ಸಂವಿಧಾನಕ್ಕೆ ವಿರುದ್ಧವಾಗಿ ಪ್ರಧಾನಿ ಮೋದಿ ಆಡಳಿತ: ಸಿದ್ದರಾಮಯ್ಯ ವಾಗ್ದಾಳಿ

| Published : Apr 30 2024, 02:13 AM IST

ಸಂವಿಧಾನಕ್ಕೆ ವಿರುದ್ಧವಾಗಿ ಪ್ರಧಾನಿ ಮೋದಿ ಆಡಳಿತ: ಸಿದ್ದರಾಮಯ್ಯ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದಲ್ಲಿ ಆಧಿಕಾರ ನಡೆಸಿರುವ ಪ್ರಧಾನಿ ಮೋದಿ ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ನಡೆಸಿದರು. ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದರು.

ಲೋಕಸಭಾ ಚುನಾವಣಾ ಪ್ರಚಾರಾರ್ಥ ಕುಷ್ಟಗಿಯಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶ

ರಾಜ್ಯದಲ್ಲಿ ಬಿಜೆಪಿ ಪಡೆದ 40 ಪರ್ಸೆಟೆಂಜ್ ತನಿಖೆ । ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ ಇದ್ದಂತೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೇಂದ್ರದಲ್ಲಿ ಆಧಿಕಾರ ನಡೆಸಿರುವ ಪ್ರಧಾನಿ ಮೋದಿ ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ನಡೆಸಿದರು. ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಜಿಲ್ಲೆಯ ಕುಷ್ಟಗಿ ನಗರದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಜರುಗಿದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿ, ಸಂವಿಧಾನ ಉಳಿಸುವುದು, ಮೀಸಲಾತಿ ನೀಡುವವರು ಕಾಂಗ್ರೆಸ್‌ನವರು ಮಾತ್ರ. ಈ ಹಿಂದೆ ಮೀಸಲಾತಿ ನೀಡಿದಾಗ ವಿರೋಧ ಮಾಡಿದ್ದು ಬಿಜೆಪಿಯವರು‌. ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ ಇದ್ದಂತೆ ಎಂದರು.

ನೀವು ಆಶೀರ್ವಾದ ಮಾಡಿದ ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ೧೩೬ ಸ್ಥಾನ ಗೆದ್ದಿದ್ದೇವೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲಿಲ್ಲ.‌ ಕುಮಾರಸ್ವಾಮಿ ಸಿಎಂ ಇದ್ದಾಗಲೂ ಏನೂ ಮಾಡಲಿಲ್ಲ. ‌ಬಿಜೆಪಿಯಲ್ಲಿ ಇಬ್ಬರು ಮುಖ್ಯಮಂತ್ರಿ ಆದರೂ ಏನು ಮಾಡಲು ಆಗಲಿಲ್ಲ. ಗುತ್ತಿಗೆದಾರರು ೪೦ ಪರ್ಸಟೆಂಜ್ ಸರ್ಕಾರ ಎಂದು ಆರೋಪಿಸಿದರು.

ಈ ಹಿಂದಿನ ಲೂಟಿಯನ್ನು ತನಿಖೆ ಮಾಡಲು ಅಧಿಕಾರಕ್ಕೆ ಬಂದ ಮೇಲೆ ಆಯೋಗ ರಚಿಸಿದ್ದೇವೆ. ಕಠಿಣ ಕ್ರಮ ಕೈಗೊಂಡು ರಾಜ್ಯ ರಕ್ಷಣೆ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ ಮಾಡಿದ ದೊಡ್ಡ ಅಪರಾಧ ಪರ್ಸಟೆಂಜ್ ತೆಗೆದುಕೊಂಡಿದ್ದು ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿತು. ಜನಸಾಮಾನ್ಯರ ಬದುಕು ದುಸ್ತರವಾಯಿತು. ಇಂತಹ ಸಂದರ್ಭದಲ್ಲಿ ರಾಜ್ಯದ ಚುನಾವಣೆ ಬಂದಾಗ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಜಾರಿ ಮಾಡಿದ್ದೇವೆ. ಈ ಮೂಲಕ ನುಡಿದಂತೆ ನಡೆದಿದ್ದೇವೆ.‌ ಐದು ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿ‌ ಮಾಡಿದ್ದೇವೆ. ಇನ್ನೂರು ಕೋಟಿ ಮಹಿಳೆಯರು ಉಚಿತ ಬಸ್‌ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮ ನೀಡಿದ್ದೇವೆ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಯಡಿಯೂರಪ್ಪ ಕಡಿಮೆ ಮಾಡಿದರು. ಹೀಗಾಗಿ ನಾವೇ ಅಧಿಕಾರಕ್ಕೆ ಬಂದ ತಕ್ಷಣ ಜಾರಿ ಮಾಡಿದ್ದೇವೆ. ಈ ಯೋಜನೆ ಜಾರಿ ಮಾಡುವುದಕ್ಕೂ ಕೇಂದ್ರ ಅಡ್ಡಿ ಮಾಡಿತು. ಬಿಜೆಪಿ ಮಾಡಿದ ದೊಡ್ಡ ದ್ರೋಹ ಇದಾಗಿದೆ.‌ ಕೇಂದ್ರ ಅಕ್ಕಿ ಕೊಡದಿದ್ದರಿಂದ ಹಣ ನೀಡಬೇಕಾಯಿತು. ಒಂದೂವರೆ ಕೋಟಿ ಕುಟುಂಬಕ್ಕೆ ಹಣ ಕೊಡ್ತಾ ಇದ್ದೇವೆ. ಹಾಗೆ ಗೃಹ ಜ್ಯೋತಿ ಚಾಲನೆಯಲ್ಲಿದೆ. 200 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಗೃಹಲಕ್ಷ್ಮೀ ಯೋಜನೆಯಲ್ಲಿ ೧.೨೦ ಕೋಟಿ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರುಪಾಯಿ ನೀಡುತ್ತಿದ್ದೇವೆ. ಯುವ ನಿಧಿ ಪ್ರಾರಂಭಿಸಿದ್ದೇವೆ ಎಂದರು.

