ಕರ್ನಾಟಕ ಕಾಂಗ್ರೆಸ್ಸಿನ ಪಾಪಕ್ಕೆ ಈ ಬಾರಿ ಶಿಕ್ಷೆ ನೀಡಿ: ಮೋದಿ

| Published : Apr 29 2024, 01:31 AM IST / Updated: Apr 29 2024, 05:25 AM IST

ಕರ್ನಾಟಕ ಕಾಂಗ್ರೆಸ್ಸಿನ ಪಾಪಕ್ಕೆ ಈ ಬಾರಿ ಶಿಕ್ಷೆ ನೀಡಿ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ಮೋದಿ ಈ ಬಾರಿ ಕಾಂಗ್ರೆಸ್‌ ಮಾಡಿರುವ ಪಾಪಕೃತ್ಯಗಳಿಗೆ ಶಿಕ್ಷೆ ನೀಡಿ ಎಂದು ರಾಜ್ಯದ ಜನತೆಯಲ್ಲಿ ಪ್ರಾರ್ಥಿಸಿ ಹಲವು ಕಡೆ ಮತಯಾಚನೆ ಮಾಡಿದರು

 ಬೆಳಗಾವಿ/ಶಿರಸಿ/ದಾವಣಗೆರೆ/ಹೊಸಪೇಟೆ :  ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೋಮುಗಲಭೆ, ಬಾಂಬ್ ಸ್ಫೋಟದಂತಹ ಪ್ರಕರಣಗಳು ಹೆಚ್ಚುತ್ತಿವೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಯಿತು. ಚಿಕ್ಕೋಡಿಯಲ್ಲಿ ಜೈನಮುನಿಯ ಹತ್ಯೆಯಾಯಿತು. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ನಡೆದು, ಇಡೀ ದೇಶವೇ ಆತಂಕದಿಂದ ರಾಜ್ಯವನ್ನು ನೋಡುವಂತಾಯತು. ಕರ್ನಾಟಕ ಕಾಂಗ್ರೆಸ್‌ ನ ಈ ಪಾಪಗಳಿಗೆ ಈ ಚುನಾವಣೆಯಲ್ಲಿ ತಕ್ಕ ಶಿಕ್ಷೆ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೇ7ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕೈಗೊಂಡಿರುವ ಮೋದಿ, ಭಾನುವಾರ ಬೆಳಗಾವಿ, ಶಿರಸಿ, ದಾವಣಗೆರೆ ಹಾಗೂ ಹೊಸಪೇಟೆಗಳಲ್ಲಿ ಬೃಹತ್‌ ಸಮಾವೇಶ ನಡೆಸಿ, ಬಿಜೆಪಿ ಪರ ಪ್ರಚಾರ ನಡೆಸಿದರು.

ಶನಿವಾರ ರಾತ್ರಿಯೇ ಬೆಳಗಾವಿಗೆ ಆಗಮಿಸಿದ್ದ ಮೋದಿ, ಭಾನುವಾರ ಬೆಳಗ್ಗೆ ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಿ, ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳ ಚುನಾವಣಾ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು. ಬಳಿಕ, 10.45ಕ್ಕೆ ನಗರದ ಮಾಲಿನಿ ಸಿಟಿ ಮೈದಾನಕ್ಕೆ ಆಗಮಿಸಿದ ಮೋದಿ, ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಬಳಿಕ, ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರ ಭಾಷಣ ಮಾಡಿದ ಮೋದಿ, ಕಾಂಗ್ರೆಸ್‌ನವರು ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮವನ್ನೇ ಬಹಿಷ್ಕರಿಸುವ ಮೂಲಕ ಹಿಂದೂಗಳಿಗೆ ಅವಮಾನ ಮಾಡಿದರು, ಕರ್ನಾಟಕದ ಜನ ಇವರನ್ನು ತಿರಸ್ಕರಿಸಬೇಕು ಎಂದರು.

ಬಳಿಕ, ದಾವಣಗೆರೆಯ ಜಿಎಂಐಟಿ ಮೈದಾನಕ್ಕೆ ಆಗಮಿಸಿದ ಮೋದಿಗೆ ಅಡಕೆಯ ಟೋಪಿ ತೊಡಿಸಿ, ಲಂಬಾಣಿ ಸಮುದಾಯದ ಕರಕುಶಲ ಕಸೂತಿಯ ಶಾಲು ಹೊದಿಸಿ, ಹರಿಹರದ ಹರಿಹರೇಶ್ವರ ದೇವರ ಫೋಟೊ ನೀಡಿ ಗೌರವಿಸಲಾಯಿತು. ಸಮಾವೇಶದಲ್ಲಿ ಮಾತನಾಡಿದ ಮೋದಿ, ಹಾವೇರಿ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. ಬಳಿಕ, ಹೊಸಪೇಟೆಯ ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ ಮೋದಿ, ತಮ್ಮ ಪ್ರಚಾರ ಭಾಷಣದಲ್ಲಿ ಹಂಪಿಯ ಆಂಜನೇಯ, ವಿರೂಪಾಕ್ಷ, ವಿಜಯ ವಿಠ್ಠಲ ದೇವರುಗಳನ್ನು ಸ್ಮರಿಸಿ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚಿಸಿದರು.

ರಾತ್ರಿ ಹೊಸಪೇಟೆಯ ರಾಯಲ್‌ ಆರ್ಕೇಡ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದು, ಸೋಮವಾರ ಬಾಗಲಕೋಟೆಗೆ ತೆರಳಲಿದ್ದಾರೆ.