲಕ್ಷ ಭಕ್ತರ ಜತೆ ಗೀತೋತ್ಸವದಲ್ಲಿ ಭಾಗಿ- 30ರಂದು ಯೋಗಿ ಕೂಡ ಭೇಟಿ: ಪುತ್ತಿಗೆ ಶ್ರೀ
---- 1 ತಿಂಗಳ ಕಾಲ ಉಡುಪಿ ಕೃಷ್ಣಮಠದಲ್ಲಿ ಬೃಹತ್ ಗೀತೋತ್ಸವ. ಶನಿವಾರ ಚಾಲನೆ- ನ.28ರಂದು ಬರೋಬ್ಬರಿ 1 ಲಕ್ಷ ಭಕ್ತರಿಂದ ಲಕ್ಷ ಕಂಠ ಗೀತಾ ಉತ್ಸವ ಆಯೋಜನೆ- ಆ ಕಾರ್ಯಕ್ರಮದಲ್ಲಿ ಮೋದಿ ಭಾಗಿ. ಕೊನೆಯ 10 ಶ್ಲೋಕ ಪಠಿಸಲಿರುವ ಪ್ರಧಾನಿ- ಬಳಿಕ ಮೋದಿ ಅವರಿಗೆ ವಿಶಿಷ್ಟ ಸನ್ಮಾನ: ಪರ್ಯಾಯ ಪುತ್ತಿಗೆ ಶ್ರೀಗಳಿಂದ ಮಾಹಿತಿ
--ಕನ್ನಡಪ್ರಭ ವಾರ್ತೆ ಉಡುಪಿಉಡುಪಿಯ ಶ್ರೀಕೃಷ್ಣಮಠದಲ್ಲಿ ಶನಿವಾರದಿಂದ ಒಂದು ತಿಂಗಳ ಕಾಲ ಬೃಹತ್ ಗೀತೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉತ್ಸವ ಉದ್ಘಾಟಿಸಲಿದ್ದಾರೆ. ಇದರಂಗವಾಗಿ ನ.28ರಂದು ನಡೆಯುವ ‘ಲಕ್ಷ ಕಂಠ ಗೀತಾ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಶ್ರೀಕೃಷ್ಣನ ಸನ್ನಿಧಿಯಲ್ಲಿ ಭಗವದ್ಗೀತೆಯ 10 ಶ್ಲೋಕ ಪಠಣ ಮಾಡಲಿದ್ದಾರೆ.
ನಗರದಲ್ಲಿ ಗುರುವಾರ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸುದ್ದಿಗೋಷ್ಠಿ ನಡೆಸಿ, ಈ ಬಗ್ಗೆ ಮಾಹಿತಿ ನೀಡಿದರು. 2 ವರ್ಷದ ಹಿಂದೆ ನಾನು ಕೋಟಿ ಗೀತಾ ಲೇಖನ ಯಜ್ಞ ಸಂಕಲ್ಪಿಸಿದ್ದೆ. ಅದು ಪೂರ್ಣಗೊಳ್ಳುತ್ತಿದೆ. ಇದರಂಗವಾಗಿ ಬೃಹತ್ ಗೀತೋತ್ಸವ ಆಯೋಜಿಸಲಾಗುತ್ತಿದೆ. ಪ್ರಧಾನಿ ಮೋದಿಯವರು ಗೀತೆಗೆ ಜಾಗತಿಕ ಮನ್ನಣೆ ಸಿಗುವಂತೆ ಮಾಡಿದ್ದಾರೆ. ಆದ್ದರಿಂದ ಕೋಟಿ ಗೀತಾ ಯಜ್ಞವನ್ನು ಶ್ರೀಕೃಷ್ಣನಿಗೆ ಮೋದಿ ಅವರಿಂದಲೇ ಅರ್ಪಣೆ ಮಾಡಿಸಬೇಕು ಎಂಬ ಆಶಯದಂತೆ ಅವರನ್ನು ಆಹ್ವಾನಿಸಲಾಗಿದೆ ಎಂದರು.ಅಂದು ಮಧ್ಯಾಹ್ನ 12 ಗಂಟೆಗೆ ಮೋದಿ ಕೃಷ್ಣಮಠಕ್ಕೆ ಆಗಮಿಸುತ್ತಾರೆ. ನಂತರ ಕೃಷ್ಣಮಠದಲ್ಲಿ ಸುಮಾರು 2.50 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲಾಗಿರುವ ಚಿನ್ನದ ಹೊದಿಕೆಯ ಸುವರ್ಣ ತೀರ್ಥ ಮಂಟಪ ಮತ್ತು ಕನಕನ ಕಿಂಡಿ ಉದ್ಘಾಟಿಸಲಿದ್ದಾರೆ. ಬಳಿಕ, ಮೋದಿಯವರು ಭಗವದ್ಗೀತೆ ಪಠಣ ಮಾಡುತ್ತಿರುವ 1 ಲಕ್ಷ ಭಕ್ತರೊಂದಿಗೆ ಕೊನೆಯ 10 ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ. ಮಠದ ಬಳಿಯ ವಿಶಾಲ ಗದ್ದೆಯಲ್ಲಿ ಈ ಗಾಯನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ, ಸಭಾ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಮೋದಿಯವರನ್ನು ವಿಶಿಷ್ಟವಾಗಿ ಸನ್ಮಾನಿಸಲಾಗುತ್ತದೆ. ಇದೊಂದು ದಾಖಲೆ ಕಾರ್ಯಕ್ರಮವಾಗಲಿದೆ ಎಂದರು.
ನ.30ರಂದು ಯೋಗಿ ಭೇಟಿ:ನ.30ರಂದು ಸಂತ ಸಂಗಮ ಮತ್ತು ಭಜನೋತ್ಸವ ಕಾರ್ಯಕ್ರಮ ನಡೆಯಲಿದ್ದು, ನಾಡಿನ ವಿವಿಧ ಮಠಾಧಿಪತಿಗಳು ಇದರಲ್ಲಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ವೈಭವದ ಶೋಭಾಯಾತ್ರೆ, 4 ಗಂಟೆಗೆ ಸಾಮೂಹಿಕ ಭಜನೋತ್ಸವ ಆಯೋಜಿಸಲಾಗಿದೆ. ಇದರಲ್ಲಿ ಯೋಗಿ ಭಾಗವಹಿಸಲಿದ್ದಾರೆ. ಜೊತೆಗೆ, ರಾಜ್ಯ ಮತ್ತು ರಾಷ್ಟ್ರ ನಾಯಕರು ಕೂಡ ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
;Resize=(128,128))
;Resize=(128,128))
;Resize=(128,128))