ಗ್ಯಾರಂಟಿ ಯೋಜನೆ ನಿಲ್ಲಲ್ಲ:

ಬಿಜೆಪಿ ಅವರು ಗ್ಯಾರಂಟಿ ಜಾರಿ ಮಾಡಲ್ಲ ಅಂದಿದ್ದರು.‌ ಈಗ ಲೋಕಸಭಾ ಚುನಾವಣೆ ನಂತರ ನಿಲ್ಲಿಸಿಬಿಡ್ತಾರೆ ಅಂತಾರೆ. ಸುಳ್ಳು ಹೇಳುತ್ತಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ. ಅದರ ಜತೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಎಲ್ಲವನ್ನು ಜಾರಿ ಮಾಡುತ್ತೇವೆ. ಬಿಜೆಪಿಯವರು ಹದಿನೈದು ಲಕ್ಷ ರು. ಹಾಕಿದರಾ? ಇಲ್ಲ, ಎರಡು ಕೋಟಿ ಉದ್ಯೋಗ ಕೊಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ ಎಂದು ದೂರಿದರು.

ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ಒಂದು‌ ಲಕ್ಷ ರುಪಾಯಿ ನೀಡುತ್ತೇವೆ. ನಾವು ಕೊಡುವ ₹೨೪ ಸಾವಿರ ಹಾಗೂ ಕೇಂದ್ರದ್ದು ಸೇರಿ ಒಂದು ಲಕ್ಷ ಇಪ್ಪತ್ನಾಲ್ಕು ಸಾವಿರ ರುಪಾಯಿ ಆಗುತ್ತದೆ. ರೈತರ ಎಲ್ಲ ಸಾಲ ಮನ್ನಾ ಮಾಡುತ್ತೇವೆ. ಮೋದಿ ಅವರು ರೈತರ ಸಾಲ ಮನ್ನಾ ಮಾಡಲಿಲ್ಲ. ಪ್ರವಾಹ ಬಂದಾಗ ಬರಲಿಲ್ಲ.‌ ಈಗ ಚುನಾವಣೆ ಬಂದಾಗ ಬರ್ತಾರೆ. ಅವರಿಗೆ ಪಾಠ ಕಲಿಸುವ ಶಕ್ತಿ ನಿಮ್ಮ ಕೈಯಲ್ಲಿದೆ. ಬಂಡವಾಳ ಶಾಯಿಗಳ ಹದಿನಾರು ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಾಲ ಮನ್ನಾ ಮಾಡುತ್ತೇವೆ.‌ ಎಂಎಸ್‌ಪಿ ಜಾರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಚಿವ ಬೈರತಿ ಸುರೇಶ, ಸಂಗಣ್ಣ ಕರಡಿ, ಹಂಪನಗೌಡ ಬಾದರ್ಲಿ, ರಾಘವೇಂದ್ರ ಹಿಟ್ನಾಳ, ಶರಣೇಗೌಡ, ಬಸನಗೌಡ ತುರುವಿಹಾಳ, ಹಸನ್‌ಸಾಬ್‌ ದೋಟಿಹಾಳ, ಅಮರೇಶ ಕರಡಿ, ವಿ.ಆರ್‌. ಸುದರ್ಶನ, ಮಾಲತಿ ನಾಯಕ ಇದ್ದರು. ಅಮರೇಗೌಡ ಭಯ್ಯಾಪುರ ಅವರು ಸ್ವಾಗತಿಸಿದರು.